30 ಕ್ಕೆ ಮುನ್ನಾ ಮದುವೆ ಆಗಬೇಡ: ನಟಿಗೆ ತಾಯಿಯ ಸಲಹೆ
'ಹೆಣ್ಣು ಮಕ್ಕಳು ಮಡಿಲ ಕೆಂಡ, ಬೇಗನೆ ಮದುವೆ ಮಾಡಿಬಿಡಬೇಕು' ಈ ಮಾತು ಸಾಕಷ್ಟು ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಬಹುಬೇಗ ಕಸಿದುಕೊಂಡಿತ್ತು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ.
ಹೆಣ್ಣುಮಕ್ಕಳು ಈಗ ಮಡಿಲ ಕೆಂಡವಲ್ಲ, ಹೂ ಎಂಬುದು ನಿಧಾನಕ್ಕೆಯಾದರೂ ಸಾಕಷ್ಟು ಜನರಿಗೆ ಅರ್ಥವಾಗಿದೆ. ಇನ್ನೂ ಹಲವರಿಗೆ ಅರ್ಥವಾಗಬೇಕಿದೆ.
ಸಿನಿಮಾ ನಟಿಯರಂತೂ ಮದುವೆಗಿಂತಲೂ ಹೆಚ್ಚಿಗೆ ತಮ್ಮ ವೃತ್ತಿಗೆ ಆದ್ಯತೆ ಕೊಡುತ್ತಿದ್ದಾರೆ. ಮೊದಲು ವೃತ್ತಿ ನಂತರ ಸಮಯವಿದ್ದರೆ ಮದುವೆ ಎಂಬುದು ನಟಿಯರ ದಿಟ್ಟ ಉತ್ತರ. 'ಮದುವೆ ಯಾವಾಗ?' ಎಂದು ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಉರಿದು ಬಿದ್ದಿರುವ ನಟಿಯರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ ಆ ಪ್ರಶ್ನೆಗಳೇನೂ ನಿಂತಿಲ್ಲ.

ನಟಿ ಅಲಯಾಗೆ ಇತ್ತೀಚೆಗೆ ಇದೇ ಪ್ರಶ್ನೆ ಎದುರಾಗಿದೆ. ಇದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟಿರುವ ಅಲಯಾ, 'ನನ್ನ ಅಮ್ಮ ಹೇಳಿದ್ದಾರೆ, 30 ಕ್ಕೆ ಮುನ್ನಾ ಮದುವೆ ಆಗಬೇಡವೆಂದು, ಅಮ್ಮನ ಮಾತನ್ನು ಪಾಲಿಸುತ್ತೇನೆ' ಎಂದಿದ್ದಾರೆ. ಅಲಯಾಗೆ ಇನ್ನೂ 23 ವರ್ಷ ವಯಸ್ಸು. ಅಲಯಾರ ತಾಯಿ ನಟಿ ಪೂಜಾ ಬೇಡಿ.
ಸಿಂಗಲ್ ಪೇರೆಂಟ್ ಇಂದ ಬೆಳೆಸಲ್ಪಟ್ಟ ಮಕ್ಕಳು ಹೆಚ್ಚು ಸ್ವಾಲಂಬಿಗಳಾಗಿರುತ್ತಾರೆ ಎಂದಿರುವ ಅಲಯಾ, 'ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದಳು, ನಾನು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು' ಎಂದಿದ್ದಾರೆ ಅಲಯಾ.
ಅಲಯಾರ ತಾಯಿ ಪೂಜಾ ಬೇಡಿ ಮತ್ತು ತಂದೆ ಇಬ್ರಾಹಿಮ್ ಫರ್ನೀಚರ್‌ವಾಲಾ 2003 ರಲ್ಲಿ ವಿಚ್ಛೇಧನ ಪಡೆದಿದ್ದರು. 'ಜವಾನಿ ಜಾನೇಮನ್' ಸಿನಿಮಾದ ಮೂಲಕ ಅಲಯಾ ಬಾಲಿವುಡ್ ಪ್ರವೇಶಿಸಿದರು. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಾಯಕರಾಗಿದ್ದರು. ಟಬು ಸಹ ಸಿನಿಮಾದಲ್ಲಿ ನಟಿಸಿದ್ದರು.


Click it and Unblock the Notifications











