ರೆಮೋ ಡಿ ಸೋಜಾಗೆ ಹೃದಯಾಘಾತ: ಶೀಘ್ರ ಗುಣಮುಖರಾಗುವಂತೆ ಅಮಿತಾಬ್ ಹಾರೈಕೆ
ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ, ಸಿನಿಮಾ ನಿರ್ದೇಶಕ ರೆಮೋ ಡಿ ಸೋಜಾಗೆ ಹೃದಯಾಘಾತವಾಗಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೆಮೋ ಡಿ ಸೋಜಾ ಬೇಗ ಗುಣಮುಖರಾಗಲಿ ಎಂದು ಅನೇಕರು ಪ್ರಾರ್ಥನೆ ಮಾಡುತ್ತಿದ್ದಾರೆ.
ಚಿತ್ರರಂಗದ ಅನೇಕ ಗಣ್ಯರು ರೆಮೋ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ರೆಮೋ ಡಿ ಸೋಜಾ ಶೀಘ್ರ ಗಣಮುಖರಾಗಲಿ ಎಂದು ವಿಶ್ ಮಾಡಿದ್ದಾರೆ. ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಥ್ರೋಬ್ಯಾಕ್ ವಿಡಿಯೋ ಕ್ಲಿಪ್ ಅನ್ನು ಅಮಿತಾಬ್ ಶೇರ್ ಮಾಡಿ, 'ಶೀಘ್ರವೇ ಗಣಮುಖರಾಗಿ ರೆಮೋ' ಎಂದು ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ರೆಮೋ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅಮಿತಾಬ್ ಬಚ್ಚನ್ ಅವರ ಬಗ್ಗೆ ಮಾತನಾಡಿದ್ದಾರೆ. ಯಾವಾಗಲು ಅಮಿತಾಬ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಶುಕ್ರವಾರ (ಡಿ.12) ರೆಮೋ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ತಕ್ಷಣ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 46 ವರ್ಷದ ನಿರ್ದೇಶಕ ರೆಮೋ ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ಅವರಿಗೆ ಆಂಜಿಯೋಗ್ರಫಿ ಮಾಡಿಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಮಿತಾಬ್ ಬಚ್ಚನ್ ಸದ್ಯ ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಿನಿಮಾ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ.


Click it and Unblock the Notifications











