ಹಠಾತ್ ಸಾವು, ಕೊ*ಲೆಯ ಶಂಕೆ ; 3 ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ ಖ್ಯಾತ ನಟಿಯ ಕೊನೆಯ ಸಿನಿಮಾ - ಅಭಿಮಾನಿಗಳು ಭಾವುಕ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ.
ಆದರೆ, ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಸಾಧನೆಯ ಶಿಖರಕ್ಕೇರಲೇಬೇಕೆಂಬ ಶಪಥ ಮಾಡಿ ಹಗಲಿರುಳು ಪ್ರಯತ್ನ ಮಾಡಿದರೂ ಕೂಡ ಕೆಲ ಒಮ್ಮೆ ಈ ಪ್ರಯಾಣದಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತಾವೆ. ಇನ್ನೂ ಕೆಲ ಒಮ್ಮೆ ಎಲ್ಲವೂ ಕೂಡಿ ಬಂದಾಗ, ಬದುಕು ಒಂದು ಹಂತಕ್ಕೆ ರೂಪಗೊಳ್ಳುತ್ತಿರುವಾಗ. ವಿಧಿಯ ಆಟ ಬೇರೆಯದ್ದೇ ಆಗಿರುತ್ತೆ. ಇದಕ್ಕೆ ಆಕಾಂಕ್ಷಾ ದುಬೆಯ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು, ಆಕಾಂಕ್ಷಾ ದುಬೆ.. ಭೋಜ್‌ಪುರಿಯ ಬೆಡಗಿ. ಮನೆಯವರ ವಿರೋಧದ ನಡುವೆ ಕನಸೆಂಬ ಕುದುರೆಯನ್ನೇರಿ ಚಿತ್ರರಂಗಕ್ಕೆ ಇವರು ಬಂದಿದ್ದರು. ಕೇವಲ 17ರ ಹರೆಯದಲ್ಲಿಯೇ ''ಮೇರಿ ಜಂಗ್ ಮೇರಾ ಫೈಸ್ಲಾ'' ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಮಿನುಗಿದರು. ಇವರ ಈ ಮೊದಲ ಚಿತ್ರದ ನಾಯಕ ಬೇರೆ ಯಾರು ಅಲ್ಲ. ಬದಲಿಗೆ ಭೋಜ್‌ಪುರಿ ಚಿತ್ರರಂಗದ ಸೂಪರ್ ಸ್ಟಾರ್ ಖೇಸರಿ ಲಾಲ್ ಯಾದವ್.
ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯದ್ಭುತ ಗೆಲುವು ಕಂಡ ಆಕಾಂಕ್ಷಾ ಆ ನಂತರ ''ವೀರೊ ಕೆ ವೀರ್''.. ''ಮುಜ್ಸೆ ಶಾದಿ ಕರೋಗಿ''.. ''ಕಸಮ್ ಪೈದಾ ಕರ್ನೆ ವಾಲೆ ಕಿ 2''.. ''ಫೈಟರ್ ಕಿಂಗ್''.. ಹೀಗೆ ಒಂದಾದ ಮೇಲೊಂದು ಸಿನಿಮಾ ಮಾಡಿದರು. ಅತ್ಯಲ್ಪ ಅವಧಿಯಲ್ಲೇ ಸ್ಟಾರ್ ನಾಯಕಿಯಾಗಿ ಹೊರ ಹೊಮ್ಮಿದರು.
ಇನ್ನು ಇವರ ಚಿತ್ರಕ್ಕೆ ಮಾತ್ರವಲ್ಲ ಇವರ ಆಲ್ಬಂ ಹಾಡುಗಳಿಗೆ ಭೋಜ್‌ಪುರಿ ಪ್ರೇಕ್ಷಕರ ವಲಯದಲ್ಲಿ ಎಲ್ಲಿಲ್ಲದ ಬೇಡಿಕೆ ಇತ್ತು. ಭೋಜ್‌ಪುರಿಯ ಮತ್ತೊಬ್ಬ ಸೂಪರ್ ಸ್ಟಾರ್ ಪವನ್ ಸಿಂಗ್ ಜೊತೆ ಹಲವು ಹಾಡುಗಳಿಗೆ ಇವರು ಹೆಜ್ಜೆ ಹಾಕಿದ್ದರು. ಅದರಲ್ಲಿಯೂ ''ಕಮರ್ ನಂ 1'' ಹಾಡು ಭೋಜ್‌ಪುರಿ ಸಂಗೀತ ಕ್ಷೇತ್ರದಲ್ಲೇ ಹೊಸ ದಾಖಲೆ ಬರೆದಿತ್ತು. ಇದೊಂದೇ ಅಲ್ಲ ಇವರ ಪ್ರತಿಯೊಂದು ಹಾಡು ಯೂಟ್ಯೂಬ್‌ನಲ್ಲಿ ಮಿಲಿಯನ್ ಘಟ್ಟಲೆ ವೀಕ್ಷಣೆ ಪಡೆಯುತ್ತಿದ್ದವು. ಇವರ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಎಕ್ಸ್‌ಪ್ರೆಶನ್ ಕ್ವೀನ್ ಎಂದೇ ಕರೆಯುತ್ತಿದ್ದರು.
ಹೀಗೆ ಖ್ಯಾತಿಯ ಶಿಖರಕ್ಕೇರಿದ ಆಕಾಂಕ್ಷಾ ದುಬೆ, ಮೂರು ವರ್ಷದ ಹಿಂದೆ ಅಂದರೆ 2023ರ ಮಾರ್ಚ್‌ನಲ್ಲಿ ವಾರಣಾಸಿಯ ಹೋಟೆಲ್ ಒಂದರಲ್ಲಿ ಕೇವಲ ತಮ್ಮ 25ರ ಹರೆಯದಲ್ಲಿ ಸತ್ತು ಮಲಗಿದ್ದರು. ಇವತ್ತು ಕೂಡ ಆಕಾಂಕ್ಷಾ ಸತ್ತಿದ್ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆಕಾಂಕ್ಷಾ ಖಿನ್ನತೆಗೆ ಒಳಗಾಗಿದ್ದರು, ಈ ಹಿನ್ನೆಲೆ ಅವರು ಆತ್ಮ*ಹತ್ಯೆ ಮಾಡಿಕೊಂಡರು ಎಂಬ ವಾದ ನಡೆಯುತ್ತಲೇ ಇದೆಯಾದರೂ ಕುಟುಂಬಸ್ಥರ ಪ್ರಕಾರ ಇದೊಂದು ಕೊ*ಲೆ.

ಹೀಗಾಗಿ ಅಂದಿನಿಂದ ಸಿಬಿಐ ತನಿಖೆಗೆ ಒತ್ತಾಯಿಸುತ್ತಲೇ ಇದೆ ಆಕಾಂಕ್ಷಾ ಅವರ ಕುಟುಂಬ. ಇತ್ತೀಚೆಗಷ್ಟೇ ಇವರ ಹೋರಾಟದ ಧ್ವನಿಗೆ ಮನ್ನಣೆ ಸಿಕ್ಕಿದ್ದು, ನ್ಯಾಯಾಲಯ ಸಿಬಿಯ ತನಿಖೆಗೆ ಆದೇಶ ಮಾಡಿದೆ. ಇನ್ನು ಆಕಾಂಕ್ಷಾ ಅಕಾಲಿಕ ನಿಧನಕ್ಕೀಡಾದಾಗ ಹಲವರು ಆಕಾಂಕ್ಷಾ ಅವರ ಆಪ್ತ ಸ್ನೇಹಿತ ಗಾಯಕ ಮತ್ತು ನಾಯಕ ಸಮೀರ್ ಸಿಂಗ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಕೂಡ ಸಮೀರ್ ಸಿಂಗ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದರು. ಇದೆಲ್ಲದರಿಂದ ಭೋಜ್‌ಪುರಿ ಚಿತ್ರರಂಗ ಬೆಚ್ಚಿ ಬಿದ್ದಿತ್ತು.
ಸದ್ಯ ಆಕಾಂಕ್ಷಾ ದುಬೆ ಬಾರದ ಲೋಕಕ್ಕೆ ತೆರಳಿ ಮೂರು ವರ್ಷಗಳಾಗಿವೆ. ಮೂರು ವರ್ಷಗಳ ನಂತರ ಇವರು ಅಭಿನಯಿಸಿದ್ದ ''ಪರಮ ಸತ್ಯ'' ಎಂಬ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಮೊನ್ನೆ.. ಮೊನ್ನೆ.. ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಈ ಟ್ರೇಲರ್ ಸದ್ಯ ಆಕಾಂಕ್ಷಾ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಹಲವರು ಆಕಾಂಕ್ಷಾ ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಟ್ರೇಲರ್ ನೋಡಿ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.
ಇನ್ನೂ ಆಕಾಂಕ್ಷಾ ಅವರ ಕ್ರೇಜ್ ಹೇಗಿತ್ತು ಅಂದರೆ ಸದ್ಯ ಬಿಡುಗಡೆಯ ಬಾಗಿಲಿಗೆ ಮೂರು ವರ್ಷದ ನಂತರ ಬಂದು ನಿಂತ ''ಪರಮ ಸತ್ಯ'' ಚಿತ್ರದ ನಾಯಕ ರಿತೇಶ್ ಪಾಂಡೆ ಜೊತೆ ''ಹಲೋ ಕೌನ್'' ಎಂಬ ಹಾಡೊಂದನ್ನು ಆಕಾಂಕ್ಷಾ ಆರೇಳು ವರ್ಷದ ಹಿಂದೆ ಮಾಡಿದ್ದರು. ಈ ಹಾಡು ಒಂದಲ್ಲ.. ಎರಡಲ್ಲ.. ಹತ್ತು.. ಇಪ್ಪತ್ತು ಲಕ್ಷನೂ ಅಲ್ಲ. ಕಳೆದ 6 ವರ್ಷಗಳಲ್ಲಿ ಒಂದು ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಯೂಟ್ಯೂಬ್‌ನಲ್ಲಿ ದಾಖಲೆ ಸೃಷ್ಟಿಸಿದೆ.
ಹೀಗೆ ಭೋಜ್‌ಪುರಿ ಚಿತ್ರರಸಿಕರ ಹೃದಯ ಗೆದ್ದಿದ್ದ ಆಕಾಂಕ್ಷಾ ಅವರ ಕೊನೆಯ ಚಿತ್ರ ''ಪರಮಸತ್ಯ'' ಈಗ ಅವರ ನಿಧನದ 3 ವರ್ಷದ ನಂತರ ತೆರೆಗೆ ಬರಲು ಸಿದ್ದವಾಗಿದೆ. ಭೋಜ್‌ಪುರಿ ವೀಕ್ಷಕರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications