ಅಜಯ್ ದೇವಗನ್ VS ಅಲ್ಲು ಅರ್ಜುನ್ ; ಮುಂದಡಿ ಇಟ್ಟ ಬಾಲಿವುಡ್‌ನ ಸಿಂಗಂ...!
ಅಜಯ್ ದೇವಗನ್ - ಅಲ್ಲು ಅರ್ಜುನ್ ಈ ಸ್ವಾತಂತ್ರೋತ್ಸವದ ಪ್ರಯುಕ್ತ, ನಾನಾ - ನೀನಾ ಎಂದು ಸವಾಲು ಹಾಕಲಿದ್ದಾರೆ ಎನ್ನುವ ವಿಚಾರ ಕೇಳಿ ಬಣ್ಣದ ಲೋಕ ಬೆಚ್ಚಿ ಬಿದ್ದಿತ್ತು. ಯಾಕೆಂದರೆ ಇಬ್ಬರು ಸಾಮಾನ್ಯರಲ್ಲ. ಅಸಾಮಾನ್ಯರು.
ಇನ್ನೂ ಇಬ್ಬರ ಅಭಿಮಾನಿ ಬಳಗ ದೊಡ್ಡದು. ಉತ್ತರದಿಂದ.. ದಕ್ಷಿಣದವರೆಗೆ ಅಜಯ್ ದೇವಗನ್ ಹೆಸರು ಚಿರಪರಿಚಿತ. ಅಲ್ಲು ಅರ್ಜುನ್ ಹೆಸರು ಕೂಡ ದಕ್ಷಿಣದಿಂದ ಉತ್ತರದವರೆಗೆ ಪ್ರಖ್ಯಾತ. ಎಲ್ಲಕ್ಕಿಂತ ಹೆಚ್ಚಾಗಿ ಸಿಂಗಂ ಅಗೇನ್ ಮತ್ತು ಪುಷ್ಪ 02.. ಇವೆರಡು ಕಮರ್ಷಿಯಲ್ ಖಾವಲಿಯಲ್ಲಿ ರೆಡಿಯಾಗ್ತಿರುವ ಸಿನಿಮಾಗಳು. ಈ ಕಾರಣಕ್ಕೆ ವ್ಯಾಪಾರಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಹಣದ ಹೊಳೆ ಒಂದೇ ದಿಕ್ಕಿನಲ್ಲಿ ಹರಿಯದೇ, ಎರಡು ದಿಕ್ಕಿನಲ್ಲಿಯೂ ಹರಿಯಲಿದೆ ಅನ್ನುವ ಆತಂಕ ಅನೇಕರಲ್ಲಿತ್ತು.

ಆದರೆ ಈಗ ಈ ಸುದ್ದಿ ಕೇಳಿ ಆತಂಕಕ್ಕೀಡಾದವರ ಆತಂಕ ದೂರವಾಗಿ, ಆತ್ಮವಿಶ್ವಾಸ ಹೆಚ್ಚಾಗುವಂತಹ ಸುದ್ದಿಯೊಂದು ಮುಂಬೈನಲ್ಲಿ ಕೇಳಿ ಬರುತ್ತಿದೆ. ಸಿಂಗಂ ಅಗೇನ್ ಚಿತ್ರದ ಬಿಡುಗಡೆಯ ದಿನಾಂಕ ಮುಂದಕ್ಕೋಗಿದೆ. ಚಿತ್ರ ಆಗಸ್ಟ್ 15ರ ಬದಲು ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.
ಹೌದು .. ಹಗಲು ರಾತ್ರಿಯನ್ನ ಒಂದು ಮಾಡಿದರೂ, ಸಿಂಗಂ ಅಗೇನ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗ್ತಿಲ್ಲ. ಇನ್ನೂ ಸಿಂಗಂ.. ಬಾಲಿವುಡ್ ನ ದೊಡ್ಡ ಹೆಸರು. ದೊಡ್ಡ ಫ್ರಾಂಚೈಸಿ. ಈ ಕಾರಣಕ್ಕೆ ಹರಿಬಿರಿ ಮಾಡಲು ಡೈರೆಕ್ಟರ್ ರೊಹೀತ್ ಶೆಟ್ಟಿಗೆ ಮನಸಿಲ್ಲ. ಅಜಯ್ ದೇವಗನ್ ಕೂಡ ಇದಕ್ಕೆ ಒಪ್ಪುತ್ತಿಲ್ಲ. ನಿಧಾನವಾದರೂ ಪರವಾಗಿಲ್ಲ ಅಂದುಕೊಂಡತೆ ಸಿನಿಮಾ ಮೂಡಿ ಬರಬೇಕು ಅನ್ನುವುದು ಇಬ್ಬರ ಅಭಿಪ್ರಾಯ ಕೂಡ ಹೌದು.

ಹೀಗಾಗಿಯೇ ಸಿಂಗಂ ಅಗೇನ್ ಚಿತ್ರದ ಬಿಡುಗಡೆಯನ್ನ ದೀಪಾವಳಿಗೆ ಮುಂದೂಡುವ ಆಲೋಚನೆಯನ್ನ ಇಬ್ಬರು ಮಾಡಿದ್ದಾರೆ ಎಂದು ಬಾಲಿವುಡ್ ಪಂಡಿತರು ಸದ್ಯಕ್ಕೆ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ದೀಪಾವಳಿ ಅಜಯ್ ದೇವಗನ್ ಹಾಗೂ ರೊಹೀತ್ ಶೆಟ್ಟಿ ಇಬ್ಬರ ಪಾಲಿಗೆ ತುಂಬಾನೇ ಲಕ್ಕಿ. ದೀಪಾವಳಿಯಂದು ಇಬ್ಬರು ಮನರಂಜನೆಯ ಪಟಾಕಿ ಹಚ್ಚಿದಾಗೆಲ್ಲ ಗಲ್ಲಾಪೆಟ್ಟಿಗೆ ಗಡಗಡ ನಡುಗಿದೆ. ಆಗಸ್ಟ್ 15ರಿಂದ ದೀಪಾವಳಿಗೆ ಸಿಂಗಂ ಅಗೇನ್ ಶಿಫ್ಟ್ ಆಗಲು ಇದು ಕೂಡ ಒಂದು ಕಾರಣ ಅನ್ನುವ ಮಾತು ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತಿದೆ.
ಆದರೆ.. ಈ ಮಾತು ಹಾಗೂ ಅಭಿಪ್ರಾಯವನ್ನ ಒಂದು ಬಣ ಒಪ್ಪಲು ತಯಾರಿಲ್ಲ. ಹೀಗಾಗಿಯೇ ಮೊನ್ನೆ ಬಿಡುಗಡೆಯಾದ ಪುಷ್ಟ 2 ಟೀಸರ್ ನೋಡಿ, ಬಾಲಿವುಡ್ ನ ಸಿಂಗಂ ಬೆದರಿದ್ದಾನೆ ಎನ್ನುವ ಮಾತನ್ನ ಈ ಬಣ ಮಾತನಾಡುತ್ತಿದೆ. ಸ್ಟಾರ್ ವಾರ್- ಫ್ಯಾನ್ ವಾರ್ ಎಂಬ ಬೆಂಕಿಗೆ ತುಪ್ಪವನ್ನೂ ಸುರಿಯುತ್ತಿದೆ.

ಅಂದ್ಹಾಗೇ ಸಿಂಗಂ ಅಗೇನ್ ನಲ್ಲಿ ಅಜಯ್ ದೇವಗನ್ ಜೊತೆ ಕರೀನಾ ಕಪೂರ್ ಇದ್ದಾರೆ. ದೀಪಿಕಾ ಪಡುಕೋಣೆ ಕೂಡ ಖಾಕಿ ಹಾಕಿದ್ದಾರೆ. ಟೈಗರ್ ಶ್ರಾಫ್.. ಅರ್ಜುನ್ ಕಪೂರ್ ಹಾಗೂ ರಣ್ವೀರ್ ಸಿಂಗ್ ಕೂಡ ಚಿತ್ರದಲ್ಲಿದ್ದಾರೆ. ಇವರೆಲ್ಲರನ್ನ ಒಂದು ಕಡೆ ಗುಡ್ಡೆ ಹಾಕಿ, ಚಿತ್ರದ ಚಿತ್ರೀಕರಣ ಮಾಡುವುದು ಕೂಡ ಸುಲಭ ಅಲ್ಲ. ಇನ್ನೂ ಪುಷ್ಪ 02 ಸ್ಟಾರ್ ಕಾಸ್ಟ್ ನಿಮಗೆ ಗೊತ್ತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಪಾಸಿಲ್, ಹೀಗೆ ಇಲ್ಲಿಯೂ ಕೂಡ ದೊಡ್ಡ ದೊಡ್ಡವರೇ ಇದ್ದಾರೆ.
ಒಟ್ನಲ್ಲಿ ಸದ್ಯಕ್ಕೆ ಸಿಂಗಂ ಅಗೇನ್ ಈ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿಲ್ಲ. ಬದಲಿಗೆ ದೀಪಾವಳಿಗೆ ಬಿಡುಗಡೆಯಾಗ್ತಿದೆ. ಇನ್ನೂ.. ಪುಷ್ಪ 02 ಕೂಡ, ಆಗಸ್ಟ್ 15ರಂದು ತೆರೆಗೆ ಬರುವುದು ಅನುಮಾನ ಅನ್ನುವ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ನಿಜವಾದರೆ ಈ ಆಗಸ್ಟ್ 15ರಂದು ಪ್ರೇಕ್ಷಕರು ಮನರಂಜನೆಯ ರಸದೌತಣ ವಂಚಿತರಾದಂತೆ ಆಗಲಿದೆ.


Click it and Unblock the Notifications











