50 ಕೋಟಿ ರೂ. ಮುಟ್ಟದ ಸಾಮ್ರಾಟ್ ಪೃಥ್ವಿರಾಜ್: 5ನೇ ದಿನದ ಗಳಿಕೆ ಎಷ್ಟು?
ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾ ರಿಲೀಸ್‌ಗೂ ಮುನ್ನ ಬಹಳ ದೊಡ್ಡ ನಿರೀಕ್ಷೆಯನ್ನು ಮೂಡಿಸಿತ್ತು. ಈ ಸಿನಿಮಾ ಬಾಲಿವುಡ್ ಚಿತ್ರಗಳ ಸೂಪರ್ ಹಿಟ್ ಲಿಸ್ಟ್ ಸೇರುತ್ತದೆ ಎನ್ನಲಾಗಿತ್ತು.
ಆದರೆ ಅದ್ಧೂರಿ ಪ್ರಚಾರದ ನಂತರವೂ, ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸೋತಿದೆ. ಚಿತ್ರದ ಬಾಕ್ಸಾಫೀಸ್ ಗಳಿಕೆಯೇ ಇದಕ್ಕೆ ಸಾಕ್ಷಿ ಆಗಿದೆ. ಜೂನ್ 3ರಂದು ರಿಲೀಸ್ ಆದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಎರಡನೇ ದಿನವೂ ಗಳಿಕೆಯಲ್ಲಿ ಹಿಂದೆ ಬಿದ್ದಿದೆ.
ಈ ಚಿತ್ರದ ಬಜೆಟ್ 250 ಕೋಟಿ ರೂ. ಹಾಗಾಗಿ ಈ ಚಿತ್ರ ಮೊದಲ ದಿನ 30 ಕೋಟಿ ರೂ.ಗೂ ಅಧಿಕ ಮೊತ್ತ ಕಲೆ ಹಾಕುತ್ತದೆ ಎಂದು ಅಂದಾಜಿಲಾಗಿತ್ತು. ಆದರೆ ಸಾಧ್ಯವಾಗಿಲ್ಲ. ಅಷ್ಟೆ ಯಾಕೆ 5 ದಿನ ಆದರೂ ಕೂಡ 50 ಕೋಟಿ ರೂ. ಕಲೆ ಹಾಕಲು ಒದ್ದಾಡುತ್ತಿದೆ ಈ ಸಿನಿಮಾ.

5 ದಿನ ಆದ್ರೂ 50 ಕೋಟಿ ರೂ. ಆಗಲೇ ಇಲ್ಲ!
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ನಿರೀಕ್ಷೆಯ ಮಟ್ಟದಲ್ಲಿ ಓಪನಿಂಗ್ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಆದರೆ ಸಿನಿಮಾ ಮೊದಲ ವೀಕೆಂಡ್ ಬಳಿಕ ತಕ್ಕ ಮಟ್ಟಿಗೆ ಗಳಿಕೆ ಕಾಣಲಿದೆ ಎನ್ನುವ ನಿರೀಕ್ಷೆಗಳು ಇದ್ದವು. ಆದರೆ ಅದೂ ಕೂಡ ಸಾಧ್ಯ ಆಗಿಲ್ಲ. ಸಿನಿಮಾ ರಿಲೀಸ್ ಆಗಿ 5 ದಿನ ಆದರೂ ಕೂಡ 50 ಕೋಟಿ ರೂ. ಗಡಿ ಮುಟ್ಟಿಲ್ಲ 'ಸಾಮ್ರಾಟ್ ಪೃಥ್ವಿರಾಜ್'.

'ಸಾಮ್ರಾಟ್ ಪೃಥ್ವಿರಾಜ್' ಗಳಿಕೆ 48.65 ಕೋಟಿ ರೂ.!
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಗಳಿಕೆ ವೇಗವಾಗಿ ಹೆಚ್ಚಾಗದೇ ಹೋದರೂ ಕೂಡ, ನಿಧಾನವಾಗಿ ಸಿನಿಮಾದ ಗಳಿಕೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಮೊದಲ ವಾರಾಂತ್ಯ ಮುಗಿದು ಎರಡು ದಿನಗಳು ಕಳೆದರೂ ಕೂಡ, ಸಿನಿಮಾದ ಗಳಿಕೆ 48.65 ಕೋಟಿ ರೂ. ಮಾತ್ರ ಆಗಿದೆ. ಹಾಗಾಗಿ ಈ ಸಿನಿಮಾ ಕೂಡ ಬಾಲಿವುಡ್ ಫ್ಲಾಪ್ ಚಿತ್ರಗಳ ಪಟ್ಟಿ ಸೇರಿದೆ.

200 ಕೋಟಿ ರೂ. ಗಳಿಕೆ ಕಂಡ 'ವಿಕ್ರಂ'!
ನಟ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. 'ಸಾಮ್ರಾಟ್ ಪೃಥ್ವಿರಾಜ್' ಜೊತೆಗೆ ತೆರೆಕಂಡ ಸಿನಿಮಾ ಇದು. ಆದರೆ 'ಸಾಮ್ರಾಟ್ ಪೃಥ್ವಿರಾಜ್' ಸಂಪೂರ್ಣ ನೆಲ ಕಚ್ಚಿದ್ದು, 'ವಿಕ್ರಂ' ಸಿನಿಮಾ 200 ಕೋಟಿ ರೂ. ಗಳಿಕೆ ಕಂಡು ದಾಖಲೆ ಬರೆದಿದೆ. ಈ ಚಿತ್ರ ನಟ ಕಮಲ್ ಹಾಸನ್ ವೃತ್ತಿ ಜೀವನದಲ್ಲೇ ದೊಡ್ಡ ಮಟ್ಟದ ಗಳಿಕೆ ಕಂಡ ಸಿನಿಮಾ ಆಗಿದೆ.

'ಸಾಮ್ರಾಟ್ ಪೃಥ್ವಿರಾಜ್' ಬಜೆಟ್ ವಾಪಸ್ ಬರುತ್ತಾ?
ಸದ್ಯ ಅಕ್ಷಯ್ ಕುಮಾರ್ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಸಂಕಟಕ್ಕೆ ಸಿಲುಕಿದೆ. ಸಿನಿಮಾಗೆ ಹಾಕಿದ ದುಡ್ಡು ಬಂದರೂ ಸಾಕು ಎನ್ನುವಂತಾಗಿದೆ. ಯಾಕೆಂದರೆ ಚಿತ್ರದ ಗಳಿಕೆ ತೀರಾ ಕಡಿಮೆಯಾಗಿದ್ದು, ಹಾಕಿದ ಬಜೆಟ್ ಮರಳಿ ಬರುವ ನಿರೀಕ್ಷೆ ಚಿತ್ರದಲ್ಲಿ ಹುಟ್ಟಿದೆ. ಆದರೆ ಇನ್ನು 50 ಕೋಟಿ ರೂ.ಯ ಗಡಿ ಮುಟ್ಟದ 'ಸಾಮ್ರಾಟ್ ಪೃಥ್ವಿರಾಜ್' 250 ಕೋಟಿ ರೂ ಗಳಿಕೆ ಮಾಡುವುದು ಅನುಮಾನವೇ. ಚಿತ್ರಮಂದಿಗಳ ಗಳಿಕೆ ಬಿಟ್ಟು, ಸ್ಯಾಟಲೈಟ್, ಒಟಿಟಿ ಸೇರಿ ಬೇರೆ ಮಾರ್ಗದಿಂದ ಹಣ ಮಾಡಬೇಕು ಅಷ್ಟೆ.


Click it and Unblock the Notifications











