ಕಾಸಿದ್ರೆ ಕೈಲಾಸ, ಅಂಬಾನಿ ಮಗನ ಮದುವೆಗೆ ಧರೆಗಿಳಿದ ಸ್ವರ್ಗ ; ರಿಹಾನ್ನಾ ಹಾಡು..ತಾರೆಯರ ದಂಡು..!
ದೊಡ್ಡವರ ಹಾಗೂ ದುಡ್ಡಿದ್ದವರ ಕುಟುಂಬಗಳ 'ಮದುವೆ' ಮತ್ತು 'ಮನೆ' ಎರಡೂ ಈಗ ಗಂಟೆ ಗಟ್ಟಲೆ 'ಬ್ರೇಕಿಂಗ್ ನ್ಯೂಸ್' ಆಗುವ ಕಾಲ ಘಟ್ಟವಿದು. ಇದಕ್ಕೆ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಕಿರಿಯ ಮಗ 'ಅನಂತ್ ಅಂಬಾನಿ' ಮದುವೆ ಇನ್ನೊಂದು ಉದಾಹರಣೆ.
ಹೌದು, ನಿಮಗೆ ಗೊತ್ತಿರಲಿ.. ಕೋಟ್ಯಾಧಿಪತಿಯ ಕೂಸಿನ ಮದುವೆ, ಜುಲೈ ಹನ್ನೆರಡಕ್ಕೆ ನಡೆಯಲಿದೆ. ಆದರೆ, ತಯಾರಿ ಈಗಿಂದನೇ ಆರಂಭವಾಗಿದೆ. ಮಾರ್ಚ್ 01ರಿಂದ ಮಾರ್ಚ್ 03ರವರೆಗೆ ಅದ್ಧೂರಿ ವೈಭವೋಪೇತ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಗುಜರಾತ್ ನ ಜಾಮ್ ನಗರದಲ್ಲಿ ಸ್ವರ್ಗವೇ ಧರೆಗಿಳಿದಿದೆ.

ಈಗಾಗಲೇ ಜಾಮ್ ನಗರದಲ್ಲಿ ಹದಿನಾಲ್ಕು ಹೊಸ ದೇಗುಲಗಳ ಸಮುಚ್ಚಯದ ನಿರ್ಮಾಣವನ್ನ ಮಾಡಲಾಗಿದೆ. ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆ ಅಸ್ಮಿತೆಯನ್ನು ಎತ್ತಿ ಹಿಡಿಯುವ ದೇವಾಲಯಗಳನ್ನ ನೀವೂ ಇಲ್ಲಿ ನೋಡಬಹುದು. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ದೇವಾನುದೇವತೆಗಳ ಶಿಲ್ಪಕಲೆಗಳು, ವರ್ಣಚಿತ್ರಗಳು, ವಾಸ್ತು ಶಿಲ್ಪದಿಂದ ಪ್ರೇರಿತವಾದ ಪಾರಂಪರಿಕ ಚಿತ್ರಗಳು, ಅಬ್ಬಬ್ಬಾ..
ನೀತಾ ಅಂಬಾನಿ ಉಸ್ತುವಾರಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ದೇಶ ವಿದೇಶದ ದೊಡ್ಡ ದೊಡ್ಡವರೆಲ್ಲ ಬರುವ ನಿರೀಕ್ಷೆ ಇದೆ. ಆದರೆ ಬರುವ ಗಣ್ಯರಿಗೆ ಉಳಿದುಕೊಳ್ಳಲು ಜಾಮ್ ನಗರದಲ್ಲಿ ಹೆಚ್ಚಿನ ವ್ಯವಸ್ಥೆ ಇಲ್ಲ. ಐಶಾರಾಮಿ ಹೋಟೆಲ್ ಇಲ್ಲ. ಹಾಗಂಥ ಇದು ದೊಡ್ಡ ಸಮಸ್ಯೆ ಅಲ್ಲ.

ಯಾಕೆಂದರೆ ದುಡ್ಡಿದ್ದರೆ ಏನ್ ಬೇಕಾದರೂ ಮಾಡಬಹುದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾರ್ಯಕ್ರಮಕ್ಕೆ ಬರಲಿರುವ ಗಣ್ಯರು ಉಳಿದುಕೊಳ್ಳಲು ಅನುಕೂಲವಾಗುವಂತೆ ಐಷಾರಾಮಿ ಟೆಂಟ್ ಗಳನ್ನ ನಿರ್ಮಾಣ ಮಾಡಲಾಗಿದೆ. ಈ ಟೆಂಟ್ ನಲ್ಲಿ ಐಶಾರಾಮಿ ಬಾತ್ ರೂಮ್ ಕೂಡ ಇದೆ.
ಇನ್ನೂ ದೆಹಲಿ ಹಾಗೂ ಮುಂಬೈನಿಂದ ಬರಲಿರುವ ಗಣ್ಯರಿಗಾಗಿಯೇ ವಿಶೇಷವಾದ ವಿಮಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಮೂರು ದಿನಗಳ ಕಾಲ, ಮೂರು ಪರಿಕಲ್ಪನೆಯಡಿ ನಡೆಯಲಿದೆ. ಕಾರ್ಯಕ್ರಮ ಹೀಗೆ ಇರುತ್ತೆ, ಹೀಗೆ ಬರಬೇಕು ಎಂಬ ಮಾರ್ಗಸೂಚಿಯನ್ನೂ ಕೂಡ ಗಣ್ಯರಿಗೆ ಕಳಿಸಲಾಗಿದೆ.

ಮೊದಲ ದಿನ 'ಆನ್ ಇವಿನಿಂಗ್ ಇನ್ ಎವರ್‌ಲ್ಯಾಂಡ್' ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬರುವವರು ಕಾಕ್ ಟೈಲ್ ಬಟ್ಟೆಗಳನ್ನೇ ಹಾಕಬೇಕು. ಎರಡನೇ ದಿನ 'ಎ ವಾಕ್ ಆನ್ ದಿ ವೈಲ್ಡ್ ಸೈಡ್' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂಬಾನಿ ಪ್ರಾಣಿ ಸಂರಕ್ಷಣೆ ಕೇಂದ್ರದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಅರಣ್ಯ ಪರಿಕಲ್ಪನೆಗೆ ತಕ್ಕಂತೆ ಉಡುಗೆಗಳನ್ನ ತೊಡಬೇಕಿದೆ. ಇನ್ನೂ ಮೂರನೇ ದಿನ 'ಮೇಳಾ ರೋಗ್ 'ನ ಆಯೋಜಿಸಲಾಗಿದೆ.

ಇಲ್ಲಿ 'ದೇಸಿ ಕ್ರೀಡೆ'ಯನ್ನ ಆಡಿ ಆ ನಂತರ 'ಟಸ್ಕರ್ ಟೇಲ್ಸ್' ಹೆಸರಿನಲ್ಲಿ ಜಾಮ್ ನಗರದ ಸೌಂದರ್ಯವನ್ನ ಅತಿಥಿಗಳು ಸವಿಯಲಿದ್ದಾರೆ. ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಿ ಕ್ಯಾಮರಾಗೆ ಫೋಸ್ ಕೊಡಲಿದ್ದಾರೆ
ಯಾರೆಲ್ಲ ಬರ್ತಿದ್ದಾರೆ ಈ ಅದ್ದೂರಿ ಸಮಾರಂಭಕ್ಕೆ..?
ಈ ಮೂರು ದಿನಗಳ ಸಂಭ್ರಮದಲ್ಲಿ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೋರ್ಗಾನ್ ಸ್ಟಾನ್ಲಿ ಸಿಇಒ ಟೆಡ್ ಪಿಕ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಡಿಸ್ನಿ ಸಿಇಒ ಬಾಬ್ ಇಗರ್, ಬ್ಲ್ಯಾಕ್‌ರಾಕ್ ಸಿಇಒ ಲ್ಯಾರಿ ಫಿಂಕ್, ಅಡ್ನಾಕ್ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಮತ್ತು ಇಎಲ್ ರೋಥ್‌ಸ್ಚೈಲ್ಡ್ ಅಧ್ಯಕ್ಷ ಲಿನ್ ಫಾರೆಸ್ಟರ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ ಅನ್ನುವುದು ಸದ್ಯದ ಸುದ್ದಿ.

ಇನ್ನೂ ಭಾರತದ ಉದ್ಯಮಿಗಳಾದ ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್, ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಗಾ, ಇನ್ಫೋಸಿಸ್ ಅಧ್ಯಕ್ಷ ನಂದನ್ ನೀಲೇಕಣಿ, ವಿಪ್ರೊದ ರಿಶದ್ ಪ್ರೇಮ್‌ಜಿ, ಸೆರಂ ಇನ್‌ಸ್ಟಿಟ್ಯೂಟ್ ನ ಸಿಇಒ ಪೂನವಾಲಾ, ಬಾಲಿವುಡ್ ನ ಸ್ಟಾರ್ ಗಳಾದ ಆಮೀರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ರಣ್ಬೀರ್ ಕಪೂರ್, ಆಲಿಯಾ ಭಟ್ ಹೀಗೆ ಅನೇಕರಿಗೆ ಆಮಂತ್ರಣ ಪತ್ರಿಕೆಯನ್ನ ನೀಡಲಾಗಿದೆ . ಇವ್ರಷ್ಟೇ ಅಲ್ಲ ಕ್ರೀಡಾಪಟುಗಳ ದೊಡ್ಡ ದಂಡು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಆ ಪೈಕಿ ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ, ರೊಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಪ್ರಮುಖರು
ಇಷ್ಟೇ ಅಲ್ಲ ಪ್ರೀ ವೆಡ್ಡಿಂಗ್ ಈವೆಂಟ್‌ನಲ್ಲಿ ಖ್ಯಾತ ಅಂತರರಾಷ್ಟ್ರೀಯ ಕಲಾವಿದರಾದ ರಿಹಾನ್ನಾ ಮತ್ತು ಜಾದೂಗಾರ ಡೇವಿಡ್ ಬ್ಲೇನ್ ಅವರು ಪ್ರದರ್ಶನ ನೀಡಲಿದ್ದಾರೆ. ಹಾಗೇ ಭಾರತದ ಖ್ಯಾತ ಸಂಗೀತಗಾರರಾದ ಅರ್ಜಿತ್ ಸಿಂಗ್, ಅಜಯ್-ಅತುಲ್ ಮತ್ತು ದಿಲ್ಜಿತ್ ಪ್ರದರ್ಶನ ನೀಡಲಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ 'ಕಾಸಿದ್ರೆ ಕೈಲಾಸ' ಎಂಬ ಮಾತನ್ನ ಅಕ್ಷರಶಃ ನಿಜವಾಗಿಸಿರುವ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ, ತಮ್ಮ ಮಗನ ಮದುವೆಗೆ ಅದ್ಧೂರಿತನದ ಮೆರಗನ್ನ ನೀಡಿದ್ದಾರೆ. ಜಗತ್ತಿನ ಗಮನ ಸೆಳೆದಿದ್ದಾರೆ.


Click it and Unblock the Notifications











