ತಿನ್ನೋದು ಇಷ್ಟೇ ಇಷ್ಟು, ಅದಕ್ಕೆ ತನ್ನ ಅಡುಗೆ ಭಟ್ಟನಿಗೆ ಆ ಸ್ಟಾರ್ ದಿನಕ್ಕೆ 2 ಲಕ್ಷ ಸಂಬಳ ಕೊಡ್ತಾನೆ..!
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.
ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು.

ಹೀಗಾಗಿ ಕಷ್ಟಾನೋ-ಸುಖಾನೋ ಸ್ಟಾರ್‌ಗಳು ಮುಂದಿಡುವ ಬೇಡಿಕೆಯನ್ನೆಲ್ಲ ಪೂರೈಸಿ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಮುಂದಾಗುತ್ತಾರೆ. ಆದರೆ, ಇನ್ನೇನು ಸಿನಿಮಾ ಶುರು ಮಾಡಬೇಕು ಅನ್ನುವಷ್ಟರಲ್ಲಿ ಆಯಾ ಚಿತ್ರದ ನಾಯಕ-ನಾಯಕಿಯರು ಮತ್ತೊಮ್ಮೆ ಅಪಸ್ವರ ತೆಗೆಯುತ್ತಾರೆ. ತಮ್ಮ ಜೊತೆಗೆ ಒಂದು ಅರ್ಧ ಡಜನ್ ಅಸಿಸ್ಟೆಂಟುಗಳು, ಜೊತೆಗೊಬ್ಬ ಮ್ಯಾನೇಜರು.ತಮ್ಮನ್ನೂ ಸೇರಿಸಿ ತಮ್ಮ ಜೊತೆ ಬರುವವರಿಗೆಲ್ಲ ಸ್ಟಾರ್ ಹೊಟೇಲಿನಲ್ಲಿ ಸೂಟ್ ರೂಮು, ಬಂದು ಹೋಗಲು ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್, ವ್ಯವಸ್ಥೆ ಮಾಡುವಂತೆ ಫರ್ಮಾನು ಹೊರಡಿಸುತ್ತಾರೆ. ಸ್ಟಾರ್‌ಗಳ ಈ ಧಿಮಾಕಿನ ಬಗ್ಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ. ಉದಾಹರಣೆಯನ್ನೂ ನೀಡಿದ್ದಾರೆ
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್, ಸ್ಟಾರ್ ಹೀರೋ ಮತ್ತು ಹೀರೋಯಿನ್ ಅವರಿಡುವ ಡಿಮ್ಯಾಂಡ್‌ಗಳಿಂದನೇ ಚಿತ್ರದ ಖರ್ಚು-ವೆಚ್ಚ ಹೆಚ್ಚಾಗುತ್ತೆ ಎಂದಿದ್ದಾರೆ. ಉದಾಹರಣೆಗೆ ಅದೆಲ್ಲೋ ಕಾಡು ಮೇಡಲ್ಲಿ ನಾವು ಚಿತ್ರೀಕರಣ ಮಾಡುತ್ತಿರುತ್ತೇವೆ. ಆಗ ಚಿತ್ರದ ನಾಯಕಿ ತನಗೆ ಬರ್ಗರ್ ಬೇಕೆಂದರೆ, ಆಕೆಯ ಬರ್ಗರ್‌ನ ಹುಡುಕಿಕೊಂಡು ಹೋಗಬೇಕಾಗುತ್ತೆ ಎಂದಿದ್ದಾರೆ. ಹುಡುಕಿಕೊಂಡು ಬರುವಷ್ಟರಲ್ಲಿ ಸಮಯವೂ ಹಾಳು ಹಣವೂ ಹಾಳಾಗಿರುತ್ತೆ ಎಂದಿರುವ ಅನುರಾಗ್ ಕಶ್ಯಪ್ ಸ್ಟಾರ್ ಗಳ ಆಡಂಬರದ ಬದುಕು ಮತ್ತು ದುಡ್ಡನ್ನ ಹೇಗೆ ನೀರಿನಂತೆ ಚೆಲ್ತಾರೆ ಅನ್ನುವುದಕ್ಕೂ ಉದಾಹರಣೆಯನ್ನೂ ನೀಡಿದ್ದಾರೆ. ಸ್ಟಾರ್ ನಟನೊಬ್ಬ ತಮ್ಮ ಅಡುಗೆಯವನಿಗೆ ದಿನಕ್ಕೆ ಎರಡು ಲಕ್ಷ ರೂಪಾಯಿ ಸಂಬಳ ಕೊಡುತ್ತಾನೆ ಎಂದಿದ್ದಾರೆ.

ಆ ನಾಯಕನ ಹೆಸರನ್ನೇಳದ ಅನುರಾಗ್ ಕಶ್ಯಪ್, ತನ್ನ ಅಡುಗೆ ಭಟ್ಟನಿಗೆ ಸ್ಟಾರ್‌ವೊಬ್ಬ ದಿನದ ಲೆಕ್ಕದಲ್ಲಿ ಎರಡು ಲಕ್ಷ ಕೊಡ್ತಾರೆ. ಹಾಗೆ ಲೆಕ್ಕ ಹಾಕಿದರೆ ತಿಂಗಳಿಗೆ ಸುಮಾರು 60 ಲಕ್ಷ ರೂಪಾಯಿ. ಇದನ್ನು ನಾನು ಖುದ್ದಾಗಿ ನೋಡಿದ್ದೇನೆ ಎಂದಿದ್ದಾರೆ. ನಟನಿಗೆ ಏನೇನು ಬೇಕೋ ಅದನ್ನು ಆ ಶೆಫ್ ಮಾಡಿಕೊಡುತ್ತಾನೆ. ಇನ್ನೂ ಆ ಹೀರೋಗೆ ಕೆಲ ಆಹಾರ ಅಂದ್ರೆ ಅಲರ್ಜಿ ಹೀಗಾಗಿ ಆರೋಗ್ಯಕರ ಅಡುಗೆಯನ್ನಷ್ಟೇ ಮಾಡಿಕೊಡುವುದು ಆತನ ಕೆಲಸ. ಅದಕ್ಕಾಗಿ ಇಷ್ಟು ದೊಡ್ಡದ ಹಣ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಅನುರಾಗ್ ಕಶ್ಯಪ್, ಆ ಅಡುಗೆಯ ಕುರಿತು ಇನ್ನಷ್ಟು ಹೇಳಿರುವ ಅನುರಾಗ್ ಕಶ್ಯಪ್ ಅವರು, ಇಷ್ಟೆಲ್ಲಾ ಸಂಬಳ ಪಡೆಯುವ ಆ ಶೆಫ್ ಭಾರಿ ಆಹಾರವನ್ನೇನೂ ಮಾಡುವುದಿಲ್ಲ. ತರಕಾರಿ, ಬೀಜಗಳನ್ನು ಬೆರೆಸಿದ ವಿಚಿತ್ರವಾದ ಸ್ವಲ್ಪವೇ ಆಹಾರ ತಯಾರಿಸುತ್ತಾನೆ. ಅದನ್ನು ಮಾತ್ರ ಆ ಸ್ಟಾರ್ ತಿನ್ನುತ್ತಾನೆ. ನಾನು ಆ ಅಡುಗೆಯನ್ನು ಒಮ್ಮೆ ನೋಡಿ ಏನಿದು? ಮನುಷ್ಯರು ತಿನ್ನುವುದಾ ಇಲ್ಲ ಹಕ್ಕಿಗಳಿಗೆ ತಿನ್ನಿಸುವುದಾ ಎಂದು ಕೇಳಬೇಕು ಎನ್ನಿಸಿತ್ತು. ಇದನ್ನು ಮಾಡಲು ಈ ಪರಿ ಖರ್ಚು ಮಾಡಲಾಗುತ್ತದೆ. ವಿನಾ ಕಾರಣ, ಹಣದ ದುರುಪಯೋಗ ಆಗುತ್ತಿದೆ ಎಂದಿದ್ದಾರೆ.


Click it and Unblock the Notifications











