'ಬ್ರಹ್ಮಾಸ್ತ್ರ' ಚಿತ್ರದ 30 ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕುವಂತೆ ನಿರ್ಮಾಪಕರು ಹೇಳಿದ್ದೇಕೆ?
ಬಾಲಿವುಡ್ ನಟ ರಣಬೀರ್ ಮತ್ತು ಅಲಿಯಾ ಭಟ್ ಅಭಿನಯದ ಬಹುನಿರೀಕ್ಷೆಯ ಬ್ರಹ್ಮಾಸ್ತ್ರ ಸಿನಿಮಾ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಸುಮಾರು ಎರಡು ವರ್ಷಗಳಿಂದ ಚಿತ್ರೀಕರಣ ಮಾಡುತ್ತಲೇ ಇರುವ ಬ್ರಹ್ಮಾಸ್ತ್ರ ಸಿನಿಮಾ ಹಲವು ಕಾರಣಗಳಿಂದ ತಡವಾಗುತ್ತಿದೆ.
ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬ್ರಹ್ಮಾಸ್ತ್ರ ಆಕ್ಷನ್ ಫ್ಯಾಂಟಸಿ ಸಿನಿಮಾಗೆ ಅಯಾನ್ ಮುಖರ್ಜಿ ಅಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದರೆ ರಣಬೀರ್ ಮತ್ತು ಅಲಿಯಾ ಭಟ್ ಜೊತೆಗೆ ಬಿಗ್ ಬಿ ಅಮಿತಾಬ್ ಬಚ್ಚನ್, ತೆಲುಗು ನಟ ನಾಗಾರ್ಜುನ ಮತ್ತು ಮೌನಿ ರಾಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವರ್ಷಗಳಿಂದ ಚಿತ್ರೀಕರಣ ಮಾಡುತ್ತಲೇ ಇರುವ ಬ್ರಹ್ಮಾಸ್ತ್ರ ಸಿನಿಮಾದಿಂದ ಇದೀಗ ಒಂದು ಸುದ್ದಿ ಹರಿದಾಡುತ್ತಿದೆ. ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಫಾಕ್ಸ್ ಮತ್ತು ಡಿಸ್ನಿ ಅವರು ಚಿತ್ರದ 30 ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕುವಂತೆ ಒತ್ತಾಯ ಮಾಡಿದ್ದಾರಂತೆ.

ಇಂದಿನ ದಿನಗಳಲ್ಲಿ ಪ್ರೇಕ್ಷಕರು ದೀರ್ಘಸಮಯದ ಸಿನಿಮಾಗಳನ್ನು ನೋಡಲು ಇಷ್ಟಪಡುವುದಿಲ್ಲ. ಅಲ್ಲದೆ ಬಾಕ್ಸ್ ಆಫೀಸ್ ಆದಾಯದ ಮೇಲು ಹೊಡೆತ ಬೀಳುತ್ತೆ ಎನ್ನುವ ಕಾರಣಕ್ಕೆ ನಿರ್ಮಾಪಕರು 30 ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕುವಂತೆ ನಿರ್ದೇಶಕರಿಗೆ ಒತ್ತಡ ಹೇರುತ್ತಿದ್ದಾರೆ.
ಆದರೆ ನಿರ್ದೇಶಕ ಅಯಾನ್ ಮುಖರ್ಜಿಗೆ ಇದು ಇಷ್ಟವಾಗುತ್ತಿಲ್ಲವಂತೆ. ತುಂಬಾ ಕಷ್ಟಪಟ್ಟು ಮಾಡಿದ ಸಿನಿಮಾದ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪುತ್ತಿಲ್ಲವಂತೆ. ಅಲ್ಲದೆ ಅಯಾನ್ ಮುಖರ್ಜಿ ಸಹ ಬಂಡವಾಳ ಹೂಡಿದ್ದಾರೆ. ಹಾಗಾಗಿ ಸಿನಿಮಾದ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನೇನು 7 ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಈ ಸಮಯದಲ್ಲಿ ಹೀಗೆ ದೃಶ್ಯಕ್ಕೆ ಕತ್ತರಿ ಹಾಕಲು ಹೇಳುತ್ತಿರುವುದು ಇಷ್ಟವಾಗಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಸಿನಿಮಾ ಬಿಡುಗಡೆ ಆಗುತ್ತಿರುವುದು ತೀರಾ ವಿಳಂಬವಾದ ಕಾರಣ ಬೇಗ ಚಿತ್ರೀಕರಣ ಮುಗಿಸಿ ರಿಲೀಸ್ ಮಾಡುವ ತಯಾರಿಯಲ್ಲಿದ್ದಾರೆ ನಿರ್ದೇಶಕ ಅಯಾನ್. ಈ ಮೊದಲು ಸಿನಿಮಾತಂಡ ಪ್ಲಾನ್ ಮಾಡಿದ ಪ್ರಕಾರ ಬ್ರಹ್ಮಾಸ್ತ್ರ ಸಿನಿಮಾ ಡಿಸೆಂಬರ್ 4ರಂದು ರಿಲೀಸ್ ಆಗಬೇಕಿತ್ತು. ಆದರೆ ಈ ವರ್ಷ ಸಿನಿಮಾ ರಿಲೀಸ್ ಆಗುತ್ತಾ, ಚಿತ್ರದ 30 ನಿಮಿಷದ ದೃಶ್ಯಕ್ಕೆ ಕತ್ತರಿ ಬೀಳುತ್ತಾ ಎಂದು ಕಾದುನೋಡಬೇಕು.


Click it and Unblock the Notifications











