Alia Bhatt: "ನನ್ನ ಮಗಳು ನನ್ನಂತೆ ನಟಿಯಾಗೋದು ಬೇಡ": ಆಲಿಯಾ ಭಟ್ ಆಸೆ ಏನು?
ಆಲಿಯಾ ಭಟ್ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಬ್ರಹ್ಮಾಸ್ತ್ರ' ಸಿನಿಮಾ ಬಳಿಕ ಮಗಳ ಲಾಲನೆ ಪಾಲನೆಯಲ್ಲಿ ಆಲಿಯಾ ಹೆಚ್ಚು ಬ್ಯುಸಿಯಾಗಿದ್ದರು. ಇದೀಗ ಹೊಸ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ "ನನ್ನ ಮಗಳನ್ನು ನಾನು ನಟಿಯಾಗಿ ನೋಡಲು ಬಯಸುತ್ತಿಲ್ಲ" ಎಂದು ಆಕೆ ಹೇಳಿದ್ದಾರೆ.
ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪ್ರೀತಿಸಿ ಮುದುವೆ ಆಗಿದ್ದು ಗೊತ್ತೇಯಿದೆ. ಮದುವೆಯಾದ 2 ತಿಂಗಳಿಗೆ ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರುವುದಾಗಿ ದಂಪತಿ ಘೋಷಿಸಿದ್ದರು. ಇದು ಕೆಲವರಿಗೆ ಅಚ್ಚರಿ ತಂದಿದ್ದು ಸುಳ್ಳಲ್ಲ. ಇನ್ನು ಏಪ್ರಿಲ್‌ನಲ್ಲಿ ಮದುವೆಯಾಗಿದ್ದ ಜೋಡಿ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಮಗಳು ಹುಟ್ಟಿದ ಬಳಿಕ ಮತ್ತೆ ತೂಕ ಇಳಿಸಿ ಆಲಿಯಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರತಿ ಮಗುವಿನ ತಂದೆ ತಾಯಿಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸುಗಳಿರುತ್ತವೆ. ನಾನು ಸಾಧಿಸದ್ದನ್ನು ನಮ್ಮ ಮಕ್ಕಳು ಸಾಧಿಸಬೇಕು ಎನ್ನುವ ಹಂಬಲ ಇರುತ್ತದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. ಒಳ್ಳೆ ವಿದ್ಯಾಭ್ಯಾಸ ಕೊಡಿಸಿ ಸಾಕಿ ಸಲಹುತ್ತಾರೆ. ಸದ್ಯ ಮಗಳ ಕರಿಯರ್ ಬಗ್ಗೆ ನಟಿ ಆಲಿಯಾ ಭಟ್ ಸಂದರ್ಶನವೊಂದರಲ್ಲಿ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಮಗಳು ನನ್ನ ರೀತಿ ಚಿತ್ರರಂಗಕ್ಕೆ ಬರೋದು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.
ಆಲಿಯಾ ಭಟ್ ತಮ್ಮ 8 ತಿಂಗಳ ಮಗಳು ರಾಹಾಳನ್ನು ವಿಜ್ಞಾನಿಯಾಗಿ ನೋಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. "ನಾನು ನನ್ನ ಮಗಳನ್ನು ನೋಡಿದಾಗಲೆಲ್ಲಾ ನೀನು ವಿಜ್ಞಾನಿ ಆಗುತ್ತೀಯಾ ಎಂದು ಕೇಳುತ್ತೇನೆ. ಯಾಕೆಂದರೆ ನಾನು ವಿಜ್ಞಾನಿ ಆಗಬೇಕು ಎಂದು ಬಯಸಿದ್ದೆ. ಆದರೆ ಅದ್ಉ ಸಾಧ್ಯವಾಗಲಿಲ್ಲ" ಎಂದಿದ್ದಾರೆ. "ನಾನು ಸಿನಿ ಇಂಡಸ್ಟ್ರಿಗೆ ಬಂದ ಮೇಲೆ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಯಿತು. ನಿದ್ರೆ ಇಲ್ಲದೇ ಹಗಲು ರಾತ್ರಿ ಕೆಲಸ ಮಾಡಿದ್ದು ಇದೆ. ಈಗ ನನಗಂತ ಒಂದು ಕುಟುಂಬ ಇದೆ. ಮಗಳು, ಗಂಡ ಇದ್ದಾರೆ. ಕುಟುಂಬಕ್ಕಾಗಿ ಸಂಪೂರ್ಣ ಸಮಯ ಮೀಸಲಿಡಲು ಬಯಸುತ್ತೇನೆ. ಹಾಗಂತ ಚಿತ್ರರಂಗ ಬಿಡಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ" ಎಂದು ವಿವರಿಸಿದ್ದಾರೆ.

ಆಲಿಯಾ ಭಟ್ ಮಾತನಾಡಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬರ್ತಿವೆ. ಕೆಲವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. "ನಿಜ.. ಆಲಿಯಾ ಹೇಳುವಂತೆ ಆಕೆಯ ಪುತ್ರಿ ಸಿನಿಮಾದಲ್ಲಿ ವಿಜ್ಞಾನಿಯಾಗುತ್ತಾಳೆ. ಕರಣ್ ಜೋಹರ್ ಅವಳಿಗಾಗಿ ಒಂದು ಕಥೆ ಸಿದ್ಧಪಡಿಸಿ ಇಟ್ಟಿರುತ್ತಾರೆ. ಸಿನಿಮಾದಲ್ಲಿ ತಪ್ಪದೇ ವಿಜ್ಞಾನಿಯಾಗಿ ರಾಹಾ ನಟಿಸುತ್ತಾಳೆ" ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ನಿಮ್ಮ ಮಗಳು ನಟಿಸುವ ಚಿತ್ರಕ್ಕೆ ಸೈಂಟಿಸ್ಟ್ ಎಂದು ಹೆಸರಿಡುತ್ತಾರೆ ಬಿಡಿ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬಾಲಿವುಡ್‌ನಲ್ಲಿ ನೆಪೋಟಿಸಂ ಬಗ್ಗೆ ಪದೇ ಪದೇ ಚರ್ಚೆ ನಡೀತಿರುತ್ತದೆ. ಈ ವಿಚಾರ ಚರ್ಚೆಗೆ ಬಂದಗಲೆಲ್ಲಾ ಆಲಿಯಾ ಭಟ್, ರಣ್‌ಬೀರ್ ಕಪೂರ್, ವರುಣ್ ಧವನ್, ಸಾರಾ ಅಲಿಖಾನ್, ಜಾನ್ವಿ ಕಪೂರ್‌ರಂತಹ ಸಿನಿಮಾ ಹಿನ್ನೆಲೆಯಿಂದ ಬಂದ ಕಲಾವಿದರ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುತ್ತದೆ. ಅದೇ ಕಾರಣಕ್ಕೆ ಆಲಿಯಾ ಭಟ್ ಮಗಳು ವಿಜ್ಞಾನಿಯಾಗಬೇಕು ಎಂದ ವಿಚಾರದ ಬಗ್ಗೆ ನೆಟ್ಟಿಗರು ಹೀಗೆ ಕುಹಕವಾಡುತ್ತಿದ್ದಾರೆ.
ರಣ್‌ಬೀರ್- ಆಲಿಯಾ ಅಭಿಮಾನಿಗಳು ಮಾತ್ರ ರಾಹ ಖಂಡಿತ ಹೀರೋಯಿನ್ ಆಗ್ತಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. "ರಣ್‌ಬೀರ್ ಒಳ್ಳೆ ನಟ, ಹಾಗಾಗಿ ಮಗಳು ಕೂಡ ಒಳ್ಳೆ ನಟಿ ಆಗುವುದರಲ್ಲಿ ಅನುಮಾನ ಇಲ್ಲ" ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಖಂಡಿತ ಆಕೆ ಮನೆಯ ಸಂಪ್ರದಾಯ ಮುಂದುವರೆಸುತ್ತಾಳೆ, ಅಪ್ಪ ಅಮ್ಮನಂತೆ ಆಕೆ ಕೂಡ ನಟಿಯಾಗುತ್ತಾಳೆ" ಬರೆದಿದ್ದಾರೆ.
ಸದ್ಯ ಆಲಿಯಾ ಭಟ್ ಕೈಯಲ್ಲಿ 2 ಸಿನಿಮಾ ಇದೆ. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣ್‌ವೀರ್ ಸಿಂಗ್ ಜೋಡಿಯಾಗಿ ಮಿಂಚಿದ್ದಾರೆ. ಈ ಸಿನಿಮಾ ಇದೇ ಶುಕ್ರವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಕರಣ್ ಜೋಹರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಧರ್ಮ ಪ್ರೊಡಕ್ಷನ್ಸ್, ವಯಕಾಂ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಜಯಾ ಬಚ್ಚನ್, ಶಾಬಾನಾ ಆಜ್ಮಿ, ಧರ್ಮೇಂದ್ರ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು 'ಹಾರ್ಟ್ ಆಫ್ ಸ್ಟೋನ್' ಎನ್ನುವ ಅಮೇರಿಕನ್ ಸಿನಿಮಾದಲ್ಲಿ ಆಕೆ ನಟಿಸಿದ್ದಾರೆ.


Click it and Unblock the Notifications











