"ನನ್ನಿಂದಲೇ 'ನಾಟು ನಾಟು' ಗೀತೆಗೆ ಆಸ್ಕರ್ ಸಿಕ್ಕಿದ್ದು" ಎಂದ ಅಜಯ್ ದೇವಗನ್: ವಿಡಿಯೋ ವೈರಲ್
ಬಾಲಿವುಡ್ ನಟ ಅಜಯ್ ದೇವಗನ್ 'ಭೋಳಾ' ಸಿನಿಮಾ ಮೂಲಕ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸದ್ಯ ಸಿನಿಮಾ ಪ್ರಮೋಷನ್‌ನಲ್ಲಿ ದೇವಗನ್ ಫುಲ್ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲೂ ಸೀತಾ ರಾಮರಾಜು ತಂದೆ ಪಾತ್ರದಲ್ಲಿ ಅಜಯ್ ನಟಿಸಿದ್ದರು. ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿರುವ "ನನ್ನಿಂದಲೇ ಆಸ್ಕರ್ ಬಂತು" ಎಂದಿದ್ದಾರೆ.
ಇವತ್ತಿಗೆ ಸರಿಯಾಗಿ ವರ್ಷದ ಹಿಂದೆ 'RRR' ಸಿನಿಮಾ ತೆರೆಗಪ್ಪಳಿಸಿತ್ತು. ಕೊರೊನಾ ಆರ್ಭಟದ ತಣ್ಣಗಾದ ಮೇಲೆ ತೆರೆಗಪ್ಪಳಿಸಿದ ಬಹುದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ಇದು. ಜಕ್ಕಣ್ಣನ ಟೇಕಿಂಗ್, ತಾರಕ್- ಚರಣ್ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದು ಎಲ್ಲರ ಹುಬ್ಬೇರಿಸಿತ್ತು.

'ಭೋಳಾ' ಸಿನಿಮಾ ಪ್ರಚಾರಕ್ಕಾಗಿ ಅಜಯ್ ದೇವಗನ್ ಹಾಗೂ ಟಬು 'ಕಪಿಲ್ ಶರ್ಮಾ' ಶೋನಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಶೋನಲ್ಲಿ ಕಪಿಲ್ ಶರ್ಮಾ, ಅಜಯ್ ಸರ್ ನಿಮ್ಮ 'RRR' ಚಿತ್ರಕ್ಕೆ ಆಸ್ಕರ್ ಸಿಕ್ಕಿದ್ದಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಕೂಡಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಅಜಯ್ ನನ್ನಂದಲೇ ಆಸ್ಕರ್ ಸಿಕ್ತು ಎಂದಿದ್ದಾರೆ. ಇದನ್ನು ಕೇಳಿ ಒಂದು ಕ್ಷಣ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದರು. ಅಜಯ್ ದೇವಗನ್‌ಗೂ 'ನಾಟು ನಾಟು' ಗೀತೆಗೂ ಏನ್ ಸಂಬಂಧ? ಅವ್ರು ಹೀಗೆ ಯಾಕೆ ಹೇಳಿದ್ದರು ಎಂದು ಕನ್ಫ್ಯೂಸ್ ಆಗಿದ್ದರು.
ಎಂ. ಎಂ ಕೀರವಾಣಿ ಸಂಗೀತದ 'ನಾಟು ನಾಟು' ಗೀತೆಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದರು. ಪ್ರೇಮ್ ರಕ್ಷಿತ್ ಕೊರಿಯೋಗ್ರಫಿ ಮಾಡಿದ್ದರು. ತಾರಕ್- ಚರಣ್ ಸಿಕ್ಕಾಪಟ್ಟೆ ಕಷ್ಟುಬಿದ್ದು ಡ್ಯಾನ್ಸ್ ಮೂವ್ಸ್ ಸಿಂಕ್ ಮಾಡಿ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದರು. ಅಸಲಿಗೆ ಈ ಹಾಡಿನಲ್ಲಿ ಅಜಯ್ ದೇವಗನ್ ಇರಲೇ ಇಲ್ಲ. ಚಿತ್ರದ ಫ್ಲಾಶ್‌ಬ್ಯಾಕ್‌ನಲ್ಲಿ ಸೀತಾರಾಮ ರಾಜು ತಂದೆ ಅಲ್ಲೂರಿ ವೆಂಕಟರಾಮ ರಾಜು ಆಗಿ ನಟಿಸಿದ್ದರು. ಹಾಗಾಗಿ 'ನಾಟು ನಾಟು' ಗೀತೆಗೆ ನನ್ನಿಂದಲೇ ಆಸ್ಕರ್ ಬಂತು ಎಂದು ಯಾವ ಅರ್ಥದಲ್ಲಿ ಅಜಯ್ ಹೇಳ್ತಿದ್ದಾರೆ ಎಂದು ಅಲ್ಲಿದ್ದವರು ತಲೆ ಕಡೆಇಸಿಕೊಂಡಿದ್ದರು.
ಅಜಯ್ ಮಾತು ಕೇಳಿ ಶಾಕ್ ಆದ ಕಪಿಲ್ ಶರ್ಮಾ ಹೇಗೆ ಎಂದು ಕೇಳಿದ್ದಾರೆ. ಮಾತು ಮುಂದುವರೆಸಿರುವ ಅಜಯ್ ದೇವಗನ್ "ನಾಟು ನಾಟು ಸಾಂಗ್ ಆಸ್ಕರ್ ಗೆಲ್ಲೋಕೆ ನಾನೇ ಕಾರಣ, ಏಕೆಂದರೆ ನಾನು ಆ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿಲ್ಲವಲ್ಲ" ಎಂದು ಜೋಕ್ ಮಾಡಿದ್ದಾರೆ. ಒಂದು ವೇಳೆ ನಾನೇನಾದರೂ ಡ್ಯಾನ್ಸ್ ಮಾಡಿದ್ದರೆ ಖಂಡಿತ ಆಸ್ಕರ್ ಸಿಗುತ್ತಿರಲಿಲ್ಲ, ನನಗೆ ಸರಿಯಾಗಿ ಡ್ಯಾನ್ಸ್ ಮಾಡೋಕೆ ಬರೊಲ್ಲ ಎಂದು ಈ ಮೂಲಕ ಪರೋಕ್ಷವಾಗಿ ಬಾಲಿವುಡ್ ನಟ ಹೇಳಿದ್ದಾರೆ. ಇದನ್ನು ಕೇಳಿ ಶೋನಲ್ಲಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಅಜಯ್ ಜೋಕ್ ಕೇಳಿದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. "ಬಾಲಿವುಡ್‌ನಲ್ಲಿ ಶಾರುಕ್ ಖಾನ್ ಬಿಟ್ಟರೆ ಇಷ್ಟು ಸೆನ್ಸ್ ಆಫ್ ಹ್ಯೂಮರ್ ಅಜಯ್‌ಗೆ ಮಾತ್ರ ಇರೋದು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಒಂದು ವೇಳೆ ಇದೇ ಹಾಡಿಗೆ ಸನ್ನಿ ಡಿಯೋಲ್ ಡ್ಯಾನ್ಸ್ ಮಾಡಿದ್ದರೆ ಹೇಗಿರುತ್ತಿತ್ತು" ಮತ್ತೊಬ್ಬರು ಬರೆದಿದ್ದಾರೆ. 'RRR' ಸಿನಿಮಾ ವರ್ಷ ಪೂರೈಸಿದ ಸಂಭ್ರಮವನ್ನು ಸಿನಿರಸಿಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜಪಾನ್‌ನಲ್ಲಿ ಸಿನಿಮಾ ಇನ್ನು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೌಳಿ ಅಂಡ್ ಟೀಂ ಸಿನಿಮಾ ಸೀಕ್ವೆಲ್‌ಗೆ ಪ್ಲ್ಯಾನ್ ಮಾಡ್ತಿದೆ.


Click it and Unblock the Notifications











