ಶ್ರೀದೇವಿ ಪಾರ್ಥೀವ ಶರೀರ ತರಲು ದುಬೈಗೆ ಪ್ರೈವೇಟ್ ಜೆಟ್ ಕಳುಹಿಸಿದ ಅನಿಲ್ ಅಂಬಾನಿ
ಸಂಬಂಧಿ ಮೋಹಿತ್ ಮಾರ್ವಾ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದುಬೈಗೆ ಕುಟುಂಬದ ಸಮೇತ ತೆರಳಿದ್ದ ಶ್ರೀದೇವಿ, ತಾಯ್ನಾಡಿಗೆ ಜೀವಂತವಾಗಿ ವಾಪಸ್ ಬರಲೇ ಇಲ್ಲ. ಮದುವೆಯಲ್ಲಿ ಖುಷಿ ಖುಷಿಯಿಂದ ಪಾಲ್ಗೊಂಡು, ಪತಿ ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದ ಶ್ರೀದೇವಿ ಈಗ ಕೇವಲ ನೆನಪು ಮಾತ್ರ.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ದುಬೈನ ಹೋಟೆಲ್ ಒಂದಕ್ಕೆ ತೆರಳಿದ್ದ ಶ್ರೀದೇವಿ, ಅಲ್ಲಿನ ಬಾತ್ ರೂಮ್ ನಲ್ಲಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸುವ ಮುನ್ನವೇ ಶ್ರೀದೇವಿ ಕೊನೆಯುಸಿರೆಳೆದುಬಿಟ್ಟರು. ಹೃದಯಾಘಾತದಿಂದ ಶ್ರೀದೇವಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ, ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ.
ಸದ್ಯ ದುಬೈನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯ ಆಗಿದ್ದು, ಲ್ಯಾಬ್ ರಿಪೋರ್ಟ್ ಗಳಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಲ್ಯಾಬ್ ರಿಪೋರ್ಟ್ ಬಂದ ನಂತರ ಮರಣ ಪ್ರಮಾಣ ಪತ್ರ ನೀಡಲಾಗುತ್ತದೆ. ಡೆತ್ ಸರ್ಟಿಫಿಕೇಟ್ ಭಾರತೀಯ ರಾಯಭಾರ ಕಛೇರಿ ತಲುಪಿದ ಕೂಡಲೆ ಶ್ರೀದೇವಿ ಅವರ ಪಾಸ್ ಪೋರ್ಟ್ ರದ್ದು ಮಾಡಿ, ಪಾರ್ಥೀವ ಶರೀರವನ್ನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.

ದುಬೈನಿಂದ ಭಾರತಕ್ಕೆ ಶ್ರೀದೇವಿ ಅವರ ಪಾರ್ಥೀವ ಶರೀರ ತರಲು ಉದ್ಯಮಿ ಅನಿಲ್ ಅಂಬಾನಿ ತಮ್ಮ ಪ್ರೈವೇಟ್ ಜೆಟ್ ನ ಕಳುಹಿಸಿ ಕೊಟ್ಟಿದ್ದಾರಂತೆ.
13 ಆಸನಗಳಿರುವ ರಿಲಯೆನ್ಸ್ ಟ್ರಾನ್ಸ್ ಪೋರ್ಟ್ & ಟ್ರಾವೆಲ್ ಲಿಮಿಟೆಡ್ ಗೆ ಸೇರಿದ್ದ ಪ್ರೈವೇಟ್ ಜೆಟ್ (Embraer-135BJ) ಭಾನುವಾರ ಮಧ್ಯಾಹ್ನ 1.30ಕ್ಕೆ ಮುಂಬೈನಿಂದ ಹೊರಟು ದುಬೈ ತಲುಪಿದೆ.
ದುಬೈನಲ್ಲಿ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಅನಿಲ್ ಅಂಬಾನಿ ಒಡೆತನಕ್ಕೆ ಸೇರಿದ್ದ ಪ್ರೈವೇಟ್ ಜೆಟ್ ನಲ್ಲಿ ಶ್ರೀದೇವಿ ಪಾರ್ಥೀವ ಶರೀರದ ಜೊತೆಗೆ ಕುಟುಂಬಸ್ಥರು ಭಾರತಕ್ಕೆ ಪಯಣ ಬೆಳೆಸಲಿದ್ದಾರೆ. ವರದಿಗಳ ಪ್ರಕಾರ, ಇಂದು ರಾತ್ರಿ ಶ್ರೀದೇವಿ ಮೃತದೇಹ ಭಾರತಕ್ಕೆ ಬರಲಿದೆ.


Click it and Unblock the Notifications











