'ಪುಷ್ಪ'-2 ಬಳಿಕ ಅಲ್ಲು ಅರ್ಜುನ್ ಹೊಸ ಸಿನಿಮಾ ಯಾವ್ದು? ಆ ನಿರ್ದೇಶಕನ ಜತೆ ಬಿಸಿಬಿಸಿ ಚರ್ಚೆ
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ಶೀಘ್ರದಲ್ಲೇ ಸಿನಿಮಾ 2000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡುವ ಅಂದಾಜಿದೆ. ಐಕಾನ್ ಸ್ಟಾರ್ ಆರ್ಭಟಕ್ಕೆ ಹಳೇ ಬಾಕ್ಸಾಫೀಸ್ ದಾಖಲೆಗೂ ಧೂಳಿಪಟ ಆಗಿದೆ. 'ಪುಷ್ಪ'- 2 ಬಳಿಕ ಅಲ್ಲು ಅರ್ಜುನ್ ಹೊಸ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ.
ಸ್ಟಾರ್ ನಟರು ಒಂದು ಸಿನಿಮಾ ಬಿಡುಗಡೆಗೂ ಮುನ್ನ ಮತ್ತೊಂದು ಪ್ರಾಜೆಕ್ಟ್ ಆರಂಭಿಸುತ್ತಾರೆ. ಕೊನೆ ಪಕ್ಷ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿರುತ್ತದೆ. ಆದರೆ ಅಲ್ಲು ಅರ್ಜುನ್ ಐದಾರು ವರ್ಷ 'ಪುಷ್ಪ' ಸರಣಿಗಾಗಿ ವ್ಯಯಿಸಿದ್ದರು. ಈ ನಡುವೆ ಮತ್ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಅಟ್ಲಿ ಜೊತೆ ಸಿನಿಮಾ ಚರ್ಚೆ ನಡೆದಿತ್ತು. ಆದರೆ ಅದು ಸಫಲವಾಗಿರಲಿಲ್ಲ.

ಅಲ್ಲು ಅರ್ಜುನ್ ಮುಂದಿನ ಸಿನಿಮಾ ಇದೀಗ ಭಾರೀ ಹೈಪ್ ಶುರುವಾಗಿದೆ. ಈ ಬಾರಿ ಏಕಾಏಕಿ ಸ್ಟೈಲಿಶ್ ಸ್ಟಾರ್ ಬಾಲಿವುಡ್ ಅಂಗಳಕ್ಕೆ ಜಿಗಿಯುವ ಬಗ್ಗೆ ಗುಸುಗುಸು ಶುರುವಾಗಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಮುಂಬೈಗೆ ಹೋಗಿದ್ದರು. ಅಲ್ಲಿ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಟೈಲಿಶ್ ಸ್ಟಾರ್ ಇದೀಗ ನೇರವಾಗಿ ಬಾಲಿವುಡ್ ಸಿನಿಮಾ ಮಾಡುವ ಬಗ್ಗೆ ಊಹಾಪೋಹ ಶುರುವಾಗಿದೆ. 'ಪುಷ್ಪ'-2 ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ದೊಡ್ಡ ಬಾಲಿವುಡ್ ಚಿತ್ರಗಳ ದಾಖಲೆ ಹಿಂದಿಕ್ಕಿ ದರ್ಬಾರ್ ನಡೆಸ್ತಿದೆ. ಹಾಗಾಗಿ ಬಿಟೌನ್ ಫಿಲ್ಮ್ ಮೇಕರ್ಸ್ ಕೂಡ ಬನ್ನಿ ಒಟ್ಟಿಗೆ ಸಿನಿಮಾ ಮಾಡೋಣ ಎನ್ನುತ್ತಿದ್ದಾರೆ.
ಈಗಾಗಲೇ ಸಾಕಷ್ಟು ದಕ್ಷಿಣದ ಕಲಾವಿದರು ಬಾಲಿವುಡ್ ಪ್ರವೇಶಿಸಿದ್ದಾರೆ. ಆದರೆ ಗೆದ್ದು ಅಲ್ಲೇ ಉಳಿದುಕೊಂಡವರು ಕಮ್ಮಿ. ರಜನಿಕಾಂತ್, ಚಿರಂಜಿವಿ, ಕಮಲ್ ಹಾಸನ್ ಕೂಡ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಪ್ರಭಾಸ್ 'ಆದಿಪುರುಷ್' ಚಿತ್ರದಲ್ಲಿ ಅದೇ ಪ್ರಯತ್ನ ಮಾಡಿ ಸೋತಿದ್ದರು. 'ವಾರ್- 2' ಚಿತ್ರದ ಮೂಲಕ ಜ್ಯೂ. ಎನ್‌ಟಿಆರ್ ಅದೇ ಪ್ರಯತ್ನದಲ್ಲಿದ್ದಾರೆ.

'ಜಂಜೀರ್' ಸಿನಿಮಾ ಮಾಡಿ ರಾಮ್‌ಚರಣ್ ಕೂಡ ಬಾಲಿವುಡ್ ಪ್ರವೇಶಿಸಿದ್ದರು. ಆದರೆ ಸಿನಿಮಾ ಹೀನಾಯವಾಗಿ ಸೋತಿತ್ತು. ಇದೀಗ ಅಲ್ಲು ಅರ್ಜುನ್ ಬಾಲಿವುಡ್ ಎಂಟ್ರಿ ಬಗ್ಗೆ ಊಹಾಪೋಹ ಶುರುವಾಗಿದೆ. ಸ್ಟೈಲಿಶ್ ಸ್ಟಾರ್ ಮುಂಬೈಗೆ ಬನ್ಸಾಲಿ ಭೇಟಿ ಮಾಡಿ ಚರ್ಚಿಸಿರುವುದು ನಿಜ ಎಂದು ಹೇಳಲಾಗುತ್ತಿದೆ.
'ಪುಷ್ಪ'-2 ಚಿತ್ರಕ್ಕಾಗಿ ಅಲ್ಲು ಅರ್ಜುನ್ ಭಾರೀ ಸಂಭಾವನೆಯನ್ನೇ ಪಡೆದಿದ್ದಾರೆ ಎಂದು ವರದಿಯಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಿಸಿತ್ತು. ಗಣನೀಯವಾಗಿ ಟಿಕೆಟ್ ದರ ಹೆಚ್ಚಿಸಿ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದಾರೆ. ಇದೆಲ್ಲದರ ನಡುವೆ ಹೈದರಾಬಾದ್ ಚಿತ್ರಮಂದಿರದಲ್ಲಿ ಕಾಲ್ತುಳಿತ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಸಿನಿಮಾ ರಿಲೀಸ್ ಸಮಯದಲ್ಲಿ ದುರಂತ ಸಂಭವಿಸಿ ಚಿತ್ರತಂಡ ಸಕ್ಸಸ್ ಸೆಲೆಬ್ರೇಷನ್ ಕೂಡ ಸರಿಯಾಗಿ ಮಾಡಲಿಲ್ಲ. ಚಿತ್ರದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಬಾಲಕನೊಬ್ಬ ಇನ್ನ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಕೆಯ ಕುಟುಂಬಕ್ಕೆ ಅಲ್ಲು ಅರ್ಜುನ್ 1 ಕೋಟಿ ರೂ. ಸಹಾಯ ಮಾಡಿದ್ದಾರೆ.
ಸದ್ಯ ಬನ್ಸಾಲಿ ಜೊತೆ ಅಲ್ಲು ಅರ್ಜುನ್ ಸಿನಿಮಾ ಎಂದು ಹೇಳಲಾಗುತ್ತಿದೆ. ಅದು ಶುರುವಾಗುವುದು ಯಾವಾಗ? ತೆರೆಗೆ ಬರೋದು ಯಾವಾಗ? ಎಂದು ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ನಿಜಕ್ಕೂ ಬಾಕ್ಸಾಫೀಸ್ ಶೇಕ್ ಆಗುತ್ತದೆ.


Click it and Unblock the Notifications











