ಅಮಿತಾಬ್ ಬಚ್ಚನ್ ಐಷಾರಾಮಿ ಬಂಗ್ಲೆಯ ಕಾಂಪೌಂಡ್ ಒಡೆಯಲಿದೆ ಬಿಎಂಸಿ
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‌ಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆಯಿಂದ ಸಂಕಷ್ಟ ಎದುರಾಗಿದೆ. ಅಮಿತಾಬ್ ಬಚ್ಚನ್‌ರ ಐಷಾರಾಮಿ ಮನೆಯ ಕಾಂಪೌಂಡ್ ಅನ್ನು ಒಡೆಯಲು ಬಿಎಂಸಿ ಮುಂದಾಗಿದೆ.
ಮುಂಬೈನ ದುಬಾರಿ ಏರಿಯಾ ಜುಹುವಿನಲ್ಲಿ 'ಪ್ರತೀಕ್ಷಾ' ಹೆಸರಿನ ಐಶಾರಾಮಿ ಮನೆಯಲ್ಲಿ ಹೊಂದಿದ್ದಾರೆ ನಟ ಅಮಿತಾಬ್ ಬಚ್ಚನ್. ಅಮಿತಾಬ್ ಬಚ್ಚನ್ ಮನೆಯ ಮುಂದಿನ ರಸ್ತೆ ಅಗಲೀಕರಣ ಆಗುತ್ತಿದ್ದು, ಇದಕ್ಕಾಗಿ ಬಚ್ಚನ್‌ರ ಮನೆಯ ಕಾಂಪೌಂಡ್ ಒಡೆಯಲಿದೆ ಬಿಎಂಸಿ.
ಆದರೆ ಬಿಎಂಸಿಯು ಬಚ್ಚನ್ ಮನೆಯ ಕಾಂಪೌಂಡ್ ಒಡೆಯಲು ಮೀನ-ಮೇಷ ಎಣಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. 2019ರಲ್ಲಿಲೇ ಬಚ್ಚನ್ ಮನೆಯ ಕಾಂಪೌಂಡ್ ಒಡೆದು ರಸ್ತೆ ಅಗಲೀಕರಣ ಮಾಡಲು ಆದೇಶ ಹೊರಡಿಸಲಾಗಿತ್ತು. ಆದರೆ ಕಳೆದ ಒಂದು ವರ್ಷದಿಂದಲೂ ಆದೇಶ ಜಾರಿಯಾಗಿಲ್ಲ.

ರಸ್ತೆ ಅಗಲೀಕರಣ ಮತ್ತು ಕಾಂಪೌಂಡ್ ನೆಲಸಮ ಮಾಡಲು ಕಂಟ್ರಾಕ್ಟರ್ ನೇಮಕ ಆಗದೇ ಇರುವ ಕಾರಣ ಕಾಮಗಾರಿ ಮುಂದುವರೆದಿಲ್ಲ ಎಂದು ಬಿಎಂಸಿಯು ಹೇಳಿತ್ತು. ಅಲ್ಲದೆ ಮುಂದಿನ ಹಣಕಾಸು ವರ್ಷದಲ್ಲಿ ರಸ್ತೆ ಅಗಲೀಕರಣ ಹಾಗೂ ಅದಕ್ಕೆ ಅಗತ್ಯವಾದ ಡೆಮಾಲಿಶನ್ ಕಾರ್ಯಗಳಿಗೆ ಹಣಕಾಸು ಮಂಜೂರು ಮಾಡಿ ನಂತರ ಕಾಮಗಾರಿ ಮುಂದುವರೆಸಲಾಗುವುದು ಎಂದು ಹೇಳಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಲೋಕಾಯುಕ್ತ, ''ಕಾಂಪೌಂಡ್ ನೆಲಸಮ ಮಾಡದೇ ಇರಲು ಬಿಎಂಸಿ ನೀಡಿರುವ ಕಾರಣಗಳು ಸೂಕ್ತವಾಗಿಲ್ಲ. ರಸ್ತೆ ಅಗಲೀಕರಣ ಯೋಜನೆಗೆ ನೀಲ ನಕ್ಷೆ ತಯಾರಾದ ಬಳಿಕವೇ ಅದಕ್ಕೆ ಅಗತ್ಯವಾದ ಹಣಕಾಸು ಹಂಚಿಕೆ ಮಾಡಬೇಕಿರುತ್ತದೆ. ಆದರೆ ಬೇಕೆಂದೇ ಈ ಕಾಮಗಾರಿಗೆ ಹಣಕಾಸು ಬಿಡುಗಡೆ ತಡ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ'' ಎಂದಿದೆ.
''ಮೇ 30 ರ ಬಳಿಕ ಮಾನ್ಸೂನ್ ಪ್ರಾರಂಭವಾಗುತ್ತದೆ. ಅದಾದ ಬಳಿಕ ಯಾವುದೇ ರಸ್ತೆ ಅಗಲೀಕರಣ ಕಾಮಗಾರಿ, ಕಟ್ಟಡ ನೆಲಸಮ ಕಾಮಗಾರಿ ಮಾಡುವಂತಿಲ್ಲ. ಹಾಗಾಗಿ ಮುಂದಿನ ಹಣಕಾಸು ವರ್ಷದಲ್ಲಿಯೂ ಈ ಕಾಮಗಾರಿ ಮುಂದುವರೆಯುವುದಿಲ್ಲ. ಆ ಮೂಲಕ ಈ ಕಾಮಗಾರಿ ಇನ್ನೂ ಒಂದು ವರ್ಷ ಮುಂದೆ ಹೋಗಲಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಲೋಕಾಯುಕ್ತ ನ್ಯಾಯಮೂರ್ತಿ ವಿ.ಎಂ.ಕಾನಡೆ.
ಅಮಿತಾಬ್ ಬಚ್ಚನ್‌ಗೆ 'ಜಲ್ಸಾ' ಹೆಸರಿನ ಬಂಗ್ಲೆಯನ್ನು 'ಶೋಲೆ' ಸಿನಿಮಾ ನಿರ್ದೇಶಿಸಿದ್ದ ರಮೇಶ್ ಸಿಪ್ಪಿ ಉಡುಗೊರೆಯಾಗಿ ನೀಡಿದ್ದರು. 'ಸತ್ತೆ ಪೆ ಸತ್ತಾ' ಸಿನಿಮಾದಲ್ಲಿ ನಟಿಸಿದ್ದಕ್ಕೆ ರಮೇಶ್ ಸಿಪ್ಪಿ ಈ ಉಡುಗೊರೆ ನೀಡಿದ್ದರು. 'ಜಲ್ಸಾ' ಬಂಗ್ಲೆಗೆ ಒಂದು ಕಿ.ಮೀ ದೂರದಲ್ಲಿಯೇ ಅಮಿತಾಬ್ ಬಚ್ಚನ್ ನಿರ್ಮಿಸಿದ್ದ 'ಪ್ರತೀಕ್ಷಾ' ಬಂಗ್ಲೆ ಇದೆ. ಈ ಬಂಗ್ಲೆ ಬಗ್ಗೆ ಅಮಿತಾಬ್ ಬಚ್ಚನ್‌ಗೆ ಅತೀವ ಪ್ರೀತಿ. ಹಾಗಾಗಿಯೇ ಈ ಬಂಗ್ಲೆಯ ಕಾಂಪೌಂಡ್ ಅನ್ನು ಬಚ್ಚನ್ ತಮ್ಮ ಪ್ರಭಾವ ಬಳಸಿ ಒಡೆಯಲು ಬಿಡುತ್ತಿಲ್ಲ ಎನ್ನಲಾಗುತ್ತಿದೆ.
ಬಿಎಂಸಿಯು 2021 ರಲ್ಲಿ ಕಂಗನಾ ರನೌತ್‌ರ ಮುಂಬೈ ಕಚೇರಿಯನ್ನು ಸಂಪೂರ್ಣ ನೆಲಸಮ ಮಾಡಿತ್ತು. ಈ ಹಿಂದೆ ಶಾರುಖ್ ಖಾನ್ ಬಂಗ್ಲೆ, ಹೃತಿಕ್ ರೋಷನ್ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಹಾಗೂ ಬಂಗ್ಲೆಯ ಕೆಲವು ಭಾಗಗಳನ್ನು ನೆಲಸಮ ಮಾಡಿತ್ತು. ಸೋನು ಸೂದ್ ನಿರ್ಮಾಣದ ಹೋಟೆಲ್‌ನ ಕೆಲ ಭಾಗಗಳನ್ನು ಸಹ ಬಿಎಂಸಿ ಕೆಲ ತಿಂಗಳ ಹಿಂದಷ್ಟೆ ಒಡೆದಿತ್ತು. ಆದರೆ ಅಮಿತಾಬ್ ಬಚ್ಚನ್ ಕಾಂಪೌಂಡ್ ಒಡೆಯಲು ಮಾತ್ರ ಮೀನ-ಮೇಷ ಎಣಿಸುತ್ತಿದೆ.


Click it and Unblock the Notifications











