ಫ್ರೆಂಚ್ ಸಿನಿಮಾದ ಕಾಪಿ-ಪೇಸ್ಟ್ ಅಂತೆ ಆಲಿಯಾ ಭಟ್ ಆಲ್ಫಾ ; ಬಾಲಿವುಡ್ ವಿರುದ್ದ ಹೆಚ್ಚಿದ ಆಕ್ರೋಶ
ಚಿತ್ರರಂಗದಲ್ಲಿ ಪ್ರೇರಣೆ ಗೀತೆಯನ್ನು ಹಾಡುತ್ತಾ ಚಿತ್ರ ಮಾಡುವುದಕ್ಕೂ.. ಯಥಾವತ್ತು ನಕಲು ಮಾಡುವುದಕ್ಕೂ.. ತುಂಬಾ ವ್ಯತ್ಯಾಸ ಇದೆ. ಆದರೆ ಕಲೆ ಮತ್ತು ಕಾಸು ಬೆರೆತ ಉದ್ಯಮದಲ್ಲಿ ಹಲವರು ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ.ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ.
ತಪ್ಪು ಮಾಡುವವರು ತಾವು ಮಾಡುವ ತಪ್ಪು ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುವುದು ತಪ್ಪು. ಆದರೆ ಇದನ್ನರಿಯದೇ ಇವರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗಲ್ಲ ಅನ್ನೋ ಭ್ರಮೆಯಲ್ಲಿ ಇರುತ್ತಾರೆ. ಈ ಸಾಲಿನಲ್ಲಿ ಆಲಿಯಾ ಭಟ್ ಅಭಿನಯದ ''ಆಲ್ಫಾ'' ಕೂಡ ಇದೆ ಎನ್ನುವುದು ಸದ್ಯಕ್ಕೆ ಹಲವರು ಮಾಡುತ್ತಿರುವ ವಾದ.

ಹೌದು, ''ಆಲ್ಫಾ''.. ಆಲಿಯಾ ಭಟ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಪುರುಷ ಪ್ರದಾನ ಚಿತ್ರರಂಗದಲ್ಲಿ ಮಾಡಲಾಗಿರುವ ವುಮೆನ್ ಓರಿಯೆಂಟಡ್ ಸಿನಿಮಾ. ಒಂದಲ್ಲ, ಎರಡಲ್ಲ, ಮೂರು ನಾಲ್ಕು ಬಾರಿ ಈ ಚಿತ್ರದ ಬಿಡುಗಡೆಯ ದಿನದಲ್ಲಿ ಬದಲಾವಣೆಗಳಾಗಿತ್ತು. ''ಧುರಂಧರ್'' ಚಿತ್ರದ ಅತ್ಯದ್ಭುತ ಗೆಲುವಿನಿಂದ ''ಆಲ್ಫಾ'' ಮೇಲೆ ಪ್ರೇಕ್ಷಕರಲ್ಲಿ ಅನುಮಾನವೂ ಇತ್ತು.
ಯಾಕೆಂದರೆ ''ಧುರಂಧರ್'' ನಂತರ ಸ್ಪೈ ಯುನಿವರ್ಸ್‌ನ ನೋಡುವ ಪ್ರೇಕ್ಷಕರ ದೃಷ್ಟಿಕೋನ ಬದಲಾಗಿದೆ. ಆದರೆ, ದುರಾದೃಷ್ಟ ಈ ವಿಚಾರ ಚಿತ್ರದ ನಿರ್ಮಾಣ ಸಂಸ್ಥೆ ಯಶ್ ರಾಜ್‌ಗೆ ಇನ್ನು ಮನವರಿಕೆಯಾಗಿಲ್ಲ. ಹೀಗಾಗಿಯೇ ನಿನ್ನೆ (ಜೂನ್ 10) ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಹಲವರು ''ಆಲ್ಫಾ''ನ ನೋಡಿ ನಗಾಡುತ್ತಿದ್ದಾರೆ, ಕಾಲೆಳೆಯುತ್ತಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಸೋಲಿಂದ ಈ ''ಆಲ್ಫಾ''ನ ಪಾರು ಮಾಡಲು ಸಾಧ್ಯ ಇಲ್ಲವೇ ಇಲ್ಲ ಎಂಬ ಭವಿಷ್ಯವನ್ನು ಕೂಡ ಹೇಳುತ್ತಿದ್ದಾರೆ..
ಹೀಗಿರುವಾಗ ಇದೀಗ ಈ ''ಆಲ್ಫಾ'' ಬಾಲಿವುಡ್‌ನವರ ಸ್ವಂತ ಆಸ್ತಿಯಲ್ಲ. ಬದಲಿಗೆ ಕದ್ದ ಮಾಲು ಎನ್ನುವ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ಮತ್ತದೇ ನಿನ್ನೆ (ಜೂನ್ 10) ಬಿಡುಗಡೆಯಾಗಿರುವ ಚಿಕ್ಕ ತುಣುಕು.
ಹೌದು, ಅಸಲಿಗೆ ''ಆಲ್ಫಾ'' ಚಿತ್ರದ ಟೀಸರ್ 1990ರಲ್ಲಿ ಬಿಡುಗಡೆಯಾಗಿದ್ದ ಜಗದ್ವಿಖ್ಯಾತ ಫ್ರೆಂಚ್ ಸಿನಿಮಾ ''ಲಾ ಫೆಮ್ಮೆ ನಿಕಿತಾ''ಗೆ ಹೋಲುತ್ತೆ. ವಿಪರ್ಯಾಸ ಅಂದರೆ ಈ ''ಆಲ್ಫಾ''ನ ಮೊದಲ ದೃಶ್ಯವೇ ''ಲಾ ಫೆಮ್ಮೆ ನಿಕಿತಾ''ನ ನೆನಪಿಸುವಂತೆ ಇದೆ. ಯಥಾವತ್ತು ದೃಶ್ಯ. ಪಾತ್ರಧಾರಿಗಳು ಮತ್ತು ಕಾಲಮಾನ ಬೇರೆಯಷ್ಟೇ.

ಈ ಹಿನ್ನೆಲೆ ಹಲವರು ಈಗ '' ಆಲ್ಫಾ'' ಚಿತ್ರವನ್ನು ಟ್ರೋಲ್ ಮಾಡುತ್ತಿದ್ಧಾರೆ. ಸ್ವಂತಿಕೆ, ಸೃಜನ ಶೀಲತೆಯ ಕುರಿತು ಚರ್ಚೆ ಮಾಡುತ್ತಿದ್ದಾರೆ. ಫ್ರೆಂಚ್‌ದಿಂದ ಹಿಂದಿಗೆ ಚಿತ್ರವನ್ನು ಯಥಾವತ್ತಾಗಿ ಭಟ್ಟಿ ಇಳಿಸಲಾಗಿದೆ ಎಂದು ತಮ್ಮ ಆಕ್ರೋಶವನ್ನು ಕೂಡ ಹಲವರು ಹೊರ ಹಾಕುತ್ತಿದ್ಧಾರೆ. ಆಲಿಯಾ ಭಟ್ ಮತ್ತು ಚಿತ್ರತಂಡವನ್ನು ಟ್ರೋಲ್ ಕೂಡ ಮಾಡುತ್ತಿದ್ಧಾರೆ.
ಕೇವಲ 60 ಸೆಕೆಂಡ್‌ಗಳ ಒಂದು ಸಣ್ಣ ಟೀಸರ್ ನೋಡಿ ಇಡೀ ಸಿನಿಮಾವನ್ನು ಅಥವಾ ಒಬ್ಬ ನಟಿಯ ನಟನಾ ಸಾಮರ್ಥ್ಯವನ್ನು ನಿರ್ಣಯಿಸುವುದು ತಪ್ಪು ಎಂದು ಅನೇಕ ಸಿನಿಮಾ ವಿಶ್ಲೇಷಕರು ಮತ್ತು ಅಭಿಮಾನಿಗಳು ವಾದಿಸುತ್ತಿದ್ದಾರೆ. ಆಲಿಯಾ ಭಟ್ ಇದುವರೆಗೆ ಅತ್ಯುತ್ತಮ ಸಿನಿಮಾಗಳನ್ನು ನೀಡಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ನಟಿ ಎಂಬುದನ್ನು ಮರೆಯಬಾರದು ಎಂದು ನೆನಪಿಸುತ್ತಿದ್ದಾರೆ. ಇಷ್ಟೇ ಅಲ್ಲ ಒಂದು ವೇಳೆ ''ಲಾ ಫೆಮ್ಮೆ ನಿಕಿತಾ'' ಚಿತ್ರದ ಯಥಾವತ್ತು ನಕಲಾದರು ಕೂಡ ಜಾಗತಿಕ ಸಿನಿಮಾಗಳಿಗೆ ಭಾರತೀಯ ಚಿತ್ರರಂಗ ನೀಡಿದ ಒಂದು ಅತ್ಯುತ್ತಮ ಗೌರವ ಅಥವಾ ಪ್ರೇರಣೆ ಎಂದು ಈ ವಿಚಾರವನ್ನು ಪರಿಗಣಿಸಬೇಕು ಎಂಬ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ.
''ಆಲ್ಫಾ'' ಮತ್ತು ''ಲಾ ಫೆಮ್ಮೆ ನಿಕಿತಾ'' ಚಿತ್ರತಂಡದ ವಿವರ ಈ ಕೆಳಗಿನಂತೆ ಇದೆ.
| ವಿವರಗಳು | ಆಲ್ಫಾ | ಲಾ ಫೆಮ್ಮೆ ನಿಕಿತಾ |
|---|---|---|
| ಬಿಡುಗಡೆಯ ವರ್ಷ | 2025 / 2026 | 1990 |
| ಮುಖ್ಯ ತಾರಾಬಳಗ | ಆಲಿಯಾ ಭಟ್, ಶರ್ವರಿ ವಾಗ್, ಬಾಬಿ ಡಿಯೋಲ್, ಅನಿಲ್ ಕಪೂರ್ | ಆನ್ನಿ ಪ್ಯಾರಿಲ್ಲಾಡ್, ಜೀನ್-ಹ್ಯೂಸ್ ಆಂಗ್ಲೇಡ್, ಷೆಕಿ ಕಾರಿಯೋ, ಜೀನ್ ರೆನೋ |
| ನಿರ್ದೇಶಕರು | ಶಿವ್ ರವೈಲ್ | ಲುಕ್ ಬೆಸ್ಸನ್ (Luc Besson) |
| ನಿರ್ಮಾಪಕರು | ಆದಿತ್ಯ ಚೋಪ್ರಾ (YRF - ಯಶ್ ರಾಜ್ ಫಿಲ್ಮ್ಸ್) | ಕ್ಲೌಡ್ ಬೆರ್ರಿ ಮತ್ತು ಲುಕ್ ಬೆಸ್ಸನ್ |
| ಸಂಗೀತ ನಿರ್ದೇಶಕರು | ಸಚಿನ್-ಜಿಗರ್ (ಹಾಡುಗಳು) / ಜೂಲಿಯಸ್ ಪ್ಯಾಕಿಯಮ್ (ಹಿನ್ನೆಲೆ ಸಂಗೀತ) | ಎರಿಕ್ ಸೆರ್ರಾ (Éric Serra) |
| ಛಾಯಾಗ್ರಾಹಕರು | ಸತಿಕ್ ರೇಶ್ಮಿ | ಥಿಯೆರಿ ಅರ್ಬೋಗಾಸ್ಟ್ (Thierry Arbogast) |
| ಚಿತ್ರದ ಭಾಷೆ / ದೇಶ | ಹಿಂದಿ (ಭಾರತ) | ಫ್ರೆಂಚ್ (ಫ್ರಾನ್ಸ್ / ಇಟಲಿ) |


Click it and Unblock the Notifications