'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾಕ್ಕೆ ಒಮನ್, ಕುವೈತ್‌ನಲ್ಲಿ ನಿಷೇಧ
ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವನ್ನು ಅರಬ್‌ನ ಕೆಲವು ದೇಶಗಳಲ್ಲಿ ಪ್ರದರ್ಶಿಸಲು ಅವಕಾಶ ನಿರಾಕರಿಸಲಾಗಿದೆ.
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವು ಜೂನ್ 03 ರಂದು ತೆರೆಗೆ ಬರುತ್ತಿದ್ದು, ಪೃಥ್ವಿರಾಜ್ ಚೌಹಾಣ್ ಜೀವನ ಕುರಿತಾದ ಸಿನಿಮಾ ಇದಾಗಿದೆ. ಪೃಥ್ವಿರಾಜ್ ಚೌಹಾಣ್, ಮೊಹಮ್ಮದ್ ಘೋರಿಯ ವಿರುದ್ಧ ಮಾಡಿದ ಯುದ್ಧ ಸೇರಿದಂತೆ ಹಲವು ಅಂಶಗಳು ಸಿನಿಮಾದಲ್ಲಿದೆ.
ಮುಸ್ಲಿಂ ವಿರೋಧಿ ಸಿನಿಮಾ ಅಥವಾ ಇನ್ಯಾವುದೇ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಅರಬ್‌ನ ಕೆಲ ದೇಶಗಳಲ್ಲಿ ನಿಷೇಧ ಹೇರಲಾಗುತ್ತಿದೆ. 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದಲ್ಲಿ ಮುಸ್ಲಿಂ ಆಕ್ರಮಣಕಾರರ ಬಗ್ಗೆ ಚಿತ್ರಣವಿರುವ ಕಾರಣ ಒಮನ್ ಹಾಗೂ ಕುವೈತ್‌ನಲ್ಲಿ ನಿಷೇಧಿಸಲಾಗಿದೆ.

''ಹಿಂದು ಸಾಮ್ರಾಟ್ ಪೃಥ್ವಿರಾಜ್ ಜೀವನ ಕತೆಯನ್ನು ಒಮನ್, ಕುವೈತ್‌ನಂಥಹಾ ಅಂತರಾಷ್ಟ್ರೀಯ ಮಾರುಕಟ್ಟೆ ನಿಷೇಧ ಮಾಡಿರುವುದ ಬಹಳ ದುರಾದೃಷ್ಟಕರ ಸಂಗತಿ. ಸಿನಿಮಾ ಬಿಡುಗಡೆಗೆ ಮುನ್ನವೇ ಅವರು ಈ ನಿರ್ಣಯ ತೆಗೆದುಕೊಂಡಿರುವುದು ಅನುಮಾನಾಸ್ಪದ ಸಹ'' ಎಂದಿದೆ ಚಿತ್ರತಂಡ. ಆದರೆ ಸಿನಿಮಾವನ್ನು ಅಲ್ಲಿನ ಸೆನ್ಸಾರ್ ಮಂಡಳಿ ವೀಕ್ಷಿಸಿ ಈ ನಿರ್ಣಯ ಪ್ರಕಟಿಸಿದೆ ಎನ್ನಲಾಗಿದೆ.
''ಭಾರತೀಯರು ಯಾವುದು ಸತ್ಯವೊ ಅದಕ್ಕಾಗಿ ಹೋರಾಡುತ್ತಾರೆ ಎಂಬುದಕ್ಕೆ ಪೃಥ್ವಿರಾಜ್ ಚೌಹಾಣ್ ಉದಾಹರಣೆ. ದೇಶವನ್ನು ದೋಚಿ ಹಾಳು ಮಾಡುವ ಉದ್ದೇಶವಿದ್ದ ಅಮಾನವೀಯ ಆಕ್ರಮಣಕಾರರ ವಿರುದ್ಧ ಹೋರಾಡಿ ದೇಶವನ್ನು ಉಳಿಸುವ ಕಾರ್ಯವನ್ನು ಪೃಥ್ವಿರಾಜ್ ಚೌಹಾಣ್ ಮಾಡಿದ್ದಾರೆ. ಈ ಸಿನಿಮಾದ ಬಗ್ಗೆ ನಿರೀಕ್ಷೆಗಳು ದಿನೇ-ದಿನೇ ಹೆಚ್ಚಾಗುತ್ತಲೇ ಇದೆ. ಇಂಥಹಾ ವ್ಯಕ್ತಿಯ ಸಿನಿಮಾವನ್ನು ನಿಷೇಧಿಸುವುದು ಇತಿಹಾಸಕ್ಕೆ ಮಾಡಿದ ಅಪಮಾನ. ನಿಷೇಧ ಮಾಡಿರುವವರು, ಇತಿಹಾಸವನ್ನೊಮ್ಮೆ ನೋಡಿ, ಆಕ್ರಮಣಕಾರರು ಭಾರತದ ಜನರಿಗೆ ಏನು ಮಾಡಿದರು ಎಂಬುದನ್ನು ನೋಡಬೇಕು ಎಂದು ಚಿತ್ರತಂಡ ಹೇಳಿದೆ.
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಮಾತ್ರವೇ ಅಲ್ಲ ಈ ಹಿಂದೆ ಬಿಡುಗಡೆ ಆಗಿದ್ದ 'ದಿ ಕಶ್ಮೀರ್ ಫೈಲ್' ಸಿನಿಮಾವನ್ನು ಸಹ ಒಮನ್ ಹಾಗೂ ಕುವೈತ್‌ನಲ್ಲಿ ನಿಷೇಧಿಸಲಾಗಿತ್ತು. ಸಿಂಗಪುರ್‌ನಲ್ಲಿ ಸಹ ಈ ಸಿನಿಮಾಕ್ಕೆ ನಿಷೇಧ ಹೇರಲಾಗಿತ್ತು. ಮುಸ್ಲಿಂ ವಿರೋಧಿ ಅಂಶಗಳಿರುವ ಸಿನಿಮಾಗಳಿಗೆ ಒಮನ್ ಹಾಗೂ ಕುವೈತ್ ಆಡಳಿತ ನಿಷೇಧ ಹೇರುತ್ತಿದೆ.


Click it and Unblock the Notifications











