4 ಕೋಟಿ ಹಾಕಿ 28 ಕೋಟಿ ಗಳಿಸಿದ್ದ ಮಲಯಾಳಂ ಚಿತ್ರವನ್ನು 80 ಕೋಟಿ ಬಜೆಟ್‌ನಲ್ಲಿ ರಿಮೇಕ್ ಮಾಡಿದ್ರೆ ಇಷ್ಟೇನಾ ಗಳಿಸೋದು?
ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಸಿನಿಮಾ ಆರಂಭಕ್ಕೂ ಮುನ್ನ ವಿಡಿಯೊ ತುಣುಕೊಂದನ್ನು ಹಾಕಿ ಜನರಿಗೆ ಸಂದೇಶ ರವಾನಿಸುವ ಚಿತ್ರತಂಡಗಳು ರಿಮೇಕ್ ಚಿತ್ರಗಳು ನಿಮ್ಮದೇ ಗಳಿಕೆಗೆ ಹಾನಿಕರ ಎಂಬುದನ್ನು ಪದೇಪದೆ ಹೇಳುತ್ತಿದ್ದರೂ ಯಾಕೋ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಹೌದು, ಸಿನಿ ರಸಿಕರು ರಿಮೇಕ್ ಚಿತ್ರಗಳನ್ನು ಒಪ್ಪುತ್ತಿಲ್ಲ. ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ರೀತಿಯ ದೊಡ್ಡ ನಟರು ನಟಿಸಿದ್ದರೂ ಸಹ ರಿಮೇಕ್ ಎಂಬ ಕಾರಣಕ್ಕೆ ಚಿತ್ರಗಳು ಹಿಟ್ ಲಿಸ್ಟ್ ಸೇರುತ್ತಿಲ್ಲ.
ರಿಮೇಕ್ ಚಿತ್ರ ಬಿಡುಗಡೆಯಾಗ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದ ಕೂಡಲೇ ಈ ಓಟಿಟಿ ಯುಗದಲ್ಲೂ ಯಾವ ರಿಮೇಕ್ ಎಂದು ನಗುವ ಸಿನಿ ರಸಿಕರೇ ಹೆಚ್ಚು. ಈ ಹಿಂದೆ ರಿಮೇಕ್ ಚಿತ್ರಗಳಾದರೂ ಸಹ ಕಥೆ ಚೆನ್ನಾಗಿದ್ದರೆ ಚಿತ್ರಮಂದಿರಗಳಿಗೆ ಹಾಜರಾಗಿ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಚಿತ್ರ ಪ್ರೇಮಿಗಳು ಓಟಿಟಿ ಯುಗ ಆರಂಭವಾದ ಮೇಲೆ, ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟಿಕೊಂಡ ಬಳಿಕ ರಿಮೇಕ್ ಎಂದರೆ ದೊಡ್ಡ ಮಟ್ಟದಲ್ಲಿ ತಿರಸ್ಕರಿಸುತ್ತಿದ್ದಾರೆ.

ಈಗಾಗಲೇ ಹಲವು ರಿಮೇಕ್ ಚಿತ್ರಗಳನ್ನು ಜನರು ತಳ್ಳಿಹಾಕಿದ್ದು, ಈ ಸಾಲಿಗೆ ಇದೀಗ ಹಿಂದಿಯ ಇತ್ತೀಚೆಗಿನ ಚಿತ್ರ ಸೆಲ್ಫಿ ಸಹ ಸೇರಿಕೊಂಡಿದೆ. ಹೌದು, ಕಳೆದ ಫೆಬ್ರವರಿ 24ರಂದು ಬಿಡುಗಡೆಗೊಂಡ ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಶ್ಮಿ ನಟನೆಯ ಸೆಲ್ಫಿ ಚಿತ್ರವನ್ನು ಜನರು ಕೈಬಿಟ್ಟಿದ್ದಾರೆ. ರಿಮೇಕ್ ಚಿತ್ರ ಮಾಡಿದ್ರೆ ಹೀನಾಯವಾಗಿ ಸೋಲ್ತೀರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿ ರಿಮೇಕ್ ಮಾಡಿದರೆ ಜನ ನೋಡ್ತಾರೆ ಎಂಬ ಆಲೋಚನೆ ಇರುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಚಿತ್ರ 2019ರಲ್ಲಿ ತೆರೆಗೆ ಬಂದಿದ್ದ ಪೃಥ್ವಿರಾಜ್ ಸುಕುಮಾರನ್ ಹಾಗೂ ಸೂರಜ್ ವೆಂಜರಮೋಡು ಕಾಂಬಿನೇಶನ್‌ನ ಮಲಯಾಳಂ ಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್ ಆಗಿದೆ. ಸೂಪರ್‌ಸ್ಟಾರ್ ಹಾಗೂ ಆತನ ಕಟ್ಟಾಭಿಮಾನಿ ಆರ್‌ಟಿಓ ಅಧಿಕಾರಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಲೈಸೆನ್ಸ್ ಒಂದಕ್ಕಾಗಿ ಇಬ್ಬರ ನಡುವೆ ನಡೆಯುವ ಜಟಾಪಟಿಯೇ ಚಿತ್ರದ ಕಥೆಯಾಗಿದ್ದು, ಈ ಚಿತ್ರ ಮಲಯಾಳಂನಲ್ಲಿ ಹಿಟ್ ಆಗಿತ್ತು. 4 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಡ್ರೈವಿಂಗ್ ಲೈಸೆನ್ಸ್ ಚಿತ್ರ 28 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

ಆದರೆ ಈ ಚಿತ್ರವನ್ನು ಈಗ ರಿಮೇಕ್ ಮಾಡಿರುವ ಬಾಲಿವುಡ್ ಮಂದಿ ಸಿಂಪಲ್ ಕಥೆಯನ್ನು ಬರೋಬ್ಬರಿ 80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಮಾಲಿವುಡ್‌ಗಿಂತ ಬೃಹತ್ ಮಟ್ಟದಲ್ಲಿ ಬಂಡವಾಳ ಹೂಡಿದರೂ ಸಹ ಚಿತ್ರದ ಗಳಿಕೆ ಮಾತ್ರ ಮೂಲ ಚಿತ್ರ ಮಾಡಿದ್ದ ಗಳಿಕೆಗಿಂತ ಹೆಚ್ಚಿಲ್ಲ. ಹೌದು, ಸೆಲ್ಫಿ ಚಿತ್ರ 24.5 ಕೋಟಿ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ. ತನ್ನ ಬಜೆಟ್‌ಗಿಂತ ಹೆಚ್ಚು ಗಳಿಸುವುದಿರಲಿ, ಮೂಲ ಚಿತ್ರ ಡ್ರೈವಿಂಗ್ ಲೈಸೆನ್ಸ್ ಮಾಡಿದ್ದ 28 ಕೋಟಿ ರೂಪಾಯಿ ಕಲೆಕ್ಷನ್ ಅನ್ನೂ ಸಹ ಸೆಲ್ಫಿ ಚಿತ್ರಕ್ಕೆ ಮುರಿಯಲಾಗಿಲ್ಲ.
ಭಾರತದಲ್ಲಿ ಇಲ್ಲಿಯವರೆಗೂ ಒಟ್ಟು 20 ಕೋಟಿ ರೂಪಾಯಿಗಳನ್ನು ಗಳಿಸಿರುವ ಸೆಲ್ಫಿ ಚಿತ್ರ ವಿದೇಶದಲ್ಲಿ 4.5 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದೆ. ಇನ್ನು ಸೌತ್ ಇಂಡಿಯಾದ ಸಾಮಾನ್ಯ ನಟರ ಚಿತ್ರಗಳೂ ಸಹ ಈ ಗಳಿಕೆ ಮಾಡಲಿದ್ದು, ಚಿತ್ರ ದೊಡ್ಡ ಮಟ್ಟದಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ.
ಇನ್ನು ಈ ಚಿತ್ರ ಮಾತ್ರವಲ್ಲದೇ ಅಕ್ಷಯ್ ಕುಮಾರ್ ನಟನೆಯ ಕೆಲವು ಇತ್ತೀಚಿನ ಚಿತ್ರಗಳೂ ಸಹ ಇದೇ ರೀತಿಯ ಇದೇ ರೀತಿಯ ಹೀನಾಯ ಸೋಲನ್ನು ಕಂಡಿವೆ. ಮೊದಲ ದಿನವೇ ಜನ ಬಾರದೇ ಡಲ್ ಹೊಡೆಯುತ್ತಿದ್ದ ಸೆಲ್ಫಿ ನಂತರದ ದಿನಗಳಲ್ಲಿಯೂ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ.


Click it and Unblock the Notifications











