ಆ ತೆಲುಗು ಸಿನಿಮಾ ರೀಮೆಕ್‌ನಲ್ಲಿ ಬಿಗ್‌ಬಿ: ಛೇ.. ಕನ್ನಡದಲ್ಲಿ ಕ್ರೇಜಿ-ಯಶ್ ಈ ಚಿತ್ರ ಮಾಡ್ಬೇಕಿತ್ತು!
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಮೇಲೆ ರೀಮೆಕ್ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ಹಿಟ್ ಸಿನಿಮಾಗಳನ್ನು ರೀಮೆಕ್ ಮಾಡುವ ಪ್ರಯತ್ನ ನಡೆಯುತ್ತಲೇ ಇರುತ್ತಿದೆ. ಇತ್ತೀಚೆಗೆ ಸೌತ್ ಸಿನಿಮಾಗಳನ್ನು ಬಾಲಿವುಡ್ ಮಂದಿ ರೀಮೆಕ್ ಮಾಡೋಕೆ ಮುಗಿಬಿದ್ದಿರೋದು ಗೊತ್ತೇಯಿದೆ. ಇದೀಗ ಮತ್ತೊಂದು ತೆಲುಗು ಸಿನಿಮಾ ಬಾಲಿವುಡ್‌ಗೆ ಹೊರಟಿದೆ.
ವಯಸ್ಸು 80 ದಾಟಿದ್ರು ಬಿಗ್ ಬಿ ಅಮಿತಾಬ್ ಬಚ್ಚನ್ ಒಳಗಿನ ನಟನಿಗೆ ಇನ್ನು 20ರ ಹರೆಯ. ಇವತ್ತಿಗೂ ದಣಿವರಿಯದ ಕಲಾವಿದನಾಗಿ ಅಮಿತಾಬ್ ಬಚ್ಚನ್ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ನಟಿಸಿ ಕಮಾಲ್ ಮಾಡುತ್ತಿದ್ದಾರೆ. ಇತ್ತೀಚೆಗೆ 'ಗುಡ್ ಬೈ', 'ಉಂಚೈ', 'ಘೂಮರ್', 'ಗಣಪತ್' ಸಿನಿಮಾಗಳಲ್ಲಿ ಬಿಗ್‌ಬಿ ನಟಿಸಿದ್ದರು. ಸದ್ಯ 'ಕಲ್ಕಿ', 'ತಲೈವರ್ 170' ಸಿನಿಮಾಗಳಲ್ಲಿ ಅಮಿತಾಬ್ ನಟಿಸ್ತಿದ್ದಾರೆ.

ತೆಲುಗಿನ ಸೂಪರ್ ಹಿಟ್ 'ಊಪಿರಿ' ರೀಮೆಕ್‌ನಲ್ಲಿ ಬಿಗ್‌ಬಿ ನಟಿಸೋ ಬಗ್ಗೆ ಚರ್ಚೆ ಶುರುವಾಗಿದೆ. 7 ವರ್ಷಗಳ ಹಿಂದೆ ತೆಲುಗಿನಲ್ಲಿ ನಾಗಾರ್ಜುನ ಹಾಗೂ ಕಾರ್ತಿ ನಟಿಸಿದ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಸಕ್ಸಸ್ ಕಂಡಿತ್ತು. ಇದೇ ಕತೆಯನ್ನು ಆಧರಿಸಿ ಈಗ ಬಾಲಿವುಡ್‌ನಲ್ಲಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಬಿಗ್‌ಬಿ ಜೊತೆ ರಾಜ್‌ಕುಮಾರ್ ರಾವ್ ನಟಿಸೋ ಸಾಧ್ಯತೆಯಿದೆ.
'ದಿ ಇನ್‌ಟಚಬಲ್ಸ್' ಫ್ರೆಂಚ್ ಸಿನಿಮಾ ಆಧರಿಸಿ ನಿರ್ದೇಶಕ ವಂಶಿ ಪೈಡಿಪಲ್ಲಿ 'ಊಪಿರಿ' ಸಿನಿಮಾ ಕಟ್ಟಿಕೊಟ್ಟಿದ್ದರು. ನಾಗಾರ್ಜುನ- ಕಾರ್ತಿ ಕಾಂಬಿನೇಷನ್ ಹಿಟ್ ಆಗಿತ್ತು. ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಂಡು ಹಿಟ್ ಆಗಿತ್ತು. 2014ರಲ್ಲೇ ಕರಣ್ ಜೋಹರ್ 'ದಿ ಇನ್‌ಟಚಬಲ್ಸ್' ರೈಟ್ಸ್ ಖರೀದಿಸಿದ್ದರು. ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಈಗ ಈ ಚಿತ್ರವನ್ನು ಕರಣ್ ಹಿಂದಿಯಲ್ಲಿ ಕೈಗೆತ್ತಿಕೊಳ್ಳುತ್ತಿದ್ದಾರೆ.

ನಾಗಾರ್ಜುನ ಮಾಡಿದ್ದ ವಿಶೇಷ ಚೇತನ ಪಾತ್ರದಲ್ಲಿ ಅಮಿತಾಬ್ ನಟಿಸಲಿದ್ದು ಕಾರ್ತಿ ಮಾಡಿದ್ದ ಮಿಡಲ್ ಕ್ಲಾಸ್ ಯುವಕನ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ನಟಿಸುವ ಬಗ್ಗೆ ಮಾತುಕತೆ ನಡೀತಿದೆ. ನಿರ್ದೇಶಕರು ಯಾರು ಅನ್ನೋದು ಇನ್ನು ಖಚಿತವಾಗಿಲ್ಲ. ಬಿಗ್‌ಬಿಗೂ ಕೂಡ 'ಊಪಿರಿ' ಸಿನಿಮಾ ಕತೆ ಇಷ್ಟವಾಗಿದ್ದು ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗ್ತಿದೆ. 2016ರಲ್ಲಿ ಇದೇ ಚಿತ್ರವನ್ನು ಕನ್ನಡದಲ್ಲಿ ರೀಮೆಕ್ ಮಾಡುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಯಶ್ ಲೀಡ್ ರೋಲ್‌ಗಳಲ್ಲಿ ನಟಿಸ್ತಾರೆ ಎನ್ನಲಾಗಿತ್ತು.
'ಊಪಿರಿ' ಸಿನಿಮಾ ಕತೆ ಏನು ಎನ್ನುವುದನ್ನು ನೋಡುವುದಾದರೆ ಕೋಟ್ಯಾಧಿಪತಿ ವಿಕ್ರಮ್ ಆದಿತ್ಯ ಅಪಘಾತದಲ್ಲಿ ಪೆಟ್ಟು ತಿಂದು ಗಾಲಿಕುರ್ಚಿಗೆ ಸೀಮಿತನಾಗಿರುತ್ತಾನೆ. ಅವನ ಕೈಕಾಲುಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುತ್ತವೆ. ತನ್ನ ಯೋಗಕ್ಷೇಮ ನೋಡಿಕೊಳ್ಳಲು ಒಬ್ಬ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿರುತ್ತಾನೆ. ಆಗಷ್ಟೇ ಜೈಲಿನಿಂದ ಹೊರಬಂದ ಸೀನು ತನ್ನ ನಿಷ್ಕಲ್ಮಶ ವ್ಯಕ್ತಿತ್ವದಿಂದ ಆ ಉದ್ಯೋಗ ಪಡೆಯುತ್ತಾನೆ. ಹಣದಿಂದಲೇ ಸಂತೋಷ ಎಂದುಕೊಂಡ ಸೀನು, ಸಂತೋಷ ಇರುವುದು ಹಣದಲ್ಲಲ್ಲ, ತನಗೆ ಬೇಕಾದ ಜನರಲ್ಲಿ ಎಂದು ತಿಳಿದಿರುವ ಆದಿತ್ಯ ಜೊತೆಗಿನ ಪಯಣವೇ 'ಊಪಿರಿ'.
ಬಾಕ್ಸಾಫೀಸ್ ಶೇಕ್ ಮಾಡಿದ್ದ 'ಊಪಿರಿ' ಸಿನಿಮಾ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತ್ತು. ಇದೇ ಸಿನಿಮಾ ಈಗ ಬಾಲಿವುಡ್‌ಗೆ ರೀಮೆಕ್ ಆಗುತ್ತಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಉತ್ತರ ಭಾರತದ ಪ್ರೇಕ್ಷಕರು ಕೂಡ 'ಊಪಿರಿ' ನೋಡಿರುತ್ತಾರೆ. ಹಾಗಾಗಿ ಹಿಂದಿಗೆ ರೀಮೆಕ್ ಆದರೆ ವರ್ಕ್ ಆಗುತ್ತಾ? ಎನ್ನುವ ಚರ್ಚೆ ಕೂಡ ನಡೀತಿದೆ. ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications











