ಮಾತುಕತೆ ಹಂತಕ್ಕೆ ಹೋಗಿದ್ದ ಐಶ್ವರ್ಯಾ ರೈ ನಟಿಸಬೇಕಿದ್ದ 2 ಕನ್ನಡ ಚಿತ್ರಗಳು ಯಾವುವು?
ಮಂಗಳೂರು ಮೂಲದ ಐಶ್ವರ್ಯ ರೈ ಕನ್ನಡದಲ್ಲಿ ಮಾತ್ರ ನಟಿಸಲೇ ಇಲ್ಲ ಎನ್ನುವುದು ವಿಪರ್ಯಾಸ. ವಿಶ್ವಸುಂದರಿಯಾಗಿ ಕಿರೀಟ ಅಲಂಕರಿಸಿದ ಚೆಲುವೆ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆಕೆಯನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಕೂಡ ನಡೆದಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ.
ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಇತ್ತೀಚೆಗೆ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳ ಬಳಿಕ ಯಾವುದೇ ಸಿನಿಮಾ ಆಕೆ ಒಪ್ಪಿಕೊಳ್ಳಲಿಲ್ಲ. ಅಂದಹಾಗೆ 1997ರಲ್ಲಿ ಮಣಿರತ್ನಂ ನಿರ್ದೇಶನದ 'ಇರುವರ್' ಚಿತ್ರದ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದರು. 'ದೇವದಾಸ್', 'ಧೂಮ್- 2', 'ಮೊಹಬ್ಬತಿನ್', 'ಜೋಧಾ ಅಕ್ಬರ್', 'ಗುರು', 'ಎಂದಿರನ್'(ರೋಬೊ) ರೀತಿ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು.

ಐಶ್ವರ್ಯ ರೈ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಪ್ರಯತ್ನಗಳು ಆಗಾಗ್ಗೆ ನಡೀತಿತ್ತು. ಆದರೆ ಯಾರೂ ಕೂಡ ಯಶಸ್ವಿ ಆಗಲಿಲ್ಲ. ಪರಭಾಷೆಯ ಕ್ರೇಜಿ ನಟಿಯರನ್ನು ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಐಶ್ ವಿಶ್ವಸುಂದರಿ ಪಟ್ಟ ಅಲಂಕರಿಸುವ ಮುನ್ನ ಸಿನಿಮಾಗಳಲ್ಲಿ ನಟಿಸುವಂತೆ ರವಿಚಂದ್ರನ್ ಪತ್ರ ಬರೆದಿದ್ದರಂತೆ. ಈ ವಿಚಾರವನ್ನು 'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ಹೇಳಿಕೊಂಡಿದ್ದರು.
"ಐಶ್ವರ್ಯ ರೈಗೆ ಮೊದಲು ಸಿನಿಮಾ ಮಾಡುವಂತೆ ಪತ್ರ ಬರೆದವನು ನಾನೇ. ಆಕೆ ಆಗಿನ್ನು ಮಿಸ್ ವರ್ಲ್ಡ್ ಆಗಿರಲಿಲ್ಲ. ಅವಳ ಫೋಟೊ ನೋಡಿ ಸಿನಿಮಾದಲ್ಲಿ ನಟಿಸೋಕೆ ಸೂಕ್ತವಾಗಿರುತ್ತಾರೆ ಎಂದು ಪತ್ರ ಬರೆದಿದ್ದೆ. ಆದರೆ ಆಗ ಆಕೆ ನಟಿಸೋಕೆ ಇಷ್ಟಪಡುತ್ತಿರಲಿಲ್ಲ. ಇನ್ನು ಮಿಸ್ ವರ್ಲ್ಡ್ ಆಗಿ ಆಕೆ ಗೆದ್ದು ಬಂದಮೇಲೆ ರಾಜ್ಯದಲ್ಲಿ ಮೊದಲು ಸನ್ಮಾನಿಸಿದ್ದು ಕೂಡ ನಾನೇ" ಎಂದು ವಿವರಿಸಿದ್ದರು.

ಇನ್ನು 'ಉಪೇಂದ್ರ' ಚಿತ್ರಕ್ಕೆ ಐಶ್ವರ್ಯ ರೈ ಅವರನ್ನು ನಾಯಕಿಯಾಗಿ ಕರೆತರಲು ಉಪ್ಪಿ ಮನಸ್ಸು ಮಾಡಿದ್ದರು. ಆ ಚಿತ್ರದಲ್ಲಿ ರವೀನಾ ಟಂಡನ್ ಮಾಡಿದ್ದ ಕೀರ್ತಿ ಪಾತ್ರಕ್ಕೆ ಯಶ್ ಸೂಕ್ತ ಎಂದು ಭಾವಿಸಿದ್ದರು. ಆಕೆಯನ್ನು ಸಂಪರ್ಕಿಸುವ ಪ್ರಯತ್ನ ಕೂಡ ನಡೆದಿತ್ತು. ಅದು ಐಶ್ ಚಿತ್ರರಂಗಕ್ಕೆ ಬಂದಿದ್ದ ಹೊಸತು. ಡೇಟ್ಸ್ ಸಿಕ್ಕಿರಲಿಲ್ಲ. ಇಲ್ಲದೇ ಹೋಗಿದ್ದರೆ ಮಸ್ತ್ ಮಸ್ತ್ ಹುಡುಗಿಯಾಗಿ ಐಶ್ವರ್ಯ ರೈ ಹೆಜ್ಜೆ ಹಾಕಬೇಕಿತ್ತು.
'ಉಪೇಂದ್ರ' ಬಳಿಕ 'ಸೂಪರ್' ಚಿತ್ರಕ್ಕೆ ರಿಯಲ್ ಸ್ಟಾರ್ ಆಕ್ಷನ್ ಕಟ್ ಹೇಳಿ ನಟಿಸಿದ್ದರು. ಆ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಮಿಂಚಿದ್ದರು. ಅಷ್ಟರಲ್ಲಾಗಲೇ ಐಶ್ವರ್ಯ ರೈ ಬಾಲಿವುಡ್ ಅಂಗಳದಲ್ಲಿ ರಾಣಿಯಂತೆ ಮೆರೆಯುತ್ತಿದ್ದರು. 'ಸೂಪರ್' ಚಿತ್ರಕ್ಕೆ ಕೂಡ ನಾಯಕಿಯಾಗಿ ಐಶ್ ಅವರನ್ನು ಕರೆತರುವ ಪ್ರಯತ್ನ ನಡೆದಿತ್ತು. ಆದರೆ ಅದೂ ಕೈಗೂಡಲಿಲ್ಲ.
ನಟನೆಯಿಂದ ದೂರಾಗಿರುವ ಐಶ್ವರ್ಯ ಕುಟುಂಬಕ್ಕೆ ಹೆಚ್ಚು ಸಮಯ ಕೊಡುತ್ತಿದ್ದಾರೆ. ಇತ್ತೀಚೆಗೆ ಅಭಿಷೇಕ್ ಹಾಗೂ ಐಶ್ವರ್ಯ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಊಹಾಪೋಹ ಹರಿದಾಡಿತ್ತು. ಆದರೆ ಅದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗಿದೆ. ಐಶ್ವರ್ಯ ರೈ ಇಂದು(ನವೆಂಬರ್ 1) 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಐಶ್ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಬಯಕೆ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತದೆ. ಬಾಲಿವುಡ್ ಸ್ಟಾರ್ ನಟ, ನಟಿಯರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಳ್ಳೆ ಪಾತ್ರ ಸಿದ್ಧವಾಗಿ ಐಶ್ವರ್ಯ ರೈ ಅವರನ್ನು ಯಾರಾದರೂ ಒಪ್ಪಿಸಿದರೆ ಆಕೆ ಕನ್ನಡದಲ್ಲಿ ನಟಿಸುವ ಅವಕಾಶ ಇದೆ. ನೋಡೋಣ ಕನ್ನಡ ಫಿಲ್ಮ್ ಮೇಕರ್ಸ್ ಯಾರಾದರೂ ಅಂತಹ ಪ್ರಯತ್ನ ಮಾಡುತ್ತಾರಾ?


Click it and Unblock the Notifications











