"ಒಳ್ಳೆ ಸಿನ್ಮಾ ಮಾಡೋಕ್ಕಾಗ್ದೇ ಇದ್ರೆ ಹಿಂಸೆ, ಹಸಿಬಿಸಿ ದೃಶ್ಯ ತೋರಿಸ್ತಾರೆ": ಆಮೀರ್ ಹಳೇ ಹೇಳಿಕೆ ವೈರಲ್
ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 4 ದಿನಕ್ಕೆ ಸಿನಿಮಾ 425 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿದೆ. ಕೊಂಚ ಅತಿಯಾಯಿತು ಎಂದು ಗೊಣಗುವವರೇ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಡ್ರಾಮಾ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿಕೊಳ್ಳುತ್ತಿದೆ. ಈ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಲವ್, ರಿಲೇಷನ್‌ಶಿಪ್ ವಿಚಾರಗಳನ್ನು ಸಿಕ್ಕಾಪಟ್ಟೆ ವೈಲೆನ್ಸ್ ಆಗಿ ತೋರಿಸಿದ್ದ ನಿರ್ದೇಶಕರು 'ಅನಿಮಲ್' ಚಿತ್ರದಲ್ಲಿ ತಂದೆ ಮಗನ ಬಾಂಧವ್ಯವನ್ನು ಅದೇ ರೀತಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಭಾಗಶಃ ಗೆದ್ದಿದ್ದಾರೆ. 3 ಗಂಟೆ 12 ನಿಮಿಷಗಳ ಸುದೀರ್ಘ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದೆ.

ಸ್ವಸ್ತಿಕ್ ಸ್ಟೀಲ್ಸ್ ಸಂಸ್ಥೆ ಮಾಲೀಕ ಬಲ್ಬೀರ್ ಸಿಂಗ್. ಆತನ ಮಗ ರಣ್ ವಿಜಯ್. ಚಿಕ್ಕಂದಿನಿಂದಲೂ ತಂದೆ ಅಂದ್ರೆ ಅಪಾರ ಪ್ರೀತಿ. ಆದರೆ ಬಲ್ಬೀರ್ ಸಿಂಗ್ ಸದಾ ವ್ಯಾಪಾರ ವಹಿವಾಟಿನಲ್ಲಿ ಮುಳುಗಿ ಮಗನನ್ನು ಸರಿಯಾಗಿ ಗಮನಿಸುವುದಿಲ್ಲ. ಮಗ ಬಹಳ ಶಿಸ್ತು, ಕಟ್ಟುನಿಟ್ಟಾಗಿ ಬೆಳೆಯಬೇಕು ಎಂದುಕೊಳ್ಳುತ್ತಾನೆ. ಆದರೆ ವಿಜಯ್ ನಡೆ ತಂದೆಗೆ ಇಷ್ಟವಾಗುವುದಿಲ್ಲ. ಇದೇ ಕಾರಣಕ್ಕೆ ಸದಾ ಇಬ್ಬರ ನಡುವೆ ಕಿರಿಕಿರಿ. ಕೊನೆಗೆ ಗೀತಾಂಜಲಿಯನ್ನು ವಿಜಯ್ ಪ್ರೀತಿಸಿ ಮದುವೆಯಾಗಿ ವಿದೇಶಕ್ಕೆ ಹೋಗಿಬಿಡ್ತಾನೆ. ಕೆಲ ವರ್ಷಗಳ ನಂತರ ಬಲ್ಬೀರ್ ಸಿಂಗ್ ಹತ್ಯೆ ಯತ್ನ ನಡೆಯುತ್ತದೆ. ಕೂಡಲೇ ತಾಯ್ನಾಡಿಗೆ ವಾಪಸ್ ಬರುವ ವಿಜಯ್ ತನ್ನ ತಂದೆಯನ್ನು ಕೊಲ್ಲಲು ಯತ್ನಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಅನಿಮಲ್ ಸಿನಿಮಾ ಕತೆ.
ಸಿಂಪಲ್ ಕತೆಯನ್ನು ಬಹಳ ವೈಲೆಂಟ್ ಆಗಿ ತಿದ್ದಿ ತೀಡಿದ್ದಾರೆ. ತಂದೆ ಮಗನ ಬಾಂಧವ್ಯದ ಕತೆ ಆಗಿದ್ದರು ಸಂದೀಪ್ ರೆಡ್ಡಿ ವಂಗಾ ಟ್ರೀಟ್‌ಮೆಂಟ್ ವೈಲೆಂಟ್ ಆಗಿದೆ. ಜೊತೆಗೆ ಬೋಲ್ಡ್ ಸನ್ನಿವೇಶಗಳು ಹುಬ್ಬೇರಿಸುವಂತಿದೆ. ತಂದೆಯ ಮೇಲಿನ ಅಪಾರ ಪ್ರೀತಿಯಿಂದ ಮಗ ಏನು ಬೇಕಾದರೂ ಮಾಡುತ್ತಾನೆ, ಯಾವ ಹಂತಕ್ಕೆ ಬೇಕಾದ್ರೂ ಹೋಗುತ್ತಾನೆ ಎನ್ನುವ ಅಂಶವನ್ನಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗಿದೆ.
'ಅನಿಮಲ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. ಆದರೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಈ ಕತೆಗೆ ಇಷ್ಟ ವೈಲೆನ್ಸ್ ಬೇಕಿತ್ತಾ ಎಂದು ಬೈದುಕೊಂಡೇ ಸಿನಿಮಾ ಮೆಚ್ಚಿಕೊಳ್ಳುತ್ತಿದ್ದಾರೆ. ಇನ್ನು ರಶ್ಮಿಕಾ ಹಾಗೂ ತ್ರಿಪ್ತಿ ಡಿಮ್ರಿ ಸಿಕ್ಕಾಪಟ್ಟೆ ಬೋಲ್ಡ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಅನಿಮಲ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ಕೆಲವರು ಆಮೀರ್ ಖಾನ್ ಹಳೇ ಹೇಳಿಕೆ ಹಿಡಿದು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ದಶಕಗಳ ಹಿಂದೆ ಆಮೀರ್ ಖಾನ್ ಒಳ್ಳೆ ಸಿನಿಮಾ ಮಾಡೋಕೆ ಆಗದವರು ವೈಲೆನ್ಸ್ ಹಾಗೂ ಸೆ* ಅಂಶಗಳನ್ನು ಹೆಚ್ಚು ತೋರಿಸುತ್ತಾರೆ ಎಂದಿದ್ದರು. 'ಅನಿಮಲ್' ಚಿತ್ರದ ವಿಚಾರದಲ್ಲಿ ಇದೇ ಆಗಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಆಮೀರ್ ಖಾನ್ ಮಾತನಾಡಿ "ಹಿಂಸೆ, ಸೆ* ರೀತಿಯ ಕೆಲವು ಭಾವನೆಗಳ ಮೂಲಕ ಪ್ರೇಕ್ಷಕರನ್ನು ಪ್ರಚೋದಿಸುವುದು ಸುಲಭ. ಈ ಭಾವನೆಗಳು ಮನುಷ್ಯನಲ್ಲಿ ಸುಲಭವಾಗಿ ಉದ್ರೇಕಗೊಳ್ಳುತ್ತವೆ. ಆದರೆ ನಿರ್ದೇಶಕರು ಕಥೆಯನ್ನು ರಚಿಸುವಲ್ಲಿ, ಭಾವನೆಗಳನ್ನು ತೋರಿಸುವಲ್ಲಿ ಮತ್ತು ಸನ್ನಿವೇಶಗಳನ್ನು ರಚಿಸುವಲ್ಲಿ ಪ್ರತಿಭಾವಂತರಲ್ಲದಿದ್ದರೆ, ಅವರು ಹಿಂಸೆ ಮತ್ತು ಬೋಲ್ಡ್ ಕಂಟೆಂಟ್ ಅನ್ನು ಹೆಚ್ಚು ಅವಲಂಬಿಸುತ್ತಾರೆ."
"ಈ ರೀತಿ ಮಾಡುವುದರಿಂದ ಸಿನಿಮಾ ಯಶಸ್ವಿಯಾಗುತ್ತದೆ. ಆದರೆ ಸಮಾಜಕ್ಕೆ ಹಾನಿಯಾಗಬಹುದು. ನೋಡುವ ಪ್ರೇಕ್ಷಕರು ಮತ್ತು ಯುವಜನತೆಯ ಮೇಲೆ ಪರಿಣಾಮ ಬೀರುತ್ತದೆ. ಸಿನಿಮಾಗಳಲ್ಲಿ ಹಿಂಸೆ ಬೇಡ ಎಂದು ನಾನು ಹೇಳುತ್ತಿಲ್ಲ. ಇದು ಸಬ್ಜೆಕ್ಟ್ ಮೇಲೆ ಅವಲಂಬಿತವಾಗಿರಬೇಕು. ತೋರಿಸುವ ಮಾರ್ಗಗಳೂ ಇವೆ" ಎಂದು ಆಮೀರ್ ಖಾನ್ ಹೇಳಿದ್ದರು. ಆಮೀರ್ ಹೇಳಿಕೆ 'ಅನಿಮಲ್' ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ ಹೇಳಿದಂತಿದೆ ಎಂದು ವಿಡಿಯೋ ವೈರಲ್ ಮಾಡಲಾಗುತ್ತಿದೆ.


Click it and Unblock the Notifications











