ಅಕ್ಷಯ್ ಕುಮಾರ್ ಹುಟ್ಟುಹಬ್ಬ: ತಾಯಿಯ ಅಗಲಿಕೆ ನೋವಿನಲ್ಲಿರುವ ಅಕ್ಷಯ್ ಭಾವುಕ ಪೋಸ್ಟ್
ಸೆಪ್ಟಂಬರ್ 09 ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಜನ್ಮದಿನ. ಎಲ್ಲವೂ ಸರಿ ಇದ್ದಿದ್ದರೆ ಅಕ್ಷಯ್ ಕುಮಾರ್ ಅವರು ಇಂದು (ಸೆಪ್ಟಂಬರ್ 9) ಅದ್ದೂರಿಯಾಗಿ ಬರ್ತ್ಡೇ ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ ಹಾಗಿಲ್ಲ, ಅಕ್ಷಯ್ ಕುಮಾರ್ ತಾಯಿನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ಸೆಪ್ಟಂಬರ್ 8ರಂದು ಮುಂಜಾನೆ ನಿಧನರಾದರು. ಹಾಗಾಗಿ ಅಕ್ಷಯ್ ಕುಮಾರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಅವರ ಕುಟುಂಬದಲ್ಲಿ ಹುಟ್ಟುಹಬ್ಬದ ಸಂಭ್ರಮವಿಲ್ಲ.
ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅಕ್ಷಯ್ ತಾಯಿಯನ್ನು ನೆನೆದು ಭಾವುಕ ಪೋಸ್ಟ್ ಮಾಡಿದ್ದಾರೆ. ಅವರ ಮನೆಯಲ್ಲೀಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ತಾಯಿಯನ್ನು ಕಳೆದುಕೊಂಡ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಸಾಂತ್ವನ ಹೇಳುತ್ತಿದ್ದಾರೆ.
ಅಕ್ಷಯ್ ಕುಮಾರ್ ತಾಯಿ ಜೊತೆ ಇರುವ ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ. ಮಗನ ಕೆನ್ನೆಗೆ ಅರುಣಾ ಭಾಟಿಯಾ ಅವರು ಪ್ರೀತಿಯಿಂದ ಮುತ್ತಿಡುತ್ತಿರುವ ಫೋಟೋ ಇದಾಗಿದೆ. ತಾಯಿ ಜೊತೆಗಿನ ಸುಂದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಶೇರ್ ಮಾಡಿ, "ಅಮ್ಮ ನನಗಾಗಿ ಮೇಲಿಂದಲೇ ಹುಟ್ಟುಹಬ್ಬದ ಶುಭಾಶಯ ಅಂತ ಹಾಡುತ್ತಿದ್ದಾರೆ ಎಂಬ ನಂಬಿಕೆ ನನಗಿದೆ. ಸಾಂತ್ವನ ಹೇಳಿದ ಮತ್ತು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಜೀವನ ಮುಂದೆ ಸಾಗಲೇಬೇಕು" ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 5 ರಂದೇ ಅಕ್ಷಯ್ ಕುಮಾರ್ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮುಂಬೈನ ಹೀರಾನಂದಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿಯ ಆರೋಗ್ಯ ಕ್ಷೀಣಿಸಿದ ವಿಷಯ ತಿಳಿದ ಕೂಡಲೇ ಬ್ರಿಟನ್‌ನಲ್ಲಿ ಚಿತ್ರೀಕರಣದಲ್ಲಿದ್ದ ಅಕ್ಷಯ್ ಅರ್ಧಕ್ಕೆ ನಿಲ್ಲಿಸಿ ಸೆಪ್ಟೆಂಬರ್ 6ರಂದು ದಿಢೀರ್ ಭಾರತಕ್ಕೆ ವಾಪಸ್ಸಾಗಿದ್ದರು. ಬ್ರಿಟನ್‌ನಲ್ಲಿ 'ಸಿಂಡ್ರೆಲಾ' ಸಿನಿಮಾದ ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರ್ ತೊಡಿಗಿಸಿಕೊಂಡಿದ್ದರು.
ಅಕ್ಷಯ್ ಕುಮಾರ್ ತಾಯಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಕ್ಷಯ್ ಕುಮಾರ್ ಮುಂಬೈಗೆ ವಾಪಸ್ ಆದ ಎರಡು ದಿನಗಳಲ್ಲೇ ತಾಯಿ ನಿಧನರಾದರು. ತಾಯಿಯ ಅಗಲಿಕೆಯ ಸುದ್ದಿಯನ್ನು ಅಕ್ಷಯ್ ಕುಮಾರ್ ಸೆಪ್ಟಂಬರ್ 8ರಂದು ಬೆಳಗ್ಗೆ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.
"ನನ್ನ ತಾಯಿಯೇ ನನ್ನ ಸರ್ವಸ್ವ. ಇಂದು ಅವರನ್ನು ಕಳೆದುಕೊಂಡು ನಾನು ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯೊಂದಿಗೆ ಅವರು ಸೇರಿಕೊಂಡರು. ನನ್ನ ತಾಯಿ ಗುಣಮುಖರಾಗಲೆಂದು ಬಯಸಿದ ನಿಮ್ಮ ಪ್ರಾರ್ಥನೆಯನ್ನು ನಾನು ಮತ್ತು ನನ್ನ ಕುಟುಂಬದವರು ಹೃದಯಪೂರ್ವಕವಾಗಿ ಗೌರವಿಸುತ್ತೇವೆ. ಓಂ ಶಾಂತಿ" ಎಂದು ಅವರು ಬರೆದುಕೊಂಡಿದ್ದರು.
ಅಕ್ಷಯ್ ಕುಮಾರ್ ತಾಯಿಯ ಅಂತ್ಯಸಂಸ್ಕಾರದಲ್ಲಿ ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿಗಳು ಹಾಜರಾಗಿ ಅಂತಿಮ ನಮನ ಸಲ್ಲಿಸಿದರು. ಇನ್ನು ನಟ ಅಕ್ಷಯ್ ಕುಮಾರ್ ಅವರ ಗೆಳೆಯ, ನಿರ್ದೇಶಕ ಆನಂದ್ ಎಲ್. ರಾಯ್ ಅವರ ತಾಯಿ ಕೂಡ ಸೆಪ್ಟಂಬರ್ 8ರಂದು ನಿಧನರಾದರು. ತನ್ನ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿದ ಬಳಿಕ ಅಕ್ಷಯ್ ಕುಮಾರ್ ಗೆಳೆಯನ ತಾಯಿಯ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು. ಅಕ್ಷಯ್ ಕುಮಾರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


Click it and Unblock the Notifications











