ನನ್ನ ಎರಡು ಮುದ್ದಾದ ಮಕ್ಕಳನ್ನು ನೋಡಿ ಒಂದು ವರ್ಷವಾಯ್ತು, ಕಣ್ಣೀರಾದ ಫರ್ದಿನ್ ಖಾನ್..!
ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ರೀಲ್‌ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತೆ. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಈ ವರ್ಷ ಅರ್ಧ ಡಜನ್ ತಾರೆಯರು ಮದುವೆಯ ಬಂಧನದಿಂದ ಮುಕ್ತರಾಗಿದ್ದಾರೆ. ಈ ಸಾಲಿಗೆ ಈಗ ಬಾಲಿವುಡ್ ಸ್ಟಾರ್ ಫರ್ದಿನ್ ಖಾನ್ ಮತ್ತು ನತಾಶಾ ಮಾಧ್ವಾನಿ ಕೂಡ ಸೇರಿಕೊಂಡಿದ್ದಾರೆ.

ಹೌದು, ಫರ್ದಿನ್ ಖಾನ್.. ಬಾಲಿವುಡ್‌ನ ಅಂದಕಾಲತ್ತಿಲ್‌ನ ನಟ ಫಿರೋಜ್ ಖಾನ್ ಅವರ ಮಗ. ನೋಡಲು ಸ್ಪುರದ್ರೂಪಿಯಾಗಿದ್ದರು ಫರ್ದಿನ್ ಖಾನ್ ಗೆ ಜನ ಆಶೀರ್ವಾದ ಮಾಡಲಿಲ್ಲ. ಕಲೆ ರಕ್ತದಲ್ಲಿ ಇದ್ದರೂ ಕೂಡ ಫರ್ದಿನ್ ಬಾಲಿವುಡ್‌ನಲ್ಲಿ ಆರಕ್ಕೇರಲಿಲ್ಲ. ಇಂಥಾ ಫರ್ದಿನ್ ಖಾನ್ 19 ವರ್ಷದ ಹಿಂದೆ ನತಾಶಾ ಮಾಧ್ವಾನಿ ಅವರ ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದರು. ಈ ನತಾಶಾ ಬೇರೆ ಯಾರು ಅಲ್ಲ ಬದಲಿಗೆ ಕೋಟ್ಯಾಧಿಪತಿ ಮಯೂರ್ ಮಾಧ್ವಾನಿ ಮತ್ತು ಒಂದು ಕಾಲದ ಚೆಂದುಳ್ಳಿ ಚೆಲುವೆ ಮುಮ್ತಾಜ್ ಅವರ ಮುದ್ದಿನ ಮಗಳು.
ಇನ್ನೂ ಫಿರೋಜ್ ಖಾನ್ ಮತ್ತು ಮುಮ್ತಾಜ್ ಆ ಕಾಲದ ಸ್ನೇಹಿತರು. ಈ ಕಾರಣಕ್ಕೆ ಆಗಾಗ ಮುಖಾಮುಖಿಯಾಗುತ್ತಿದ್ದ ಫರ್ದಿನ್ ಮತ್ತು ನತಾಶಾ ನಡುವೆ ಪ್ರೇಮಾಂಕುರವಾಗಿತ್ತು. 2005ರಲ್ಲಿ ಸರಳವಾಗಿ ಮದುವೆ ಕೂಡ ನೆರವೇರಿತು. ಅಲ್ಲಿಂದ ಕಳೆದ ವರ್ಷದವರೆಗೆ ಫರ್ದಿನ್ ಖಾನ್ ಮತ್ತು ನತಾಶಾ ದಾಂಪತ್ಯದಲ್ಲಿ ಅನ್ಯೋನ್ಯತೆ ಇತ್ತು. ಪ್ರೀತಿ ಇತ್ತು. ಆದರೆ, ಅದೇನಾಯ್ತೋ.. ಕಳೆದ ವರ್ಷ ಫರ್ದಿನ್ ಖಾನ್ ಮತ್ತು ನತಾಶಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬಂತು. ತಮ್ಮ 18 ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಡಲು ಫರ್ದಿನ್ ಮತ್ತು ನತಾಶಾ ಮುಂದಾಗಿದ್ದಾರೆ ಎನ್ನುವ ಸುದ್ದಿ ಹೊರ ಬಂದಿತ್ತು. ಫರ್ದಿನ್ ಅವರಿಂದ ದೂರವಾಗಿ ನತಾಶಾ ತಮ್ಮ ಇಬ್ಬರು ಮಕ್ಕಳ ಜೊತೆ ಲಂಡನ್‌ನಲ್ಲಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿತ್ತು.
ಆ ಕ್ಷಣಕ್ಕೆ ಫರ್ದಿನ್ ಆಗಲಿ ನತಾಶಾ ಆಗಲಿ ಈ ಅಂತೆ-ಕಂತೆಯ ಕುರಿತು ಹೆಚ್ಚೇನು ಮಾತನಾಡಿರಲಿಲ್ಲ. ಸಂಸಾರದ ಗುಟ್ಟನ್ನೂ ಬಿಟ್ಟುಕೊಟ್ಟಿರಲಿಲ್ಲ. ಈ ಕಾರಣಕ್ಕೆ ಅನೇಕರು ಇದೆಲ್ಲ ಊಹಾಪೋಹದ ಸುದ್ದಿ ಎಂದುಕೊಂಡಿದ್ದರು. ಆದರೆ ಈಗ ಫರ್ದಿನ್ ಮೌನ ಮುರಿದಿದ್ದಾರೆ. ತಮ್ಮ ಇಬ್ಬರು ಮಕ್ಕಳನ್ನು ನೆನೆದು ಭಾವುಕರಾಗಿದ್ದಾರೆ. ಕಳೆದೊಂದು ವರ್ಷದಿಂದ ಪತ್ನಿ ಮತ್ತು ಮಕ್ಕಳಿಂದ ದೂರ ಇರುವುದಾಗಿ ಹೇಳಿದ್ದಾರೆ. ಈ ಮೂಲಕ ತಮ್ಮ ದಾಂಪತ್ಯ ಜೀವನ ಅಂತ್ಯವಾಗಿದೆ ಎನ್ನುವುದನ್ನು ಪರೋಕ್ಷವಾಗಿ ಫರ್ದಿನ್ ಖಾನ್ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಫರ್ದಿನ್ ಖಾನ್ ಮಕ್ಕಳಿಂದ ದೂರ ಇರುವುದು ಸುಲಭದ ಮಾತಲ್ಲ, ಅನು ದಿನ ಅನು ಕ್ಷಣ ನನಗೆ ನನ್ನ ಇಬ್ಬರು ಮಕ್ಕಳು ನೆನಪಾಗುತ್ತಾನೇ ಇರುತ್ತಾರೆ ಎಂದಿದ್ದಾರೆ. ನಾನು ಅವರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತೇನೆ, ಆದರೆ ನಾನು ಅವರ ದೈನದಿಂದ ಜೀವನದ ಭಾಗವಾಗದೇ ಇರುವುದಕ್ಕೆ ತುಂಬಾ ನೋವು ಇದೆ ಎಂದಿರುವ ಫರ್ದಿನ್ ಖಾನ್ ಅವರ ಬೆಳವಣಿಗೆಯನ್ನು ನೋಡುವುದಿಂದ ನಾನು ವಂಚಿತನಾಗಿದ್ದೇನೆ, ಅವರ ಅಪ್ಪುಗೆಗಳಿಂದ ನಾನು ವಂಚಿತನಾಗಿದ್ದೇನೆ ಎಂದು ಭಾವುಕರಾಗಿದ್ದಾರೆ. ನನ್ನ ಮಕ್ಕಳಿಗೆ ಪೇಟಿಂಗ್ ಅಂದರೆ ತುಂಬಾ ಇಷ್ಟ ಅವರ ಕಲಾಕೃತಿಗಳನ್ನು ನಾನು ನನ್ನ ಮುಂಬೈನ ಮನೆಯ ಗೋಡೆಗಳ ಮೇಲೆ ತೂಗಿ ಹಾಕಿದ್ದೇನೆ ಎಂದು ಹೇಳಿದ್ದಾರೆ. ನನ್ನ ಮಕ್ಕಳ ನೆನಪುಗಳು ನನಗೆ ಕಾಡಬಾರದೆಂದು ನಾನು ಆದಷ್ಟು ಕೆಲಸದಲ್ಲಿ ತಲ್ಲೀನವಾಗುತ್ತೇನೆ ಎಂದಿರುವ ಫರ್ದಿನ್ ಖಾನ್, ಮುಂಬೈಗೆ ಅವರು ಬಂದಾಗಲೆಲ್ಲಾ ನನ್ನ ಎಲ್ಲ ಕೆಲಸಗಳನ್ನು ನಾನು ಪಕ್ಕಕ್ಕಿಡುತ್ತೇನೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications