Loksabha Election 2024 ; ಕೆನಡಿಯನ್‌ನಿಂದ ಭಾರತೀಯನಾದ ಅಕ್ಷಯ್ ಕುಮಾರ್ ಗೆ ಮೊದಲ ಮತದಾನದ ಸಂಭ್ರಮ...!
ಪೌರತ್ವದ ವಿಚಾರಕ್ಕೆ ಮೇಲಿಂದ ಮೇಲೆ ಟ್ರೋಲ್ ಆದವರು ಅಕ್ಷಯ್ ಕುಮಾರ್. ಹೆಸರು-ಕೀರ್ತಿ-ಹಣ ಎಲ್ಲವನ್ನೂ ಇಲ್ಲಿ ಪಡೆದು, ಕೆನಡಾದ ಪೌರತ್ವ ಪಡೆದಿರುವ ನಿಮಗೆ.. ಭಾರತದ ಬಗ್ಗೆ.. ಇಲ್ಲಿಯ ವ್ಯವಸ್ಥೆ-ಅವ್ಯವಸ್ಥೆಯ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ ಎಂದು ಅಕ್ಷಯ್ ಕುಮಾರ್ ಅವರ ಮೇಲೆ ಕೆಂಡ ಕಾರಿದವರು ಅದೆಷ್ಟೋ ಜನ.
ಕಾಲ..ಕಾಲಕ್ಕೆ.. ನಡೆದ ಈ ವ್ಯೆಯಕ್ತಿಕ ದಾಳಿಗಳಿಂದ ಬೇಸತ್ತು ಕೊನೆಗೆ ಕಳೆದ ವರ್ಷ ಕೆನಡಾ ಪೌರತ್ವ ತ್ಯಜಿಸಿದ್ದ ಅಕ್ಷಯ್ ಕುಮಾರ್ ಇದೇ ಮೊದಲ ಬಾರಿ ಮತದಾನ ಮಾಡಿದ್ದಾರೆ. ಹಕ್ಕು ಚಲಾಯಿಸಿ ಸಂಭ್ರಮ ಪಟ್ಟಿದ್ದಾರೆ.

ಹೌದು, ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು ನಡೆಯುತ್ತಿದೆ. ಮಾಯಾನಗರಿ ಮುಂಬೈನಲ್ಲಿ ತಾರೆಯರ ಕಲರವ ಬೆಳಿಗ್ಗೆಯೇ ಕೇಳಿ ಬಂದಿದೆ. ಆ ಪೈಕಿ ಅಕ್ಷಯ್ ಕುಮಾರ್ ಅವರ ಧ್ವನಿಯೂ ಒಂದು.
ಬೆಳಿಗ್ಗೆಯೇ ಮತಗಟ್ಟೆಗೆ ಉತ್ಸಾಹದಲ್ಲಿ ಬಂದ ಅಕ್ಷಯ್ ಕುಮಾರ್, ತಮ್ಮ ಹಕ್ಕು ಚಲಾಯಿಸಿದ್ದಾರೆ. ನನ್ನ ಭಾರತ ವಿಕಸಿತ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರಬೇಕು. ಇದೇ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾನು ಇವತ್ತು ಮತ ಚಲಾಯಿಸಿದ್ದೇನೆ. ಭಾರತದ ಜನರು ತಮ್ಮ ಸ್ವವಿವೇಚನೆಯಿಂದ ಆಲೋಚಿಸಿ ಮತ ಹಾಕಬೇಕು ಎಂದು ಮನವಿಯನ್ನೂ ಅಕ್ಷಯ್ ಕುಮಾರ್ ಮಾಡಿಕೊಂಡಿದ್ದಾರೆ

ಇನ್ನೂ ಇದೇ ಸಮಯದಲ್ಲಿ ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದ ಕಿಲಾಡಿ ಅಕ್ಷಯ್ ಕುಮಾರ್, ಬೆಳಗ್ಗೆ ಏಳು ಗಂಟೆಗೆ ಮತಗಟ್ಟೆ ಬಂದಾಗ ಅಪಾರ ಸಂಖ್ಯೆಯ ಜನರು ಸೇರಿದ್ದರು. ಈಗಲೂ ಸುಮಾರು 200 ರಿಂದ 300 ಜನರು ಮತಗಟ್ಟೆಯೊಳಗೆ ನಿಂತಿದ್ದಾರೆ. ಹಾಗಾಗಿ ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದಿದ್ದಾರೆ. ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಕೆನಡಾ ಪೌರತ್ವ ಪಡೆದಿದ್ದೇಕೆ ಅಕ್ಷಯ್ ಕುಮಾರ್..?
1990ರ ಆಚೀಚೆ ಅಕ್ಷಯ್ ಕುಮಾರ್ ನಸೀಬು ಕೈ ಕೊಟ್ಟಿತ್ತು. ಒಂದಾದ ಮೇಲೊಂದು ಸಿನಿಮಾ ನೆಲ ಕಚ್ಚಿದ್ದವು. ಇದರಿಂದ ನೊಂದು-ಬೆಂದು ಹೋಗಿದ್ದ ಅಕ್ಷಯ್ ಕುಮಾರ್ ಸ್ನೇಹಿತನ ಸಲಹೆ ಮೇರೆಗೆ ಕೆನಡಾಗೆ ವಲಸೆ ಹೋಗುವ ನಿರ್ಧಾರವನ್ನ ಮಾಡಿದ್ದರು.
ಕೆನಡಾದಲ್ಲಿಯೇ ಜೀವನೋಪಾಯಕ್ಕೆ ಏನಾದರೂ ಕೆಲಸ ಮಾಡಿದರಾಯಿತು ಎಂಬ ಲೆಕ್ಕಾಚಾರ ಹಾಕಿ ಕೆನಡಾ ಪೌರತ್ವ ಪಡೆದಿದ್ದರು. ಆದರೆ.. ಅಕ್ಷಯ್ ಕುಮಾರ್ ಅದೃಷ್ಟ ಬಿಡುಗಡೆಯಾಗಬೇಕಿದ್ದ ಎರಡು ಚಿತ್ರಗಳಲ್ಲಿತ್ತು. ಸಾಲು ಸಾಲು ಸೋಲು ನೋಡಿದ್ದ ಅಕ್ಷಯ್ ಕುಮಾರ್ ಗೆ ಗೆಲುವು ಸಿಕ್ತು. ಆ ನಂತರ ಕೆನಡಾವನ್ನ ಕಡೆಗಣಿಸಿದ ಅಕ್ಕಿ ಒಂದಾದ ಮೇಲೆ ಒಂದು ಸಿನಿಮಾ ಮಾಡಿ ಇಲ್ಲಿಯೇ ಒಂದೊಂದೆ ಮೆಟ್ಟಿಲನ್ನೇರಿದರು
2019ರಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ಅಕ್ಷಯ್ ಕುಮಾರ್..!
2019ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಕ್ಷಯ್ ಕುಮಾರ್ ಅವರು ಸಂದರ್ಶನ ಮಾಡಿದ್ದು ಲೋಕಸಭಾ ಚುನಾವಣೆಗೂ ಮುನ್ನ ಭಾರೀ ಚರ್ಚೆ ಆಗಿತ್ತು. ಅಕ್ಷಯ್ ಕುಮಾರ್ ವಿರುದ್ಧ ಆಕ್ರೋಶದ ಅಲೆಯೂ ಎದ್ದಿತ್ತು. ಅಲ್ಲಿಯವರೆಗೆ ಬಾಯಿಮಾತಿಗೆ ಅಕ್ಷಯ್ ಕುಮಾರ್ ಅವರನ್ನ ಕೆನಡಿಯನ್ ಎಂದು ಕರೆಯುತ್ತಿದ್ದವರೆಲ್ಲ, ಆ ನಂತರ ಅಕ್ಷಯ್ ಕುಮಾರ್ ಅವರನ್ನ ಶಾಶ್ವತವಾಗಿ ಕೆನಡಾಗೆ ಕಳಿಸಬೇಕು ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು


Click it and Unblock the Notifications











