ರಾಮಾಯಣದಲ್ಲಿ ರಣ್ಭೀರ್ ಕಪೂರ್ ; ಸಂಗೀತದ ಮೇಲೆ ಈಗ ಆಲಿಯಾಗೆ ಒಲವು..!
ಮದುವೆ ಆದ ಮೇಲೆ ನಾಯಕಿಯರಿಗೆ ಚಿತ್ರರಂಗ ಮಣೆ ಹಾಕಲ್ಲ ಅನ್ನುವ ಮಾತು ಇದೆ. ಅಂತಹದ್ದರಲ್ಲಿ ಮಕ್ಕಳಾದರೆ ಮುಗಿತು. ಬಣ್ಣದ ಕನಸು ಬಹುತೇಕ ಕಮರಿ ಹೋದಂತೆಯೇ ಅನ್ನುವ ಅಭಿಪ್ರಾಯ ಅನೇಕರದ್ದು. ಆದರೆ ಈ ಮಾತು ಕೆಲ ನಾಯಕಿಯರಿಗೆ ಅಪ್ಲೈ ಆಗಲ್ಲ. ಬೇರೆಯವರ ಅಭಿಪ್ರಾಯ ಇವರ ಮೇಲೆ ಪರಿಣಾಮ ಬೀರಲ್ಲ. ಇದಕ್ಕೆ ಸಾಕ್ಷಿ ಅನ್ನುವಂತೆ ಮದುವೆ ಆದ ನಂತರ ಕೆಲ ನಾಯಕಿಯರ ಬೇಡಿಕೆ ಹೆಚ್ಚಾಗುತ್ತೆ. ವೈವಿಧ್ಯಮಯ ಪಾತ್ರಗಳೆಲ್ಲ ಅರಸಿಕೊಂಡು ಹೋಗುತ್ತವೆ. ಇದಕ್ಕೆ ಆಲಿಯಾ ಭಟ್ ಸದ್ಯದ ಉದಾಹರಣೆ.
ಹೌದು, ಒಂದಾದ ಮೇಲೊಂದು ಸಿನಿಮಾ ಮಾಡುತ್ತಾ ಯಶಸ್ಸಿನ ಶಿಖರವನ್ನೇರುತ್ತಿರುವ ಆಲಿಯಾ ಬಾಲಿವುಡ್ ನ ಯಶಸ್ವಿ ಹಾಗೂ ಬೇಡಿಕೆ ನಟಿಮಣಿಗಳ ಪೈಕಿ ಒಬ್ಬರು. ಪಾತ್ರದಿಂದ ಪಾತ್ರಕ್ಕೆ.. ಚಿತ್ರದಿಂದ ಚಿತ್ರಕ್ಕೆ.. ಪ್ರಬುದ್ಧತೆಯನ್ನ ಬೆಳೆಸಿಕೊಳ್ಳುತ್ತಿರುವ ಆಲಿಯಾ ಭಟ್, ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ನಂತರ ಸಂಜಯ್ ಲೀಲಾ ಬನ್ಸಾಲಿ ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರದ ಹೆಸರು ಲವ್ ಆಂಡ್ ವಾರ್.

ವಿಶೇಷ ಅಂದರೆ ಈ ಚಿತ್ರದ ನಾಯಕ ಬೇರೆ ಯಾರು ಅಲ್ಲ ಬದಲಿಗೆ ರಣ್ಭೀರ್ ಕಪೂರ್. ವಿಕ್ಕಿ ಕೌಶಲ್ ಈ ಚಿತ್ರದ ಮತ್ತೊಬ್ಬ ನಾಯಕ. ಈ ವಿಚಾರ ನಿಮಗೆ ಗೊತ್ತೇ ಇರಬೇಕು. ಸದ್ಯದ ಸಮಾಚಾರ ಏನೆಂದರೆ ಸಂಜಯ್ ಲೀಲಾ ಬನ್ಸಾಲಿ ಸಾರಥ್ಯದಲ್ಲಿ ಸಿದ್ಧವಾಗಲಿರುವ ಲವ್ ಆಂಡ್ ವಾರ್ ಚಿತ್ರದಲ್ಲಿ ಅಂದಕಾಲತ್ತಿಲ್ ನ ಜನಪ್ರಿಯ ಸಂಗಮ ಸಿನಿಮಾದ ಆತ್ಮ ಕಾಣಿಸಲಿದೆ.
ಹೌದು, ರಾಜ್ ಕಪೂರ್, ವೈಜಯಂತಿಮಾಲಾ ಮತ್ತು ರಾಜೇಂದ್ರ ಕುಮಾರ್ ಅವರ 'ಸಂಗಮ್' ಚಿತ್ರದಿಂದ ಸ್ಫೂರ್ತಿಯನ್ನ ಪಡೆದು ಸಂಜಯ್ ಲೀಲಾ ಬನ್ಸಾಲಿ ಚಿತ್ರದ ಕಥೆಯನ್ನ ಹೆಣೆದಿದ್ದಾರೆ. ಇನ್ನೂ.. ಸಂಗಮ್ ಚಿತ್ರದಿಂದ ಬನ್ಸಾಲಿ ಕೇವಲ ಸ್ಫೂರ್ತಿಯನ್ನಷ್ಟೇ ಪಡೆದಿದ್ದಾರಾ ಅಥವಾ ಪ್ರೇರಣೆಯ ಗೀತೆಯನ್ನ ಹಾಡುತ್ತಾ ಪೂರ್ತಿ ಚಿತ್ರವನ್ನೇ ಯಥಾವತ್ತು ನಕಲು ಮಾಡುತ್ತಾರಾ ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಆಲಿಯಾ ಈ ಚಿತ್ರದಲ್ಲಿ ಸಂಗೀತಾಸಕ್ತಿಯನ್ನ ಹೊಂದಿರುವ ಸುಂದರಿಯ ಪಾತ್ರವನ್ನ ನಿರ್ವಹಿಸಲಿದ್ದಾರೆ..ಇನ್ನೂ ಆಲಿಯಾ ಭಟ್ ಹಿಂದೆ ಒಂದೆರಡು ಸಲ ತಮ್ಮ ಚಿತ್ರದ ಹಾಡನ್ನ ತಾವೇ ಹಾಡಿದ್ದಾರೆ. ಈ ಕಾರಣಕ್ಕೆ ಈ ಚಿತ್ರದ ಚಿತ್ರೀಕರಣಕ್ಕೆ ಕಾತುರರಾಗಿದ್ದಾರೆ ಆಲಿಯಾ ಭಟ್

ಉಳಿದಂತೆ ಲವ್ ಆಂಡ್ ವಾರ್ ಚಿತ್ರದ ಚಿತ್ರೀಕರಣ ಎಂದಿನಿಂದ ಆರಂಭವಾಗಲಿದೆ ಅನ್ನುವುದಕ್ಕೆ ಉತ್ತರ ಇಲ್ಲ. ಯಾಕೆಂದರೆ ರಣ್ಭೀರ್ ಕಪೂರ್ ಸದ್ಯಕ್ಕೆ ರಾಮಾಯಣ ಚಿತ್ರದ ಗುಂಗಿನಲ್ಲಿದ್ದಾರೆ. ಇನ್ನೂ ಆಲಿಯಾ ನಟನೆಯ ಜೊತೆ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮ್ಮದೇ ನಿರ್ಮಾಣದಡಿ ಸಿದ್ಧವಾಗುತ್ತಿರುವ ಜಿಗ್ರಾ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. YRF ನ ಸ್ಪೈ ಯೂನಿವರ್ಸ್‌ನಲ್ಲಿಯೂ ಕೂಡ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಇತ್ತ ಸಮಜಯ್ ಲೀಲಾ ಬನ್ಸಾಲಿ ತಮ್ಮ ಹೀರಾಮಂಡಿ ವೆಬ್ ಸರಣಿಯ ಪ್ರಚಾರದ ಕಡೆ ಗಮನ ಕೊಟ್ಟಿದ್ದಾರೆ. ಈ ಕಾರಣಕ್ಕೆ ಲವ್ ಆಂಡ್ ವಾರ್ ಈ ವರ್ಷವೇ ಆರಂಭವಾಗಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ


Click it and Unblock the Notifications











