ತಾಯಿಯಾಗುತ್ತಿರುವ ಆಲಿಯಾ ಭಟ್: ಆತಂಕದಲ್ಲಿ ಕೆಲ ನಿರ್ಮಾಪಕರು!
ನಟಿ ಆಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಆ ವಿಷಯವನ್ನು ಇಂದಷ್ಟೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ ತಾಯಿಯಾಗುತ್ತಿರುವ ಶುಭ ಸಮಾಚಾರಕ್ಕೆ ಬಾಲಿವುಡ್‌ನ ಸೆಲೆಬ್ರಿಟಿಗಳಾದ ಕರಣ್ ಜೋಹರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಇನ್ನೂ ಹಲವರು ಸಂತಸ ವ್ಯಕ್ತಪಡಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ.
ರಣ್ಬೀರ್ ಕಪುರ್ ತಾಯಿ ನೀತು, ಸಹೋದರಿ ರಿಧಿಮಾ ಹಾಗೂ ಇತರೆ ಕಪೂರ್ ಖಾಂದಾನ್ ಬಹ ಖುಷಿಯಾಗಿದೆ ಕುಟುಂಬಕ್ಕೆ ಹೊಸ ಸದಸ್ಯ ಆಗಮಿಸುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಆಲಿಯಾ ಭಟ್ ತಾಯಿಯಾಗುತ್ತಿರುವ ವಿಷಯ ಎಲ್ಲರಿಗೂ ಖುಷಿ ತಂದಿಲ್ಲ. ವಿಶೇಷವಾಗಿ ಕೆಲವು ನಿರ್ಮಾಪಕರಂತೂ ಆಲಿಯಾ ಭಟ್ ತಾಯಿ ಆಗುತ್ತಿರುವ ವಿಷಯ ಕೇಳಿ ಕಂಗಾಲಾಗಿದ್ದಾರೆ.

ಆಲಿಯಾ ಭಟ್, ಬಾಲಿವುಡ್‌ನ ಏ ಲಿಸ್ಟೆಡ್ ನಟಿಯಾಗಿದ್ದು ಹಲವು ಸಿನಿಮಾಗಳಲ್ಲಿ ಆಲಿಯಾ ತೊಡಗಿಕೊಂಡಿದ್ದಾರೆ. ಆದರೆ ಇದೀಗ ಆಲಿಯಾ ತಾಯಿಯಾಗುತ್ತಿರುವ ಕಾರಣ ಆ ಸಿನಿಮಾಗಳೆಲ್ಲ ಕನಿಷ್ಟ ಒಂದು ವರ್ಷ ತಡವಾಗಲಿವೆ. ಸಿನಿಮಾ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರು ಇದರಿಂದ ತೀವ್ರ ಸಮಸ್ಯೆ ಎದುರಿಸಲಿದ್ದಾರೆ.
ಆಲಿಯಾ ಭಟ್ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಸಿನಿಮಾದ ಬಿಡುಗಡೆ ಸೆಪ್ಟೆಂಬರ್ ತಿಂಗಳಲ್ಲಿ ಆಗಲಿದೆ. ಈ ಸಿನಿಮಾದಲ್ಲಿ ಪತಿ ರಣ್ಬೀರ್ ಕಪೂರ್ ನಾಯಕರಾಗಿದ್ದಾರೆ.
ಇದರ ಹೊರತಾಗಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಆಲಿಯಾರ ಆಪ್ತರಾಗಿರುವ ಕರಣ್ ಜೋಹರ್ ನಿರ್ಮಾಪಕ. ಈಗ ಆಲಿಯಾ ಗರ್ಭಿಣಿ ಆಗಿರುವ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಲಿದೆ.
ಇದರ ಜೊತೆಗೆ ಫರ್ಹಾನ್ ಅಖ್ತರ್ ನಿರ್ದೇಶನದ 'ಜೀ ಲೇ ಜರಾ' ಸಿನಿಮಾದಲ್ಲಿಯೂ ಆಲಿಯಾ ಭಟ್ ನಟಿಸಲಿದ್ದರು. ಈ ಸಿನಿಮಾದಲ್ಲಿ ಆಲಿಯಾ ಜೊತೆ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಇನ್ನೂ ಕೆಲವು ಖ್ಯಾತನಾಮ ನಟರಿದ್ದರು. ಆದರೆ ಇದೀಗ ಆಲಿಯಾರಿಂದಾಗಿ ಈ ಸಿನಿಮಾ ಸಹ ತಡವಾಗುವುದು ಪಕ್ಕಾ ಆಗಿದೆ.
'ಆಶಿಕಿ 3' ಸಿನಿಮಾದಲ್ಲಿ ಸಹ ಆಲಿಯಾ ಭಟ್ ನಟಿಸಬೇಕಿತ್ತು ಆದರೆ ಆ ಸಿನಿಮಾ ಸಹ ಮುಂದೂಡಲಾಗುವುದು ಪಕ್ಕಾ. ಸಲ್ಮಾನ್ ಖಾನ್ ಜೊತೆ 'ಇನ್‌ಶಾ ಅಲ್ಹಾ' ಸಿನಿಮಾದಲ್ಲಿ ಆಲಿಯಾ ನಟಿಸುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಈಗ ಆಲಿಯಾ ಗರ್ಭಿಣಿ ಆಗಿರುವ ಕಾರಣ ಆ ಸಿನಿಮಾ ಸಹ ಮುಂದಕ್ಕೆ ಹೋಗಲಿದೆ.
ಆಲಿಯಾ ಭಟ್ ತಮ್ಮ ವೃತ್ತಿ ಜೀವನದಲ್ಲಿ ಟಾಪ್ ಸ್ಥಾನದಲ್ಲಿರುವಾಗಲೇ ವಿವಾಹವಾಗಿ ತಾಯಿ ಸಹ ಆಗುತ್ತಿದ್ದಾರೆ. ತಾಯಿ ಆದ ಬಳಿಕ ಅವರ ವೃತ್ತಿ ಜೀವನ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











