ಅಮಿತಾಬ್ ಬಚ್ಚನ್ ಗೆ ಕಣ್ಣಿನ ಸಮಸ್ಯೆ: ಕುರುಡನಾಗುತ್ತಿದ್ದೇನೆ ಎಂದ ನಟ
ನಟ ಅಮಿತಾಬ್ ಬಚ್ಚನ್ ಗೆ ಈಗ 77 ವಯಸ್ಸು, ಈಗಲೂ ನಟಿಸುತ್ತಲೇ ಇದ್ದಾರೆ. ಯುವ ನಟರಿಗೂ ಸವಾಲಾಗುವಂತೆ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕೆಲವು ವಯೋಸಹಜ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಹ ಅವರು ಈಗಲೂ ಸಿನಿಮಾದಿಂದ ದೂರವಾಗಿಲ್ಲ. ಪ್ರಸ್ತುತ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ನಾಲ್ಕೂ ಸಿನಿಮಾದ ಚಿತ್ರೀಕರಣ ಒಟ್ಟೊಟ್ಟಿಗೆ ಮುಗಿಸುತ್ತಿದ್ದಾರೆ 77 ರ ವಯಸ್ಸಿನ ಈ ನಟ.
ಅಮಿತಾಬ್ ಬಚ್ಚನ್ ಅವರ ಈ ಬ್ಯುಸಿಯಾಗಿ ದಿನಚರಿಯಿಂದಲೋ ಏನೋ ಅವರಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಅಮಿತಾಬ್ ಅವರನ್ನು ಬಹುವಾಗಿ ಕಾಡುತ್ತಿರುವುದು ಅವರ ಕಣ್ಣಿನ ಸಮಸ್ಯೆ. ಈ ಬಗ್ಗೆ ಅವರೇ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಕಣ್ಣು ಮಂಜಾಗಿದೆ
ನಟ ಅಮಿತಾಬ್ ಬಚ್ಚನ್ ಅವರೇ ಹೇಳಿಕೊಂಡಂತೆ ಅವರ ಕಣ್ಣಿನ ದೃಷ್ಟಿ ಮಂಜಾಗಿದೆಯಂತೆ. ''ನನಗೆ ವಸ್ತುಗಳು ಮಂಜು-ಮಂಜಾಗಿ ಕಾಣುತ್ತಿವೆ. ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲ'' ಎಂದು ಅವರು ತಮ್ಮ ಕಣ್ಣಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ಅಕ್ಷರಗಳು ಎರಡೆರಡು ಕಾಣುತ್ತಿದೆ: ಅಮಿತಾಬ್
''ವಸ್ತುಗಳು, ಅಕ್ಷರಗಳು ನೆರಳುಗಳಂತೆ ಎರಡೆರಡು ಕಾಣುವಂತಾಗುತ್ತಿದೆ. ನನಗೆ ಗೊತ್ತಾಗುತ್ತಿದೆ ನಾನು ಕುರುಡನಾಗುವತ್ತ ಸಾಗುತ್ತಿದ್ದೇನೆಂದು'' ಎಂದು ತಮ್ಮ ಅಭಿಮಾನಿಗಳೊಂದಿಗೆ ಸತ್ಯ ಸಂಗತಿಯನ್ನು ಹಂಚಿಕೊಂಡಿದ್ದಾರೆ ಅಮಿತಾಬ್ ಬಚ್ಚನ್.

ಅಮ್ಮನನ್ನು ನೆನಪಿಸಿಕೊಂಡ ಅಮಿತಾಬ್
ತಾವು ಸಣ್ಣವರಿದ್ದಾಗ ಅಮ್ಮ ಹೇಗೆ ಕಣ್ಣಿನ ಸಮಸ್ಯೆಗೆ ಮದ್ದು ಮಾಡುತ್ತಿದ್ದರು ಎಂಬುದನ್ನು ನೆನಪಿಸಿಕೊಂಡಿರುವ ಅಮಿತಾಬ್ ಬಚ್ಚನ್, 'ಅಮ್ಮ ತನ್ನ ಸೀರೆ ಸೆರಗಿನ ಅಂಚನ್ನು ದುಂಡಗೆ ಮಾಡಿ, ಅದಕ್ಕೆ ಊದಿ ಬೆಚ್ಚಗೆ ಮಾಡಿ, ಕಣ್ಣಿಗೆ ಇಡುತ್ತಿದ್ದರು, ನಾನು ಈಗಲೂ ಅದನ್ನೇ ಅನುಸಿರಿದೆ'' ಎಂದು ಅಮಿತಾಬ್ ಬರೆದುಕೊಂಡಿದ್ದಾರೆ

ವೈದ್ಯರ ಸಲಹೆ ಪಾಲಿಸುತ್ತಿದ್ದಾರೆ ಅಮಿತಾಬ್
ಟವೆಲ್ ಅನ್ನು ಬಿಸಿ ನೀರಲ್ಲಿ ನೆನಸಿ, ಕಣ್ಣಿಗೆ ಇಟ್ಟುಕೊಂಡೆ, ವೈದ್ಯರನ್ನು ಸಂಪರ್ಕಿಸಿ ಅವರು ಹೇಳಿದಂತೆ ಗಂಟೆಗೊಂದರಂತೆ ಡ್ರಾಪ್ಸ್ ಹಾಕಿಕೊಂಡೆ, ಈಗ ಸುಧಾರಿಸಿದ್ದೇನೆ ಎಂದು ಅಮಿತಾಬ್ ಹೇಳಿದ್ದಾರೆ. ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕೂರಬೇಡಿ ಎಂದು ವೈದ್ಯರು ಹೇಳಿದ್ದಾರೆ ಎಂದಿದ್ದಾರೆ ಅಮಿತಾಬ್.

ಅಮಿತಾಬ್ ಬಚ್ಚನ್ ಮುಂಬರುವ ಸಿನಿಮಾಗಳು
ಅಮಿತಾಬ್ ಬಚ್ಚನ್ ಪ್ರಸ್ತುತ ನಾಲ್ಕು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚೆಹ್ರೆ, ಝುಂಡ್, ಗುಲಾಬೋ ಸಿತಾಬೊ, ಬ್ರಹ್ಮಾಸ್ತ್ರ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇವುಗಳಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿದಿದೆ.


Click it and Unblock the Notifications











