ಆಲ್ ಇಸ್ ವೆಲ್ ; 15 ವರ್ಷದ ನಂತರ 3 ಈಡಿಯಟ್ಸ್ ಚಿತ್ರದ ಸೀಕ್ವೆಲ್ ಮಾಡಲು ಮುಂದಾದ ಆಮಿರ್ ಖಾನ್, ನಿರ್ದೇಶಕ ಯಾರು ?
ಪ್ರತಿ ವರ್ಷ ಬೇರೆ ಬೇರೆ ಭಾಷೆಯಲ್ಲಿ ಹಲವಾರು ಸಿನಿಮಾಗಳು ಬರುತ್ತವೆ. ಹೋಗುತ್ತವೆ. ಕೆಲ ಸಿನಿಮಾಗಳು ಗೆದ್ದರೆ, ಹಲವು ಸಿನಿಮಾಗಳು ಸೋಲುತ್ತವೆ. ಆದರೆ.. ಇದರ ನಡುವೆ ಇನ್ನೂ ಕೆಲ ಸಿನಿಮಾಗಳು ಮನದಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತವೆ. ವರ್ಷ ಅಲ್ಲ ಹಲವು ದಶಕ ಕಳೆದರೂ ಈ ಚಿತ್ರಗಳು ಯಾವತ್ತು ಪ್ರೇಕ್ಷಕರ ಹೃದಯದಿಂದ ಮಾಸುವುದಿಲ್ಲ. ಬದಲಿಗೆ ಸಮಯ ಸಿಕ್ಕಾಗೆಲ್ಲಾ...
ಈ ಚಿತ್ರಗಳನ್ನು ಮೇಲಿಂದ ಮೇಲೆ ಹಲವರು ನೋಡುತ್ತಾರೆ. ಚಿತ್ರದ ಜೊತೆಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಎಷ್ಟೇ ಬಾರಿ ನೋಡಿದರೂ ಕೂಡ ಈ ಚಿತ್ರಗಳು ಬೋರ್ ಹೊಡೆಸುವುದಿಲ್ಲ. ಆ ಪೈಕಿ ''3 ಈಡಿಯಟ್ಸ್'' ಚಿತ್ರ ಕೂಡ ಒಂದು.

ಹೌದು, ''3 ಈಡಿಯಟ್ಸ್'' .. 15 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಕಲ್ಟ್ ಕ್ಲಾಸಿಕ್ ಚಿತ್ರ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಕೇವಲ ಬಾಕ್ಸಾಫೀಸ್‌ನಲ್ಲಿ ದಾಖಲೆಯಷ್ಟೇ ಬರೆಯಲಿಲ್ಲ. ಅಸಂಖ್ಯಾತ ಜನರ ಹೃದಯವನ್ನು ಗೆದ್ದಿತ್ತು. ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರಶ್ನೆ ಮಾಡಿತ್ತು. ರಾಂಚೋ.. ಫರ್ಹಾನ್.. ರಾಜು.. ಪಾತ್ರಗಳಲ್ಲಿ ಹಲವರಿಗೆ ತಮ್ಮ ಬದುಕು ಕಂಡಿತ್ತು.
ಇಷ್ಟೇ ಅಲ್ಲ ಅತ್ಯುತ್ತಮ ಜನಪ್ರಿಯ ಚಿತ್ರ, ಅತ್ಯುತ್ತಮ ಸಾಹಿತ್ಯ ಮತ್ತು ಆಡಿಯೋಗ್ರಫಿ ವಿಭಾಗದಲ್ಲಿ ಒಟ್ಟು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತ್ತು. ಚೀನಾದ ಸಿನಿಮಾರಂಗ ಕೂಡ ರೀಮೇಕ್ ಮಾಡಲು ಬಯಸಿದ್ದ ಮೊದಲ ಬಾಲಿವುಡ್ ಚಿತ್ರವಿದು. ಆಮಿರ್ ಖಾನ್, ಆರ್ ಮಾಧವನ್ ಮತ್ತು ಶರ್ಮನ್ ಜೋಶಿ ಕಾಲೇಜು ಯುವಕರ ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದರು.
200 ಕೋಟಿ ಬಾಕ್ಸಾಫೀಸ್ ಗಳಿಕೆ ಮತ್ತು ವಿಶ್ವವ್ಯಾಪಿ 395 ರೂ ಗಳಿಕೆ ಕಂಡ ಬಾಲಿವುಡ್‌ನ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಅತಿ ಹೆಚ್ಚು ಬಾಕ್ಸಾಫೀಸ್ ಗಳಿಕೆ ಕಂಡ ಬಾಲಿವುಡ್ ಚಿತ್ರ ಎಂಬ ದಾಖಲೆ ಕೂಡ ಈ ಚಿತ್ರದ್ದು. ಸಮೀಕ್ಷೆಯೊಂದರ ಪ್ರಕಾರ ಚೀನೀಯರ ಫೇವರಿಟ್ ಚಿತ್ರಗಳಲ್ಲಿ
''3 ಈಡಿಯಟ್ಸ್'' ಚಿತ್ರ 12ನೇ ಸ್ಥಾನ ಪಡೆದಿದೆ.
ಇಂಥಾ 3 ಈಡಿಯಟ್ಸ್ ಚಿತ್ರದ ಎರಡನೇ ಭಾಗಕ್ಕೆ ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಮುಂದಿನ ವರ್ಷ ಈ ಚಿತ್ರ ಆರಂಭವಾಗಲಿದೆ. ಇಂತಹದ್ದೊಂದು ಬ್ರೇಕಿಂಗ್ ನ್ಯೂಸ್ ಸದ್ಯ ಬಾಲಿವುಡ್ ಅಂಗಳದಿಂದ ತೂರಿಕೊಂಡು ಬಂದಿದೆ.

''ಪಿಂಕ್‌ವಿಲ್ಲಾ'' ಈ ಕುರಿತು ವರದಿಯನ್ನು ಮಾಡಿದ್ದು ''3 ಈಡಿಯಟ್ಸ್'' ಚಿತ್ರದ ಮುಂದುವರೆದ ಭಾಗ ಮಾಡುವ ಯೋಜನೆ ಇದೆ ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಬಂದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸದ್ಯ ಚಿತ್ರದ ಎರಡನೇ ಭಾಗದ ಕಥೆಯನ್ನು ಬರೆದು ಮುಗಿಸಿದ್ದಾರೆ. ಕಥೆಯನ್ನು ಕೂಡ ಲಾಕ್ ಮಾಡಿದ್ದಾರೆ.
ಇನ್ನು ''ಪಿಂಕ್‌ವಿಲ್ಲಾ'' ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಮೊದಲ ಭಾಗಕ್ಕೆ ಬಂಡವಾಳ ಹೂಡಿದ್ದ ವಿಧು ವಿನೋದ್ ಚೋಪ್ರಾ ಅವರೇ ಈ ಚಿತ್ರಕ್ಕೂ ಹಣ ಹೂಡುವ ಸಾಧ್ಯತೆ ಇದೆ. ರಾಂಚೋ.. ಫರ್ಹಾನ್ ಮತ್ತು ರಾಜು ಪಾತ್ರಗಳನ್ನು ಆಮಿರ್ ಖಾನ್, ಆರ್ ಮಾಧವನ್ ಮತ್ತು ಶರ್ಮನ್ ಜೋಶಿ ನಿರ್ವಹಿಸಲಿದ್ದಾರೆ. ಇಷ್ಟೇ ಅಲ್ಲ ಮೊದಲ ಭಾಗದಲ್ಲಿದ್ದ ಕರೀನಾ ಕಪೂರ್ ಕೂಡ ಈ ಚಿತ್ರದಲ್ಲಿರಲಿದ್ದಾರೆ. ಮೊದಲ ಭಾಗ ಕೊನೆಯಾದಲ್ಲಿಯೇ ಎರಡನೇ ಭಾಗದ ಕಥೆ ಆರಂಭವಾಗಲಿದ್ದು ಈ ಬಾರಿ ಸ್ನೇಹಿತರ ತಮಾಷೆ ಇನ್ನೂ ಹೆಚ್ಚಿರುತ್ತೆ, ಭಾವನಾತ್ಮಕವಾಗಿ ಹಲವರನ್ನು ಈ ಚಿತ್ರ ಕಾಡುತ್ತೆ ಎಂದು ವರದಿ ಮಾಡಲಾಗಿದೆ. ಮುಂದಿನ ವರ್ಷ ಜೂನ್ ನಂತರ ''3 ಈಡಿಯಟ್ಸ್ 2'' ಚಿತ್ರದ ಚಿತ್ರೀಕರಣ ಶುರುವಾಗಲಿದೆ.


Click it and Unblock the Notifications











