ಖ್ಯಾತ ಸಂಗೀತ ನಿರ್ದೇಶಕನಿಗೆ ₹40 ಲಕ್ಷ ರೂಪಾಯಿ ಪಂಗನಾಮ ಹಾಕಿ ಪರಾರಿಯಾದ ಸಹಾಯಕ...!
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಹೆಸರನ್ನೇಳಿಕೊಂಡು ದೊಡ್ಡ ದೊಡ್ಡವರಿಗೆ ಪಂಗನಾಮ ಹಾಕುತ್ತಿದ್ದ ಕಿರಾತಕರು ಈಗ ದೊಡ್ಡ ದೊಡ್ಡವರ ಮನೆಯ ಬಾಗಿಲನ್ನೇ ಮುರಿದು ಒಳಹೊಕ್ಕುತ್ತಿದ್ದಾರೆ. ಕಳ್ಳತನ ಮಾಡಿ ಅಲ್ಲಿಂದ ಅನಾಯಾಸವಾಗಿ ಪಾರಾಗುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಸಂಗೀತ ನಿರ್ದೇಶಕ ಪ್ರೀತಂ ಕಛೇರಿಯಲ್ಲಿ ನಡೆದ ಕಳ್ಳತನದ ಪ್ರಕರಣ.
ಹೌದು, ಫೆಬ್ರವರಿ 4ರಂದು ಮಧ್ಯಾಹ್ನ ಎರಡು ಗಂಟೆಗೆ ಗೋರೆಗಾಂವ್‌ನಲ್ಲಿರುವ ಪ್ರೀತಂ ಅವರ ಆಫೀಸ್‌ಗೆ ಅವರ ಮುಂದಿನ ಕೆಲಸಕ್ಕೆ ಸಂಬಂಧಿಸಿದ ಹಣವನ್ನು ನೀಡಲು ಬಂದಿದ್ದಾರೆ. ಪ್ರೀತಂ ಅವರ ಮ್ಯಾನೇಜರ್ ಬಳಿ 40 ಲಕ್ಷ ಹಣವನ್ನು ನೀಡಿದ್ದಾರೆ. ಆ ಸಮಯದಲ್ಲಿಯೇ ಪ್ರೀತಂ ಅವರ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಶಿಶ್ ಸಯಾಲ್ ಇದನ್ನು ಗಮನಿಸಿದ್ದು ಮ್ಯಾನೇಜರ್ ಬಂದು ಹಣ ಇಡುವುದನ್ನೇ ಕಾಯುತ್ತಾ ನಿಂತಿದ್ದಾನೆ.

ಆಶಿಶ್ ಸಯಾಲ್ ಪ್ಲ್ಯಾನ್ ಅರಿಯದ ಪ್ರೀತಂ ಮ್ಯಾನೇಜರ್ ವಿನೀತ್ ಚೆಡ್ಡಾ ಹಣವನ್ನು ಟ್ರಾಲಿ ಬ್ಯಾಗ್‌ನಲ್ಲಿ ಇಟ್ಟು ಹೋಗಿದ್ದಾರೆ. ಆ ನಂತರ ಕೆಲ ಸಮಯದ ನಂತರ ಕಛೇರಿಗೆ ಬಂದ ಪ್ರೀತಂ ಮ್ಯಾನೇಜರ್ ಗೆ ಹಣ ಇದ್ದ ಟ್ರಾಲಿ ಬ್ಯಾಗ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿದ್ದವರನ್ನು ಕರೆದು ವಿಚಾರಿಸಿದಾಗ ಆಶಿಶ್ ಸಯಾಲ್ ಬ್ಯಾಗ್ ಇದ್ದ ಹಣವನ್ನು ಪ್ರೀತಂ ಸರ್ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿ ತಗೆದುಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾರೆ.
ಇದರಿಂದ ಅನುಮಾನಗೊಂಡ ಪ್ರೀತಂ ಮ್ಯಾನೇಜರ್ ಆಶಿಶ್ ಸಯಾಲ್‌ಗೆ ಕರೆ ಮಾಡಿದ್ದಾರೆ. ಆದರೆ ಆರಂಭದಲ್ಲಿ ಕರೆ ರಿಸೀವ್ ಮಾಡದ ಆಶಿಶ್ ಆ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಕೂಡಲೇ ಪ್ರೀತಂ ಅವರಿಗೆ ಕರೆ ಮಾಡಿ ಮ್ಯಾಣೇಜರ್ ವಿನೀತ್ ವಿಷಯ ತಿಳಿಸಿದ್ದಾರೆ. ಆ ನಂತರ ಪ್ರೀತಂ ಸಲಹೆಯ ಮೇರೆಗೆ ಪೊಲೀಸ್ ಠಾಣೆಗೆ ತೆರಳಿ ದೂರನ್ನು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಮಲಾಡ್ ಪೊಲೀಸರು ಶಂಕಿತ ಆರೋಪಿ 32 ವರ್ಷದ ಆಶಿಶ್ ಸಯಾಲ್ ಅವರನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಿದ್ದಾರೆ ಎಂದು ವರದಿಯಾಗಿದೆ.
ಅಂದ್ಹಾಗೇ ಸೆಲೆಬ್ರಿಟಿಗಳಿಗೆ ಅವರ ಸಹಾಯಕರೇ ಮೋಸ ಮಾಡುತ್ತಿರುವುದು ಇದು ಮೊದಲೇನಲ್ಲ. ಚಿತ್ರರಂಗದಲ್ಲಿ ಈ ಹಿಂದೆ ಅನೇಕ ಸ್ಟಾರ್‌ಗಳ ಮನೆಯಲ್ಲಿ ಅವರ ಮನೆಯ ಕೆಲಸದವರೇ ಮೋಸ ಮಾಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ, ಐಶ್ವರ್ಯ ರಜಿನಿಕಾಂತ್ ಹೀಗೆ ದೊಡ್ಡ ದೊಡ್ಡವರ ಮನೆಯಲ್ಲಿ ಕೆಲಸಕ್ಕೆ ಇದ್ದ ಕೆಲಸಗಾರರೇ ನಂಬಿಕೆಯನ್ನು ಗಳಿಸಿಕೊಂಡು ಯಾರಿಗೂ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನ ಲೂಟಿ ಮಾಡಿದ್ದಾರೆ. ಆ ನಂತರ ಸಿಕ್ಕಿ ಬಿದ್ದು ಜೈಲು ವಾಸವನ್ನು ಅನುಭವಿಸಿದ್ದಾರೆ. ಇನ್ನು ಅಮೃತಧಾರೆಯ ಭೂಮಿಕಾ ಖ್ಯಾತಿಯ ಛಾಯಾ ಸಿಂಗ್ ಅವರ ಮನೆಯಲ್ಲಿ ಕೂಡ ಇದೇ ರೀತಿ ಕಳ್ಳತನವಾಗಿತ್ತು. ನಂಬಿಕೆ ದ್ರೋಹದ ಈ ಕಥೆಯಲ್ಲಿ ದರ್ಶನ್ ಅವರ ಮ್ಯಾನೇಜರ್ ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ಕೂಡ ಇದ್ದಾನೆ. ದರ್ಶನ್ ಅವರ ನಂಬಿಕೆಯನ್ನು ಗಳಿಸಿ ಲಕ್ಷಾಂತರ ಅಲ್ಲ ಬದಲಿಗೆ ಕೋಟ್ಯಂತರ ಹಣದ ಮಕ್ಮಲ್ ಟೋಪಿ ಹಾಕಿದ ಹೆಗ್ಗಳಿಗೆ ಇವನದ್ದು.


Click it and Unblock the Notifications










