Alia-Ranbir: ಆಲಿಯಾ ಭಟ್- ರಣ್ಬೀರ್ ಮದುವೆ ದಿನಾಂಕ, ಸ್ಥಳ ನಿಗದಿ
ಬಾಲಿವುಡ್ ತಾರಾ ಜೋಡಿ ಆಲಿಯಾ ಭಟ್ ಹಾಗೂ ರಣ್ಬೀರ್ ಕಪೂರ್ ವಿವಾಹವಾಗುತ್ತಾರೆ ಎಂಬುದು ಹೊಸ ಸುದ್ದಿಯೇನಲ್ಲ. ಈ ಜೋಡಿ ವಿವಾಹವಾಗಲಿದ್ದಾರೆ ಎಂದು ಕಳೆದ ವರ್ಷದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಈಗ ಈ ಜೋಡಿಯ ವಿವಾಹ ದಿನಾಂಕ ಹಾಗೂ ಸ್ಥಳ ನಿಗದಿಯಾಗಿದೆ.
ಆಲಿಯಾ ಬಟ್-ರಣ್ಬೀರ್ ಕಪೂರ್ ಅವರುಗಳು ಏಪ್ರಿಲ್‌ನಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗುತ್ತು, ಆದರೆ ದಿನಾಂಕ ಪ್ರಕಟಿಸಲಾಗಿರಲಿಲ್ಲ. ಆದರೆ ಈಗ ದಿನಾಂಕವೂ ನಿಗದಿಯಾಗಿದ್ದು, ಏಪ್ರಿಲ್ 17 ರಂದು ಈ ತಾರಾ ಜೋಡಿ ಹಸೆಮಣೆ ಏರಲಿದ್ದಾರೆ.
ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳು ವಿದೇಶದಲ್ಲಿ ವಿವಾಹವಾಗುವುದು ಇತ್ತೀಚಿನ ಟ್ರೆಂಡ್ ಆಗಿದೆ. ಆದರೆ ಈ ಟ್ರೆಂಡ್ ಅನ್ನು ಮುರಿಯುತ್ತಿರುವ ಆಲಿಯಾ-ರಣ್ಬೀರ್ ಭಾರತದಲ್ಲಿಯೇ ವಿವಾಹವಾಗಲಿದ್ದಾರೆ. ಹಾಗೆಂದು ಇರುವ ದೇಶದ ಯಾವುದೊ ಪ್ರತಿಷ್ಠಿತ ಹೋಟೆಲ್‌ನಲ್ಲೊ, ರೆಸಾರ್ಟ್‌ನಲ್ಲೊ ವಿವಾಹವಾಗುತ್ತಿಲ್ಲ. ಬದಲಿಗೆ ತಮ್ಮದೇ ಪೂರ್ವಜರ ಜಾಗದಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ.

ಕಪೂರ್ ಕುಟುಂಬದ ಒಡೆತನದ ಐತಿಹಾಸಿಕ ಸ್ಟುಡಿಯೋ ಆರ್‌ಕೆ ಸ್ಟುಡಿಯೋನಲ್ಲಿ ರಣ್ಬೀರ್ ಹಾಗೂ ಆಲಿಯಾ ಭಟ್ ವಿವಾಹವಾಗುತ್ತಿದ್ದಾರೆ. ಈ ವಿಚಾರವನ್ನು ರಣ್ಬೀರ್ ಕುಟುಂಬದ ಆಪ್ತರು ಬಾಲಿವುಡ್‌ನ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ರಣ್ಬೀರ್ ಕಪೂರ್ ಅವರ ತಾತ ರಾಜ್ ಕಪೂರ್ ಕಟ್ಟಿದ ಸ್ಟುಡಿಯೋ ಇದಾಗಿದ್ದು ಇದೇ ಸ್ಟುಡಿಯೋದಲ್ಲಿ ಈಗ ರಣ್ಬೀರ್-ಆಲಿಯಾ ವಿವಾಹವಾಗುತ್ತಿದ್ದಾರೆ. ರಣ್ಬೀರ್ ತಂದೆ ರಿಶಿ ಕಪೂರ್ ಹಾಗೂ ನೀತಾ ಅವರ ವಿವಾಹ ಆರ್‌ಕೆ ಹೌಸ್‌ನಲ್ಲಿ ಆಗಿತ್ತು. ರಣ್ಬೀರ್-ಆಲಿಯಾ ವಿವಾಹಕ್ಕೆ ಕುಟುಂಬದವರು ಮತ್ತು ತಾರಾ ಜೋಡಿಯ ಅತ್ಯಾಪ್ತ ಗೆಳೆಯರಿಗಷ್ಟೆ ಆಹ್ವಾನವಿದೆ.
ರಣ್ಬೀರ್ ಹಾಗೂ ಆಲಿಯಾ ಕಳೆದ ವರ್ಷವೇ ವಿವಾಹವಾಗಬೇಕಿತ್ತು. ಆದರೆ ರಣ್ಬೀರ್ ತಂದೆ ರಿಶಿ ಕಪೂರ್ ನಿಧನರಾದ ಕಾರಣ ವಿವಾಹ ಮುಂದೂಡಲಾಗಿತ್ತು. ಈಗ ಕೊನೆಗೂ ಈ ತಾರಾ ಜೋಡಿಯ ವಿವಾಹ ನಿಶ್ಚಯವಾಗಿದೆ.
ರಣ್ಬೀರ್ ಹಾಗೂ ಆಲಿಯಾ ಇಬ್ಬರು ಬಾಲಿವುಡ್‌ನ ಬಹು ಬೇಡಿಕೆಯ ನಟ-ನಟಿಯರಾಗಿದ್ದು, ಇವರು ಒಟ್ಟಿಗೆ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಮದುವೆಯಾದ ಬಳಿಕ ಈ ಜೋಡಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲಿದೆ. ರಣ್ಬೀರ್ ಕಪೂರ್ ಈಗಾಗಲೇ 'ಅನಿಮಲ್' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿ. ಅದರ ಬಳಿಕ ಶಮ್ಶೇರಾ ಹೆಸರಿನ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.
ಇನ್ನು ಆಲಿಯಾ ಭಟ್ ಅಂತೂ ಈ ವರ್ಷ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಹಿಟ್ ಆದ ಬೆನ್ನಲ್ಲೆ ಬಿಡುಗಡೆ ಆದ 'RRR' ಸಿನಿಮಾ ಸಹ ಹಿಟ್ ಆಗಿದೆ. ಅದರ ಬಳಿಕ ಈಗ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆ ಆಗಲಿದೆ. ನಂತರ 'ಜೀ ಲೇ ಜರಾ', 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ', 'ತಕ್ತ್', ಸಲ್ಮಾನ್ ಜೊತೆ 'ಇನ್‌ಶಾ ಅಲ್ಹಾ', 'ಆಶಿಕಿ 3' ಸಿನಿಮಾಗಳಲ್ಲಿ ನಟಿಸಲಿದ್ದಾರೆ.


Click it and Unblock the Notifications











