ಕೊರೊನಾ ವಿರುದ್ಧ ಗೆಲ್ಲುತ್ತಾರಾ ಅಮಿತಾಬ್? ಅವರಿಗಿರುವ ಆರೋಗ್ಯ ಸಮಸ್ಯೆಗಳೇನು?
ಖ್ಯಾತ ನಟ ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೇಶದಾದ್ಯಂತ ಅಭಿಮಾನಿಗಳಿಗೆ, ಅಮಿತಾಬ್ ಅವರ ಸಿನಿ ಮಿತ್ರರಿಗೆ ತೀವ್ರ ಆತಂಕ ತರಿಸಿದೆ.
Recommended Video
ಅಮಿತಾಬ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮಿತಾಬ್ ಅವರ ಆರೋಗ್ಯದ ಮೇಲೆ ವೈದ್ಯರ ತಂಡವೊಂದು ಸತತ ನಿಗಾ ಇಟ್ಟಿದೆ.
ಅಮಿತಾಬ್ ಬಚ್ಚನ್ ಅವರಿಗೆ ಕೊರೊನಾ ಬಂದಿರುವುದು ಹಲವರಿಗೆ ತೀವ್ರ ಆತಂಕ ತಂದಿದೆ. ಹೀಗೆ ಅತಿಯಾಗಿ ಆತಂಕಕ್ಕೆ ಒಳಗಾಗಲು ಕಾರಣವೂ ಇದೆ. ಅದು ಅಮಿತಾಬ್ ಅವರು ಈ ಮುಂಚಿನಿಂದಲೂ ಎದುರಿಸುತ್ತಿರುವ ಕೆಲವು ಆರೋಗ್ಯ ಸಮಸ್ಯೆಗಳು.

77 ವರ್ಷದ ಅಮಿತಾಬ್ ರ ಆರೋಗ್ಯ ಸಮಸ್ಯೆ
ಹೌದು, 77 ವರ್ಷ ವಯಸ್ಸಿನ ಅಮಿತಾಬ್ ಬಚ್ಚನ್ ಅವರು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವು ಶಸ್ತ್ರಚಿಕಿತ್ಸೆಗಳಿಗೆ ಸಹ ಒಳಗಾಗಿದ್ದಾರೆ. ಕೊರೊನಾ ವೈರಸ್ ವಯಸ್ಸಾದ, ಈಗಾಗಲೇ ಆರೋಗ್ಯ ಸಮಸ್ಯೆ ಇರುವರನ್ನು ಹೆಚ್ಚು ಕಾಡಿಸುವುದು ಗೊತ್ತೇ ಇದೆ. ಅಮಿತಾಬ್ ಬಚ್ಚನ್ ಆರೋಗ್ಯದ ಬಗ್ಗೆ ತಿಳಿದಿರುವ ಅಭಿಮಾನಿಗಳು, ಮಿತ್ರರು ಸಹಜವಾಗಿಯೇ ಆತಂಕಕ್ಕೆ ಈಡಾಗಿದ್ದಾರೆ.

ಅಮಿತಾಬ್ ಅವರಿಗೆ ಅಸ್ತಮಾ ಸಮಸ್ಯೆ ಇದೆ
ಅಮಿತಾಬ್ ಬಚ್ಚನ್ ಅವರು ಅಸ್ತಮಾ ದಿಂದ ಬಳಲುತ್ತಿದ್ದಾರೆ. ಕೇವಲ ಅಮಿತಾಬ್ ಮಾತ್ರವಲ್ಲ ಅಭಿಷೇಕ್ ಬಚ್ಚನ್ ಸಹ ಅಸ್ತಮಾ ರೋಗಿಯೇ ಆಗಿದ್ದಾರೆ. ಕೊರೊನಾ ವೈರಸ್ ಶ್ವಾಸಕೋಶದ ಕಾರ್ಯಚಟುವಟಿಕೆಯನ್ನು ಅಸ್ಥವ್ಯಸ್ಥಗೊಳಿಸುತ್ತದೆ. ಅಸ್ತಮಾ ಇರುವವರಿಗೆ ಶ್ವಾಸಕೋಶ ಹೆಚ್ಚು ಆರೋಗ್ಯವಾಗಿರುವುದಿಲ್ಲ ಎಂಬುದು ಆತಂಕಕಾರಿ.

ತೀವ್ರವಾದ ಲಿವರ್ ಸಮಸ್ಯೆ ಇದೆ ಅಮಿತಾಬ್ ಗೆ
ಅಮಿತಾಬ್ ಬಚ್ಚನ್ ಅವರಿಗೆ ತೀವ್ರ ಸ್ವರೂಪದ ಲಿವರ್ (ಯಕೃತ್ತು) ಸಮಸ್ಯೆ ಇದೆ. 'ಕೂಲಿ' ಸಿನಿಮಾ ಚಿತ್ರೀಕರಣ ವೇಳೆ ಪೆಟ್ಟಾಗಿ ಅಮಿತಾಬ್ ಬಚ್ಚನ್ ಅವರಿಗೆ ಯಕೃತ್ತಿನ ಶಸ್ತ್ರಚಿಕಿತ್ಸೆಗೆ ಒಳಗಾದಾಗ ವೈದ್ಯರು 60 ಬಾಟಲಿ ರಕ್ತವನ್ನು ದಾನಿಗಳಿಂದ ಸಂಗ್ರಹಿಸಿ ಅಮಿತಾಬ್ ಅವರಿಗೆ ನೀಡಿದ್ದರು, ಅದರಲ್ಲಿ ಒಬ್ಬ ವ್ಯಕ್ತಿಯ ರಕ್ತದಲ್ಲಿ ಹೆಪಟೈಟಸ್ ಬಿ ವೈರಸ್ ಇತ್ತು, ಇದರಿಂದಾಗಿ ಅಮಿತಾಬ್ ಅವರಿಗೆ ಲಿವರ್ ಸಮಸ್ಯೆ ಆಗಿ ಈಗ ಶೇ 25 ರಷ್ಟು ಮಾತ್ರವೇ ಅವರ ಲಿವರ್ ಕೆಲಸ ಮಾಡುತ್ತದೆ.

ಆರೋಗ್ಯ ಸಮಸ್ಯೆ ಇದ್ದವರಿಗೆ ಕೊರೊನಾ ಕಾಡುತ್ತೆ
ಬೇರೆ ಖಾಯಿಲೆಗಳು ಇರುವ ವ್ಯಕ್ತಿಗಳನ್ನು, ವಿಶೇಷವಾಗಿ ಲಿವರ್ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಕೊರೊನಾ ವಿಪರೀತವಾಗಿ ಕಾಡುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು. ಅಮಿತಾಬ್ ಅವರಿಗೆ ಯಕೃತ್ತಿನ ಸಮಸ್ಯೆ ಇದ್ದು, ಇದು ತೀವ್ರ ಆತಂಕವನ್ನು ಉಂಟು ಮಾಡಿದೆ.

2012 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು
2012 ರಲ್ಲಿ ಅಮಿತಾಬ್ ಬಚ್ಚನ್ ಒಂದು ಮುಖ್ಯ ಆಪರೇಷನ್‌ಗೆ ಒಳಗಾಗಿದ್ದರು. ಅದು ಮಾತ್ರವೇ ಅಲ್ಲದೆ, ಅಮಿತಾಬ್ ಅವರಿಗೆ ವಯೋ ಸಹಜ ಸಮಸ್ಯೆಗಳಾದ ಸಕ್ಕರೆ ಖಾಯಿಲೆ, ರಕ್ತದ ಒತ್ತಡ ಸಹ ಇದೆ ಎನ್ನಲಾಗಿದೆ.

ಅಮಿತಾಬ್ ಆರೋಗ್ಯ ಈಗ ಹೇಗಿದೆ
ನಾನಾವತಿ ಆಸ್ಪತ್ರೆ ವೈದ್ಯರು ಹೇಳುವಂತೆ, ಅಮಿತಾಬ್ ಬಚ್ಚನ್ ಅವರು ಆರೋಗ್ಯದಿಂದಿದ್ದಾರೆ. ಅವರನ್ನು ವೆಂಟಿಲಟರ್‌ನಲ್ಲಿ ಇಡಲಾಗಿಲ್ಲವಂತೆ. ಅಮಿತಾಬ್ ಅವರ ಆರೋಗ್ಯದ ಮಾಹಿತಿಯನ್ನು ಅವರೇ ಸಾಮಾಜಿಕ ಜಾಲತಾಣ ಮೂಲಕ ನೀಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.


Click it and Unblock the Notifications











