ಬ್ರಾಹ್ಮಣರ ಮೇಲೆ ನಾನು ಮೂತ್ರ ವಿಸರ್ಜನೆ ಮಾಡುತ್ತೇನೆ, ಏನೀಗ - ಅನುರಾಗ್ ಕಶ್ಯಪ್..!
ಅನುರಾಗ್ ಕಶ್ಯಪ್, ಬಾಲಿವುಡ್ ನ ಕ್ರಿಯೇಟಿವ್ ಡೈರೆಕ್ಟರ್. ಬಣ್ಣದ ಬದುಕಿನಾಚೆ, ರಾಜಕೀಯ ಪ್ರಪಂಚದಲ್ಲಿ ಕೆಲ ಕಾಲ ಸದ್ದು ಮಾಡಿ.. ಸುದ್ದಿಯಾಗಿ.. ಆ ನಂತರ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದ ಅನುರಾಗ್ ಕಶ್ಯಪ್ ಸದ್ಯಕ್ಕೆ ಪೊಲಿಟಿಕಲ್ ಮ್ಯಾಚ್ ನಲ್ಲಿ ರಿಟೈರ್ಡ್ ಹರ್ಟ್ ಆಗಿದ್ದಾರೆ. ನಿರ್ದೇಶನಕ್ಕೆ ಮತ್ತೆ ಮರಳಿದ್ದಾರೆ. ತೀರಾ ಇತ್ತೀಚೆಗಷ್ಟೇ ಮುಂಬೈ ಸಹವಾಸವೇ ಬೇಡ ಎಂದು ಬದುಕು ಕಲ್ಪಿಸಿದ ಮಾಯಾನಗರಿಗೆ ದೀರ್ಘದಂಡ ನಮಸ್ಕಾರ ಹಾಕಿ ಬೆಂಗಳೂರಿಗೆ ಬಂದಿದ್ದಾರೆ.
ಇಂಥಾ ಅನುರಾಗ್ ಕಶ್ಯಪ್ ಸದ್ಯ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಹೌದು, ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಕುರಿತು ಬಾಲಿವುಡ್‌ನಲ್ಲಿ ಚಿತ್ರವೊಂದು ನಿರ್ಮಾಣವಾಗಿದೆ. ಈ ಚಿತ್ರದ ಹೆಸರು ಫುಲೆ.

ಅನಂತ್ ಮಹಾದೇವನ್ ನಿರ್ದೇಶನದಲ್ಲಿ ಸಿದ್ಧವಾದ ಈ ಚಿತ್ರ ಬಿಡುಗಡೆಯ ಬಾಗಿಲಿನಲ್ಲಿ ಬಂದು ನಿಂತರೂ ಕೂಡ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ { ಸಿಬಿಎಫ್‌ಸಿ } ಬಿಡುಗಡೆ ಮಾಡಲು ಅರ್ಹತಾ ಪತ್ರವನ್ನು ನೀಡುತ್ತಿಲ್ಲ.
ಈ ಕುರಿತು ವಾದ ವಿವಾದ ನಡೆಯುತ್ತಿದೆ. ಫುಲೆ ಸಿನಿಮಾ ನಮ್ಮ ಸಮುದಾಯಕ್ಕೆ ಅವಮಾನ ಮಾಡುತ್ತೆ ಎಂದು ಬ್ರಾಹ್ಮಣ ಸಮುದಾಯ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ವರದಿ ಕೂಡ ಆಗಿದೆ. ಹೀಗಿರುವಾಗ ಸುಮ್ಮನೆ ಕೂರದ ಅನುರಾಗ್ ಕಶ್ಯಪ್ ಬ್ರಾಹ್ಮಣ ಸಮುದಾಯವನ್ನು ಕೆಣಕಿದ್ದಾರೆ. ಬ್ರಾಹ್ಮಣರ ಮೇಲೆ ಉಚ್ಚೆ ಉಯ್ಯುತ್ತೇನೆ ಎಂದು ಹೇಳಿದ್ದಾರೆ.
ಹೌದು, ಅಸಲಿಗೆ ಫುಲೆ ಚಿತ್ರದ ಬಿಡುಗಡೆಯ ವಿಚಾರ ವಿವಾದದ ಸ್ವರೂಪ ಪಡೆದ ನಂತರ ಅನುರಾಗ್ ಕಶ್ಯಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿವಾದದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಧಡಕ್ 2 ಚಿತ್ರ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿದ್ದಾರೆ ಎಂದು CBFC ಹೇಳಿದೆ. ಅದನ್ನೇ ಆಧಾರವಾಗಿಟ್ಟುಕೊಂಡು 'ಯುಕೆ'ಯಿಂದ ಆಸ್ಕರ್ ಅಂಗಳಕ್ಕೆ ಹೋಗಿದ್ದ ʼಸಂತೋಷ್ʼ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆಗೆ ಅವಕಾಶವನ್ನು ನೀಡಲಿಲ್ಲ ಎಂದು ಹೇಳಿದ್ದರು.
ಮುಂದುವರೆದು ತಮ್ಮ ಮನದ ಮಾತು ಹಂಚಿಕೊಂಡಿದ್ದ ಅನುರಾಗ್ ಕಶ್ಯಪ್, ಆದರೆ ಈಗ ಬ್ರಾಹ್ಮಣರಿಗೆ 'ಫುಲೆ'ಯಿಂದಾಗಿ ಸಮಸ್ಯೆ ಆಗುತ್ತಿದೆ, ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಎಲ್ಲಿಯ ಬ್ರಾಹ್ಮಣ್ಯ ? ನೀವು ಯಾರು? ಜಾತಿ ವ್ಯವಸ್ಥೆಯೇ ಇಲ್ಲದಿದ್ದರೆ ಚಿತ್ರದ ಬಗ್ಗೆ ಬ್ರಾಹ್ಮಣರು ಯಾಕೆ ಆಕ್ರೋಶಗೊಂಡಿದ್ದಾರೆ ಎಂದು ಪ್ರಶ್ನೆಯನ್ನು ಕೇಳಿದ್ದರು. ಜಾತಿ ವ್ಯವಸ್ಥೆ ಈಗ ಅಸ್ತಿತ್ವದಲ್ಲಿಯಾ ಇಲ್ಲವಾ ಎಂದು ಕೂಡ ಕೇಳಿದ್ದರು.
ಅನುರಾಗ್ ಕಶ್ಯಪ್ ಅವರ ಈ ಫೋಸ್ಟ್‌ನಿಂದ ಸಹಜವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಲು ಶುರುವಾಗಿತ್ತು. ಬ್ರಾಹ್ಮಣ ಸಮುದಾಯವನ್ನು ಕೂಡ ಕೆರಳಿಸಿತ್ತು. ಹೀಗಾಗಿಯೇ ಅನುರಾಗ್ ಕಶ್ಯಪ್ ಇನ್‌ಸ್ಟಾಗ್ರಾಮ್‌ಗೆ ನುಗ್ಗಿದ್ದ ಅನೇಕರು ಅನುರಾಗ್ ಕಶ್ಯಪ್ ಮೇಲೆ ದಾಳಿಯನ್ನು ಮಾಡಲು ಶುರು ಮಾಡಿದ್ದರು. ಅನುರಾಗ್ ಕಶ್ಯಪ್ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.
ತಮ್ಮ ಮೇಲೆ ಏಕಾಏಕಿ ನಡೆದ ಈ ಸೈಬರ್ ದಾಳಿಯಿಂದ ಅನುರಾಗ್ ಕಶ್ಯಪ್ ಬೆದರಿದರಾ ? ವಿಚಲಿತಗೊಂಡರಾ ? ಗೊತ್ತಿಲ್ಲ. ಆದರೆ.. ತಮಗೆ ಬಂದ ಕಾಮೆಂಟ್‌ಗಳಿಗೆ ರಿಪ್ಲೈ ಮಾಡುವ ಭರದಲ್ಲಿ ಅನುರಾಗ್ ಕಶ್ಯಪ್ ಸದ್ಯ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ವ್ಯಕ್ತಿಯೊಬ್ಬ ಮಾಡಿದ್ದ ಕಾಮೆಂಟ್‌ಗೆ ಬ್ರಾಹ್ಮಣರ ಮೇಲೆ ನಾನು ಮೂತ್ರ ವಿಸರ್ಜನೆ ಮಾಡುತ್ತೇನೆ, ನಿಮಗೆ ಏನಾದರೂ ಸಮಸ್ಯೆ ಇದೆಯಾ ಎಂದು ಉತ್ತರಿಸಿದ್ದಾರೆ.
ಅನುರಾಗ್ ಕಶ್ಯಪ್ ಅವರ ಈ ಮಾತುಗಳಿಂದ ಈಗ ಬ್ರಾಹ್ಮಣ ಸಮುದಾಯ ಸದ್ಯ ಕೆರಳಿ ಕೆಂಡವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನುರಾಗ್ ಕಶ್ಯಪ್ ವಿರುದ್ಧ ಸಮರವನ್ನು ಸಾರಿದೆ. ಸದ್ಯ ತನ್ನ ಸುತ್ತ ಮುತ್ತ ಹೊತ್ತಿಕೊಂಡಿರುವ ಈ ಆಕ್ರೋಶದ ಜ್ವಾಲೆಯ ಕುರಿತು ಅನುರಾಗ್ ಕಶ್ಯಪ್ ಮಾತನಾಡಿಲ್ಲ. ಮುಂದೆ ಈ ವಿವಾದ ಎಲ್ಲಿ ಹೋಗಿ ತಲುಪುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.



Click it and Unblock the Notifications










