ಬಹಿಷ್ಕಾರದ ಕೂಗಿಗೆ ಬೆದರಿದ ಆಮಿರ್ ಖಾನ್, ದೇಶ ಪ್ರೇಮ ಸಾಬೀತು ಪಡಿಸಲು ಮುಂದಾದ ನಟ..!
ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್.. ಈ ಮೂವರು ಬಾಲಿವುಡ್ ಖಾನ್‌ಗಳ ದೇಶಭಕ್ತಿಯ ಮೇಲೆ ಅನೇಕರಿಗೆ ಅನುಮಾನ ಇದೆ. ಮೊದಲಿಂದ ಮೂವರ ನಡೆ ಕೂಡ ಇದಕ್ಕೆ ಪೂರಕವಾಗಿಯೇ ಇದೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎನ್ನುವಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಸಲ್ಮಾನ್ ಖಾನ್ ಕದನ ವಿರಾಮ ಘೋಷಿಸಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ್ದರು.
ಈ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಟ್ರೋಲಿಗರಿಗೆ ಆಹಾರವೂ ಆಗಿದ್ದರು. ಶಾರುಖ್ ಖಾನ್ ಈ ವಿಚಾರದಲ್ಲಿ ಇಲ್ಲಿಯವರೆಗೆ ಮಾತನಾಡಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಇನ್ನು .. ಆಮಿರ್ ಖಾನ್ ನಿದ್ದೆಯಿಂದ ಎದ್ದಿದ್ದು ಮೊನ್ನೆ ಮೊನ್ನೆಯಷ್ಟೇ. ತಮ್ಮ 'ಸಿತಾರೆ ಜಮೀನ್ ಪರ್' ಚಿತ್ರದ ಟ್ರೇಲರ್ ಬಿಡುಗಡೆಯಾಗುವ ಒಂದು ದಿನದ ಮುಂಚೆ ಆಮಿರ್ ಖಾನ್ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ್ದರು.

''ಆಪರೇಷನ್ ಸಿಂಧೂರ್ ನ ವೀರರಿಗೆ ನನ್ನ ನಮನಗಳು. ನಮ್ಮ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ಅಚಲ ಬದ್ಧತೆಗೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ಸಂಕಲ್ಪಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ''. 'ಜೈ ಹಿಂದ್' ಎಂದು ಆಮೀರ್ ಖಾನ್ ಬರೆದುಕೊಂಡಿದ್ದರು.
ಆದರೆ ಇದ್ದಕ್ಕಿದ್ದಂತೆಯೇ ಆಮಿರ್ ಖಾನ್ ಬರೆದುಕೊಂಡ ಈ ಸಾಲುಗಳನ್ನು ಓದಿದ ಅನೇಕರು ಆಮಿರ್ ಖಾನ್ ವಿರುದ್ಧ ಮತ್ತೆ ತಿರುಗಿ ಬಿದ್ದರು. ಭಾರತ ವಿರೋಧಿ ನೀತಿ ತೋರಿದ ಟರ್ಕಿಗೆ ಹಿಂದೊಮ್ಮೆ ಆಮಿರ್ ಖಾನ್ ಹೋಗಿದ್ದ ದಿನವನ್ನು ಕೂಡ ನೆನಪು ಮಾಡಿಕೊಂಡರು. 2020ರಲ್ಲಿ ಟರ್ಕಿಯ ಪ್ರಥಮ ಮಹಿಳೆಯನ್ನು ಆಮಿರ್ ಖಾನ್ ಭೇಟಿ ಮಾಡಿದ್ದ ಫೋಟೊಗಳನ್ನು ಹಂಚಿಕೊಂಡು ಬಾಯ್ಕಾಟ್ ಆಮಿರ್ ಖಾನ್ ಎಂಬ ಹ್ಯಾಶ್ ಟ್ಯಾಗ್ ಅಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವನ್ನು ಕೂಡ ಮಾಡಲು ಶುರು ಮಾಡಿದರು.
ಸದ್ಯ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ನಡೆಯುತ್ತಿರುವ ಈ ಬಾಯ್ಕಾಟ್ ಅಭಿಯಾನದಿಂದ ಆಮಿರ್ ಖಾನ್ ಈ ಬಾರಿ ವಿಚಲಿತರಾದಂತೆ ಇದೆ. ಬೆದರಿದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಆಮಿರ್ ಖಾನ್ ರಾಷ್ಟ್ರಧ್ವಜದ ಮೊರೆ ಹೋಗಿದ್ದಾರೆ. ತಮ್ಮ ದೇಶಭಕ್ತಿಯನ್ನು ಸಾಬೀತು ಪಡಿಸಲು ಮುಂದಾದಂತೆ ಇರುವ ಆಮಿರ್ ಖಾನ್ ಸದ್ಯ ತಮ್ಮ ನಿರ್ಮಾಣ ಸಂಸ್ಥೆಯ ಎಲ್ಲ ಸೋಶಿಯಲ್ ಮೀಡಿಯಾ ಖಾತೆಯ ಡಿಪಿಯಲ್ಲಿ ಭಾರತದ ಧ್ವಜವನ್ನು ಹಾಕಿಸಿದ್ದಾರೆ.
ಆದರೂ ಕೂಡ ಅಸಮಾಧಾನದ ಅಲೆ ಕಡಿಮೆಯಾಗುತ್ತಿಲ್ಲ. ಆಮಿರ್ ಖಾನ್ ರಾಷ್ಟ್ರಧ್ವಜವನ್ನು ಹಾಕಿದ್ದಕ್ಕೆ ಕೂಡ ಅನೇಕರು ಚಕಾರ ಎತ್ತುತ್ತಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಸಿತಾರೆ ಜಮೀನ್ ಪರ್ ಚಿತ್ರವನ್ನು ನಾವು ನೋಡುವುದಿಲ್ಲ ಎನ್ನುತ್ತಿದ್ದಾರೆ. ಡ್ಯಾಮೇಜ್ ಕಂಟ್ರೋಲ್ ಮಾಡಲು ಆಮಿರ್ ಖಾನ್ ಅವರ ತಂತ್ರ ಇದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೇ ಸಿತಾರೆ ಜಮೀನ್ ಪರ್ ಚಿತ್ರ ಇದೇ ಜೂನ್ 20ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಬಹಿಷ್ಕಾರದ ಕೂಗಿನ ನಡುವೆ ಸಿತಾರೆ ಜಮೀನ್ ಪರ ಚಿತ್ರದ ವಿರುದ್ಧ ಕೃತಿಚೌರ್ಯದ ಆರೋಪವನ್ನು ಕೂಡ ಮಾಡಲಾಗಿದೆ. ಹಾಲಿವುಡ್‌ನ ಚಾಂಪಿಯನ್ಸ್ ಚಿತ್ರದ ಯಥಾವತ್ತು ನಕಲು ಎನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗಿದೆ.
ಆಮಿರ್ ಖಾನ್ ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರವನ್ನು ನಿರ್ವಹಿಸಿದ್ದು, ರಿತೇಶ್ ದೇಶಮುಖ್ ಅವರ ಪತ್ನಿ ಜೆಲಿನಿಯಾ ಡಿಸೋಜಾ ಕೂಡ ಚಿತ್ರದಲ್ಲಿದ್ದಾರೆ. ಒಟ್ನಲ್ಲಿ ಸದ್ಯ ಆಮಿರ್ ಖಾನ್ ವಿರುದ್ಧ ಬಾಯ್ಕಾಟ್ ಅಭಿಯಾನ ನಡೆಯುತ್ತಿದೆ. ಆಮಿರ್ ಖಾನ್ ನಿರ್ಮಾಣ ಸಂಸ್ಥೆಗಳ ಸೋಶಿಯಲ್ ಮೀಡಿಯಾ ಡಿಪಿಯಲ್ಲಿ ಭಾರತದ ಧ್ವಜವನ್ನು ಹಾಕಲಾಗಿದೆ. ಚಿತ್ರ ಬಿಡುಗಡೆಯಾದ ನಂತರ ಚಿತ್ರಕ್ಕೆ ಪ್ರತಿಕ್ರಿಯೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.



Click it and Unblock the Notifications











