ಕಮಲ್ ಮುಂದೆ ಸೋತ ಅಕ್ಷಯ್ ಕುಮಾರ್: ಮೊದಲ ದಿನವೇ ಮುಗುಚಿದ 'ಸಾಮ್ರಾಟ್ ಪೃಥ್ವಿರಾಜ್'
ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಆಗಿತ್ತು. ಹಳ್ಳ ಹಿಡಿದಿರುವ ಬಾಲಿವುಡ್ ಸಿನಿಮಾಗಳಿಗೆ ಜೀವಜಲ ಎಂದೇ ಈ ಸಿನಿಮಾವನ್ನು ಭಾವಿಸಲಾಗಿತ್ತು. ಅದಕ್ಕೆ ತಕ್ಕಂತೆ ಅದ್ಧೂರಿ ಪ್ರಚಾರವನ್ನೂ ಮಾಡಲಾಗಿತ್ತು. ಆದರೆ ಸಿನಿಮಾ, ನಿರೀಕ್ಷೆ ಮುಟ್ಟಲು ವಿಫಲವಾಗಿದೆ.
ನಿನ್ನೆ (ಜೂನ್ 03) ಸಾವಿರಾರು ಪರದೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆದ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ತನ್ನ ನೇರ ಎದುರಾಳಿಯಾಗಿದ್ದ ತಮಿಳಿನ ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾದ ಎದುರು ಅನಾಯಾಸ ಮಂಡಿ ಊರಿದೆ.
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 10.40 ಕೋಟಿ ಮಾತ್ರವೇ ಎಂದು ಟ್ರೇಡ್ ವಿಶ್ಲೇಷಕರು ಲೆಕ್ಕ ನೀಡಿದ್ದಾರೆ. 300 ಕೋಟಿ ಬಜೆಟ್‌ನ ಸಿನಿಮಾ, ಮೊದಲ ದಿನ 10 ಕೋಟಿ ಗಳಿಸುವುದು ಬಹುತೇಕ ಬಾಕ್ಸ್‌ಆಫೀಸ್‌ನಲ್ಲಿ ಸೋತಂತೆಯೇ.

'ವಿಕ್ರಂ' ಸೂಪರ್ ಹಿಟ್ ಆಗಿದೆ
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದ ಜೊತೆಗೆ ಬಿಡುಗಡೆ ಆಗಿರುವ ಕಮಲ್ ಹಾಸನ್ ನಟನೆಯ ಸೂಪರ್ ಡೂಪರ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ವಿಕ್ರಂ' ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದೆ. ತಮಿಳುನಾಡು ಒಂದರಲ್ಲೇ 20 ಕೋಟಿ ಗಳಿಸಿರುವ 'ವಿಕ್ರಂ', ಭಾರತದ ಇತರ ರಾಜ್ಯಗಳು ಹಾಗೂ ವಿದೇಶಗಳಲ್ಲಿ 45 ಕೋಟಿ ಗಳಿಸಿದೆ. ಆ ಮೂಲಕ ಮೊದಲ ದಿನ ಬರೋಬ್ಬರಿ 65 ಕೋಟಿ ಹಣ ಗಳಿಸಿದ್ದು, ಇನ್ನೆರಡು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಲಿದೆ.

ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣು
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾಕ್ಕೆ ಕೆಟ್ಟ ವಿಮರ್ಶೆಗಳು ಬಂದಿಲ್ಲವಾದರೂ ಸಹ ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಧಾವಿಸಿಲ್ಲ. ಇನ್ನೆರಡು ದಿನಗಳಲ್ಲಿ ಬಾಯಿಂದ ಬಾಯಿಗೆ ಪ್ರಚಾರ ಆಗಿ ಆ ಬಳಿಕ ಜನ ಚಿತ್ರಮಂದಿರಕ್ಕೆ ಬರುವ ಸಾಧ್ಯತೆಯೂ ಇದೆ. ಹಾಗಾಗಿ ಈ ಶನಿವಾರ ಹಾಗೂ ಭಾನುವಾರ ಸಿನಿಮಾ ಹೇಗೆ ಕಲೆಕ್ಷನ್ ಮಾಡುತ್ತದೆ ಎಂಬುದರ ಮೇಲೆ ಸಿನಿಮಾದ ಗೆಲುವು-ಸೋಲು ನಿಂತಿದೆ.

ಸಿನಿಮಾ ಬಗ್ಗೆ ಅಮಿತ್ ಶಾ ಮೆಚ್ಚುಗೆ ಮಾತನ್ನಾಡಿದ್ದರು
ಯಶ್ ರಾಜ್ ಫಿಲಮ್ಸ್ ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾಕ್ಕೆ ಕೈಹಾಕಿ, 300 ಕೋಟಿ ಬಜೆಟ್ ಹೂಡಿಕೆ ಮಾಡಿತ್ತು. 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವನ್ನು ಡಾ ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿದ್ದರು. ಅಕ್ಷಯ್ ಕುಮಾರ್ ಸಹ ಸಿನಿಮಾಕ್ಕೆ ಜೋರಾಗಿ ಪ್ರಚಾರ ಮಾಡಿದ್ದರು. ಹಲವು ದೇವಾಲಯಗಳನ್ನು ಸುತ್ತಿದ್ದರು, ಕೆಲವು ಹಿಂದು ಪರ ಹೇಳಿಕೆಗಳನ್ನು ನೀಡಿದ್ದರು. ಸ್ವತಃ ಗೃಹ ಸಚಿವ ಅವರು ಸಿನಿಮಾವನ್ನು ನೋಡಿ ಹೊಗಳಿದ್ದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಸಿನಿಮಾ ನೋಡಿ, ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದರು. ಇಷ್ಟೆಲ್ಲ ಆದರೂ ಸಹ ಸಿನಿಮಾವು ಮೊದಲ ದಿನ ತೀರ ಸಪ್ಪೆ ಪ್ರದರ್ಶನ ನೀಡಿದೆ.

ಪೃಥ್ವಿರಾಜ್ ಪಾತ್ರದಲ್ಲಿ ಅಕ್ಷಯ್ ಕುಮಾರ್
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಚೌಹಾಣ್ ಪಾತ್ರದಲ್ಲಿ ನಟಿಸಿದ್ದಾರೆ. ಸುಂದರಿ ಮಾನುಷಿ ಚಿಲ್ಲರ್ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸೋನು ಸೂದ್, ಸಂಜಯ್ ದತ್, ಮಾನವ್ ವಿಜೆ, ಅಲಿ ಫಜಲ್ ಇನ್ನು ಹಲವು ಖ್ಯಾತ ನಾಮ ನಟ-ನಟಿಯರಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಶಂಖರ್ ಎಹಸಾನ್ ಲಾಯ್, ಸಚಿನ್ ಬಲ್‌ಹಾರಾ ಮತ್ತು ಅಂಕಿತ್ ಬಲ್ಹಾರಾ. ನಿರ್ದೇಶಕ ಡಾ ಚಂದ್ರಪ್ರಕಾಶ್ ದ್ವಿವೇದಿಯವರದ್ದು.


Click it and Unblock the Notifications











