ವಿಗ್ ವಿಚಾರಕ್ಕೆ ಕಿರಿಕ್ : ಒಂದು ಸಣ್ಣ ಗೆಲುವು ಅಕ್ಷಯ್ ಖನ್ನಾ ತಲೆ ತಿರುಗಿಸಿದೆ- 'ದೃಶ್ಯಂ 3' ನಿರ್ಮಾಪಕ ಕೆಂಡಾಮಂಡಲ
ಸಿನಿಮಾ ರಂಗ ಅಂದಮೇಲೆ ಅಲ್ಲಿ ಸ್ನೇಹ ಮತ್ತು ಸಂಘರ್ಷಗಳು ಸಾಮಾನ್ಯ. ಬಣ್ಣದ ಲೋಕದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು. ಇಲ್ಲಿ ಒಂದು ಗೆಲುವು ವ್ಯಕ್ತಿಯ ಇಡೀ ಜೀವನವನ್ನೇ ಬದಲಿಸಿ ಬಿಡುತ್ತದೆ. ಅದೇ ರೀತಿ ಒಂದು ಸಣ್ಣ ನಿರ್ಧಾರ ದೊಡ್ಡ ವಿವಾದಕ್ಕೆ ನಾಂದಿ ಹಾಡುತ್ತದೆ.ಈಗ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದರಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.
ಚಿತ್ರರಂಗದ ಹಿರಿಯ ನಿರ್ಮಾಪಕರೊಬ್ಬರು ಬಹಿರಂಗವಾಗಿ ಒಬ್ಬ ನಟನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದು ಕೇವಲ ಮಾತಿನ ಚಕಮಕಿಯಾಗಿ ಉಳಿದಿಲ್ಲ, ಬದಲಿಗೆ ಕಾನೂನು ಸಮರದ ಹಂತಕ್ಕೆ ತಲುಪಿದೆ. ಹೌದು, ಸಾಮಾನ್ಯವಾಗಿ ಗಾಸಿಪ್‌ಗಳಿಂದ ದೂರವಿರುವ ಈ ನಟನ ಬಗ್ಗೆ ಈಗ ಕೇಳಿಬರುತ್ತಿರುವ ಸುದ್ದಿಗಳು ಎಲ್ಲರಿಗೂ ಆಶ್ಚರ್ಯ ತಂದಿವೆ. ಚಿತ್ರೀಕರಣಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ನಡೆದಿರುವ ಈ ಬೆಳವಣಿಗೆ ಇಡೀ ಚಿತ್ರತಂಡವನ್ನು ಕಷ್ಟಕ್ಕೆ ದೂಡಿದೆ.

ಕೇವಲ 10 ದಿನ ಬಾಕಿ ಇರುವಾಗ ಶಾಕ್ ಕೊಟ್ಟ ನಟ...
'ದೃಶ್ಯಂ 3' ಚಿತ್ರದ ಬಗ್ಗೆ ಈಗ ದೊಡ್ಡ ಅಪ್ಡೇಟ್ ಹೊರಬಂದಿದೆ. ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರು ನಟ ಅಕ್ಷಯ್ ಖನ್ನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಕ್ಷಯ್ ಖನ್ನಾ ಅವರು ಚಿತ್ರೀಕರಣ ಶುರುವಾಗಲು ಕೇವಲ 10 ದಿನಗಳಿರುವಾಗ ಸಿನಿಮಾದಿಂದ ಹೊರನಡೆದಿದ್ದಾರೆ ಎಂದು ಕುಮಾರ್ ಮಂಗತ್ ದೂರಿದ್ದಾರೆ.
ಅಕ್ಷಯ್ ಖನ್ನಾ ಅವರು ಮೊದಲು ಕಥೆ ಕೇಳಿ ಒಪ್ಪಿಕೊಂಡಿದ್ದರು. ಒಪ್ಪಂದಕ್ಕೂ ಸಹಿ ಹಾಕಿದ್ದರು ಮತ್ತು ಮುಂಗಡ ಹಣವನ್ನೂ ಪಡೆದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವಿಚಿತ್ರ ಬೇಡಿಕೆಗಳನ್ನು ಇಟ್ಟು ಕೈಕೊಟ್ಟಿದ್ದಾರೆ ಎಂದು ನಿರ್ಮಾಪಕರು ಆಕ್ರೋಶ ಹೊರಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ 'ದೃಶ್ಯಂ 3' ತಂಡಕ್ಕೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ ಎನ್ನಲಾಗಿದೆ.
"ಯಶಸ್ಸು ತಲೆಗೆ ಹತ್ತಿದೆ": ಕುಮಾರ್ ಮಂಗತ್ ಕಿಡಿ...
ಇತ್ತೀಚೆಗೆ ಬಿಡುಗಡೆಯಾದ 'ಧುರಂಧರ್' ಸಿನಿಮಾ ಯಶಸ್ವಿಯಾದ ಮೇಲೆ ಅಕ್ಷಯ್ ಖನ್ನಾ ಬದಲಾಗಿದ್ದಾರೆ ಎಂಬುದು ನಿರ್ಮಾಪಕರ ವಾದ. ಧುರಂಧರ್ ಚಿತ್ರದ ಸಕ್ಸಸ್ ನಂತರ ಅಕ್ಷಯ್ ಅವರ ಅಹಂಕಾರ ಹೆಚ್ಚಾಗಿದೆ. ಅವರಿಗೆ ಯಶಸ್ಸು ತಲೆಗೆ ಹತ್ತಿದೆ. ಈಗ ಅವರು ನನ್ನ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಕುಮಾರ್ ಮಂಗತ್ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಅಕ್ಷಯ್ ಖನ್ನಾ ಈ ಹಿಂದೆ 'ದೃಶ್ಯಂ 2' ನಲ್ಲಿ ಅದ್ಭುತವಾಗಿ ನಟಿಸಿದ್ದರು. ಹಾಗಾಗಿ ಮೂರನೇ ಭಾಗದಲ್ಲೂ ಅವರು ಇರಲೇಬೇಕು ಎಂಬುದು ತಂಡದ ಆಶಯವಾಗಿತ್ತು. ಆದರೆ ಈಗ ಸೃಷ್ಟಿಯಾಗಿರುವ ಈ ಗೊಂದಲ ಇಡೀ ಪ್ರಾಜೆಕ್ಟ್ ಮೇಲೆ ಕರಿನೆರಳು ಬೀರಿದೆ.
ವಿಗ್ ವಿಚಾರವೇ ದೊಡ್ಡ ವಿವಾದವಾಯ್ತಾ?
ಈ ವಿವಾದಕ್ಕೆ ಅಸಲಿ ಕಾರಣ ನಟ ಅಕ್ಷಯ್ ಖನ್ನಾ ಅವರ ವಿಗ್ ಎನ್ನಲಾಗುತ್ತಿದೆ. ಶೂಟಿಂಗ್ ಹಂತದಲ್ಲಿ ಅಕ್ಷಯ್ ಅವರು ಒಂದು ನಿರ್ದಿಷ್ಟ ರೀತಿಯ ವಿಗ್ ಧರಿಸಲು ಪಟ್ಟು ಹಿಡಿದಿದ್ದರಂತೆ. ಆದರೆ ಅದು ಚಿತ್ರದ ಪಾತ್ರಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಇದೇ ವಿಷಯಕ್ಕೆ ನಿರ್ಮಾಪಕರು ಮತ್ತು ನಟನ ನಡುವೆ ಮನಸ್ತಾಪ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿನಿಮಾ ಇಂಡಸ್ಟ್ರಿಯಲ್ಲಿ ವೃತ್ತಿಪರತೆ ಬಹಳ ಮುಖ್ಯ. ಅಕ್ಷಯ್ ಖನ್ನಾ ಅವರಂತಹ ಪ್ರತಿಭಾವಂತ ನಟರಿಂದ ಇಂತಹ ವರ್ತನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಕುಮಾರ್ ಮಂಗತ್ ಅವರ ಆರೋಪಗಳು ನಿಜವಾಗಿದ್ದರೆ, ಇದು ಅಕ್ಷಯ್ ಅವರ ಮುಂದಿನ ಕೆರಿಯರ್ ಮೇಲೆ ಪರಿಣಾಮ ಬೀರಬಹುದು.
ಈಗಾಗಲೇ ಕುಮಾರ್ ಮಂಗತ್ ಅವರು ಅಕ್ಷಯ್ ಖನ್ನಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.


Click it and Unblock the Notifications











