ಜಾನ್ ಸೆನಾರಿಂದ ಕಿಮ್ ಕಾರ್ಡಶಿಯಾನ್ ವರೆಗೆ ; ಅನಂತ್ ಅಂಬಾನಿ ಮದ್ವೆಗೆ ಯಾರೆಲ್ಲ ಬಂದಿದ್ಧಾರೆ ಗೊತ್ತಾ..?
ಮದುವೆಗಳನ್ನೂ ಅದ್ಧೂರಿಯಾಗಿ ಮಾಡುವುದರ ಮೂಲಕ ಸಿರಿವಂತರ ಸಂಪತ್ತು ಹತ್ತಾರು ಕಡೆ ಹಂಚಿಕೆಯಾಗಿ, ನೂರಾರು ಅಲ್ಲ ಬದಲಿಗೆ ಸಾವಿರಾರು ಮಂದಿಗೆ ಉದ್ಯೋಗ ದೊರಕುವುದು ಒಂದು ಮಗ್ಗುಲಾದರೆ ಮತ್ತೊಂದು ಮಗ್ಗುಲಿನಲ್ಲಿ ಅದ್ಧೂರಿ ಮದ್ವೆಯಿಂದ ಉಂಟಾಗುವ ಸಾಮಾಜಿಕ ಹಾನಿಯ ಪ್ರಮಾಣವನ್ನು ಲೆಕ್ಕ ಹಾಕಲು ಸಾಧ್ಯ ಇಲ್ಲ.ಅದ್ಧೂರಿ ಮದುವೆಯ ವೈಭವದ ಆಚರಣೆ ಮೂಲಕ ಸಾಮಾಜಿಕ ಜಾಲತಾಣದ ಮೂಲಕ, ಟಿವಿ ಮೂಲಕ ಕಣ್ತುಂಬಿಕೊಂಡಾಗ ಹೆಣ್ಣು ಹೆತ್ತ ತಂದೆ-ತಾಯಿ ಮನದಲ್ಲಿ ಉಂಟಾಗುವ ತಲ್ಲಣ ನೂರೆಂಟು ಬಗೆಗಳಲ್ಲಿರುತ್ತವೆ.
ಇರಲಿ, ವಿಚಾರ ಅದಲ್ಲ. ಸದ್ಯದ ಸಮಾಚಾರ ಏನೆಂದರೆ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ ಉದ್ಯಮಿ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಮದುವೆ ಇಂದಿನಿಂದ ಶುರುವಾಗಿದೆ. ಅದ್ಧೂರಿ ಸಮಾರಂಭದಲ್ಲಿ ಭಾರತ ಸೇರಿದಂತೆ, ವಿದೇಶಿ ಗಣ್ಯರು ಭಾಗವಹಿಸಿದ್ದಾರೆ.

ಕೋಟ್ಯಾಧಿಪತಿಯ ಕೂಸಿನ ಮದುವೆಗೆ ಮುಂಬೈನಲ್ಲಿ ಸ್ವರ್ಗವೇ ಧರೆಗಿಳಿದಿದೆ. ಮುಖೇಶ್ ಅಂಬಾನಿ ಮನೆ ಆಂಟಿಲಿಯಾವನ್ನು ಕಣ್ಣು ಕುಕ್ಕುವಂತೆ ಸಿಂಗರಿಸಲಾಗಿದೆ. ಇನ್ನೂ ಭಾರತದ ನಾನಾ ಭಾಗದಲ್ಲಿರುವ ಧ್ರುವ ತಾರೆಯರು ಈ ಮದುವೆಯ ಕಳೆಯನ್ನ ಹೆಚ್ಚಿಸಲು ಈಗಾಗಲೇ ಮುಂಬೈಗೆ ಬಂದಿಳಿದಿದ್ದಾರೆ. ನ್ಯೂಯಾರ್ಕ್‌ನಲ್ಲಿದ್ದ ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್, ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಕೂಡ ಮುಂಬೈಗೆ ಮರಳಿದ್ಧಾರೆ.
ಇನ್ನೂ.. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಜಾನ್ವಿ ಕಪೂರ್ , ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ವಿಕ್ಕಿ ಕೌಶಲ್ ಅವರಿಂದ ಈ ಮದ್ವೆ ಸಮಾರಂಭದ ಮೆರಗು ಹೆಚ್ಚಾಗಿದೆ.

ಇನ್ನೂ ಆಂಧ್ರದಿಂದ ರಾಮ್ ಚರಣ್ ತೇಜಾ ಕೂಡ ಈ ಮದ್ವೆ ಸಮಾರಂಭಕ್ಕೆ ತೆರಳಿದ್ದಾರೆ. ಕೇವಲ ರಾಮ್ ಚರಣ್ ಮಾತ್ರ ಅಲ್ಲ ನಮ್ಮ ಕನ್ನಡದಿಂದ ರಾಕಿಂಗ್ ಸ್ಟಾರ್ ಯಶ್ ಕೂಡ ತಮ್ಮ ಪತ್ನಿಯ ಜೊತೆ ಅನಂತ್ ಅಂಬಾನಿಯ ಮದುವೆಯ ಸಮಾರಂಭ ಕಣ್ತುಂಬಿಕೊಳ್ಳಲು ತೆರಳಿದ್ಧಾರೆ.
ಬರಿ ದೇಶ ಅಷ್ಟೇ ಅಲ್ಲ ವಿದೇಶಿ ಗಣ್ಯರ ದಂಡೇ ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಇಟಲಿಯ ಮಾಜಿ ಪ್ರಧಾನಿ ಮ್ಯಾಟಿಯೊ ರೆಂಜಿ ವಿವಾಹದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ತಾಂಜಾನಿಯಾ ಅಧ್ಯಕ್ಷ ಸಾಮಿಯಾ ಸುಲುಹು ಹಸನ್, ಆಸ್ಟ್ರಿಯಾದ ಮಾಜಿ ಪ್ರಧಾನಿ ಸೆಬಾಸ್ಟಿಯನ್ ಕುರ್ಜ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಮತ್ತು ಸ್ವೀಡನ್ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್ ಅವರನ್ನು ಆಹ್ವಾನಿಸಲಾಗಿದೆ.

ಇಷ್ಟೆಲ್ಲ ಯಾಕೆ 16 ಬಾರಿ ವರ್ಲ್ಡ್ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದ್ದ ಇತ್ತೀಚೆಗಷ್ಟೇ ನಿವೃತ್ತಿಯನ್ನೂ ಘೋಷಿಸಿದ್ದ WWEನ ಜಾನ್ ಸೀನಾ ಕೂಡ ಮುಂಬೈಗೆ ಬಂದಿಳಿದ್ದಾರೆ.ಇನ್ನೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಂತ್ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಳಿದಂತೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಗೆ ಗಾಂಧಿ ಕುಟುಂಬಕ್ಕೂ ಆಹ್ವಾನ ನೀಡಲಾಗಿದೆ. ಆದರೆ ಗಾಂಧಿ ಕುಟುಂಬ ಈ ಮದುವೆಯಿಂದ ಅಂತರ ಕಾಯ್ದುಕೊಂಡಿದೆ. ಈ ಮದುವೆಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಕಾಣಿಸಿಕೊಳ್ಳುವುದಿಲ್ಲ. ತೇಜಸ್ವಿ ಯಾದವ್ ಮತ್ತು ಲಾಲು ಯಾದವ್ ಕೂಡ ಈ ಮದುವೆಗೆ ಬಂದಿದ್ದಾರೆ. ಅಖಿಲೇಶ್ ಯಾದವ್ ಕೂಡ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೋಸ್ಕರ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ.


Click it and Unblock the Notifications











