''ಕಚ್ಚಾ ಬಾದಾಮ್'' ಡ್ಯಾನ್ಸರ್ ಅಂಜಲಿ ಈಗ ರಾಮಾಯಣದ ಸೀತೆ..!
ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರೂ ಗೆಸ್ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅಂಜಲಿ ಅರೋರಾ ಅತ್ಯುತ್ತಮ ಉದಾಹರಣೆ. ಹೌದು, ಹೆಚ್ಚೇನಿಲ್ಲ.. ಎರಡು ಮೂರು ವರ್ಷದ ಹಿಂದೆ ಕಚ್ಚಾ ಬಾದಾಮ್ ಎಂಬ ಹಾಡು ದೇಶದೆಲ್ಲೆಡೆ ಸದ್ದು ಮಾಡಿತ್ತು. ಬೀದಿ ಬದಿಯಲ್ಲಿ ಕಡಲೆಕಾಯಿ ಮಾರುವ ಪಶ್ಚಿಮ ಬಂಗಾಳದ ಭುಬನ್ ಭಡ್ಯಾಕರ್ ಕಡಲೆಕಾಯಿ ಮಾರಲು ಹೆಣೆದಿದ್ದ ಹಾಡು ಅದು.
ಆ ಹಾಡಿಂದ ಭುಬನ್ ಪಡೆದಿದ್ದೆಷ್ಟು .. ಕಳೆದುಕೊಂಡಿದ್ದೆಷ್ಟು .. ಅನ್ನುವುದು ಬೇರೆ ವಿಚಾರವಾದರೂ, ಭುಬನ್ ಬಾಯಿಂದ ಉದುರಿದ್ದ ಹಾಡನ್ನ ಹಾಡಿ, ಅದಕ್ಕೆ ರೀಲ್ಸ್ ಮಾಡಿ ಅಸಂಖ್ಯಾತ ಜನ ಬದುಕು ಕಟ್ಟಿಕೊಂಡರು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಪಾಪ್ಯುಲರ್ ಆದರು. ಆ ಪೈಕಿ ಅಂಜಲಿ ಅರೋರಾ ಕೂಡ ಒಬ್ಬರು.

ಕಚ್ಚಾ ಬಾದಾಮ್ ಹಾಡಿಗೆ ಟಿಕ್ ಟಾಕ್ ಮಾಡುವ ಮೂಲಕ ಸೊಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಆಗಿ ಹೊರ ಹೊಮ್ಮಿದ ಅಂಜಲಿ, 2022ರಲ್ಲಿ ಗೂಗಲ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲಾದ ಸೆಲೆಬ್ರಿಟಿಗಳ ಸ್ಥಾನದಲ್ಲಿ ಕೂಡ ಕಾಣಿಸಿಕೊಂಡರು. ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಕೂಡ ಪ್ರತ್ಯಕ್ಷವಾದರು. ಇಷ್ಟೇ ಯಾಕೆ..ಬಿಗ್ ಬಾಸ್ ಮನೆಯೊಳಗೆ ಕೂಡ ಹೋಗಿ ಬಂದರು. ನೋಡ.. ನೋಡುತ್ತಾ.. ಕೇವಲ 24ರ ಪ್ರಾಯದಲ್ಲಿಯೇ, ಒಂದಲ್ಲ..ಎರಡಲ್ಲ.. ನಾಲ್ಕು ಕೋಟಿ ಮನೆಯ ಒಡತಿಯಾದರು.
ಇಂಥ ಅಂಜಲಿ ಅರೋರಾ ಈಗ ರಾಮಾಯಣ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅದು ಸೀತೆಯ ಪಾತ್ರಕ್ಕೆ ಅನ್ನುವುದು ವಿಶೇಷ. ಹಾಗಂಥ ಅಂಜಲಿ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ರಾಮಾಯಣಕ್ಕೆ ನಾಯಕಿಯಾಗಿದ್ದಾರೆ ಎಂದು ಅಂದುಕೊಳ್ಳಬೇಡಿ. ಯಾಕೆಂದರೆ.. ಆ ರಾಮಾಯಣ ಬೇರೆ.. ಈ ರಾಮಾಯಣ ಬೇರೆ.

ಹೌದು, ಬಾಲಿವುಡ್‌ನಲ್ಲಿ ಕೇವಲ ರಣ್ಭೀರ್ ಕಪೂರ್-ಸಾಯಿ ಪಲ್ಲವಿ-ಯಶ್ ಅವರ ರಾಮಾಯಣ ಅಷ್ಟೇ ಅಲ್ಲ, ಇನ್ನೊಂದು ರಾಮಾಯಣ ಸಿದ್ಧವಾಗ್ತಿದೆ. ಅಭಿಷೇಕ್ ಸಿಂಗ್ ನಿರ್ದೇಶನ ಇರುವ ಚಿತ್ರಕ್ಕೆ ಪ್ರಕಾಶ್ ಮತ್ತು ಸಂಜಯ್ ನಿರ್ಮಾಪಕರು. ಇನ್ನೂ ಅಂಜಲಿ ಸೀತೆಯಾದರೆ, ರಾಮನ ಪಾತ್ರವನ್ನ ನಿರ್ವಹಿಸುವುದು ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ರಾವಣ ಯಾರು ಅನ್ನುವುದು ಗೊತ್ತಿಲ್ಲ. ಆದರೆ.. ಅಂಜಲಿ ಮಾತ್ರ ಸಿಕ್ಕ ಈ ಸುವರ್ಣ ಅವಕಾಶದಿಂದ ಆಕಾಶದಲ್ಲಿ ತೇಲುತ್ತಿದ್ದಾರೆ. ಆ ಸೀತಾ ಮಾತೆಯ ಆಶೀರ್ವಾದ, ಇಷ್ಟೊಂದು ನಾಯಕಿಯರು ಇರುವಾಗ ಸೀತೆಯ ಪಾತ್ರ ನನ್ನನ್ನೇ ಹುಡುಕಿಕೊಂಡು ಬಂದಿದೆ ಅಂದಿದ್ದಾರೆ.
ಇನ್ನೂ ಅಂಜಲಿ ಅರೋರಾ ಸೀತೆಯ ಪಾತ್ರವನ್ನ ನಿರ್ವಹಿಸಲಿದ್ದಾರೆ ಅನ್ನುವ ಸುದ್ದಿ ಹೊರ ಬಂದ ಕ್ಷಣದಿಂದ, ಒಂದು ವರ್ಗ ಸಾಮಾಜಿಕ ಜಾಲತಾಣದಲ್ಲಿ ಇವರನ್ನ ಟ್ರೋಲ್ ಮಾಡುತ್ತಿದೆ. ಕಂಡ ಕಂಡ ಹಾಡುಗಳಿಗೆ ರೀಲ್ಸ್ ಮಾಡುವ ಹುಡುಗಿಯನ್ನ ಸೀತಾ ದೇವಿಯ ಪಾತ್ರದಲ್ಲಿ ನೋಡುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೇಳುತ್ತಿದೆ. ಅಂಜಲಿ ಅರೋರಾ ಅವರನ್ನ ಟ್ರೋಲ್ ಕೂಡ ಮಾಡುತ್ತಿದೆ. ಆದರೆ ಅಂಜಲಿ ಇದ್ಯಾವುದಕ್ಕೂ ಸದ್ಯಕ್ಕೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಮಾತನಾಡುವವರು ಮಾತನಾಡಲಿ ಬಿಡಿ ಎಂದಿದ್ದಾರೆ

ಒಟ್ನಲ್ಲಿ ಸದ್ಯಕ್ಕೆ ಅಂಜಲಿ ಅರೋರಾ ಬಾಲಿವುಡ್ ನಲ್ಲಿ ನಿರ್ಮಾಣವಾಗಲಿರುವ ಮತ್ತೊಂದು ರಾಮಾಯಣದಲ್ಲಿ ಸೀತೆ ಪಾತ್ರವನ್ನ ನಿರ್ವಹಿಸಲು ಸನ್ನದ್ಧರಾಗಿದ್ದಾರೆ. ಈ ಸಿನಿಮಾ ಆರಂಭವಾಗುವುದು ಯಾವತ್ತು, ರಾಮನ ಪಾತ್ರಕ್ಕೆ ಬಣ್ಣ ಹಚ್ಚುವವರು ಯಾರು ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಬೇಕಿದೆ.


Click it and Unblock the Notifications











