10 ನಿಮಿಷಕ್ಕೆ 01 ಲಕ್ಷ ; ಹಣ ನೀಡಿ ಭೇಟಿಯಾಗಿ ಎಂದ ನಿರ್ದೇಶಕ..!
ಅನುರಾಗ್ ಕಶ್ಯಪ್, ಬಾಲಿವುಡ್ ನ ಕ್ರಿಯೇಟಿವ್ ಡೈರೆಕ್ಟರ್. ಬಣ್ಣದ ಬದುಕಿನಾಚೆ, ರಾಜಕೀಯ ಪ್ರಪಂಚದಲ್ಲಿ ಕೆಲ ಕಾಲ ಸದ್ದು ಮಾಡಿ.. ಸುದ್ದಿಯಾಗಿ.. ಆ ನಂತರ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದ ಅನುರಾಗ್ ಕಶ್ಯಪ್ ಸದ್ಯಕ್ಕೆ ಪೊಲಿಟಿಕಲ್ ಮ್ಯಾಚ್ ನಲ್ಲಿ ರಿಟೈರ್ಡ್ ಹರ್ಟ್ ಆಗಿದ್ದಾರೆ. ಬಾಲಿವುಡ್ ಗೆ ಮರಳಿದ್ದಾರೆ. ಇಂಥ ಅನುರಾಗ್ ಕಶ್ಯಪ್ ಇನ್ಮುಂದೆ ಸಿಕ್ಕ ಸಿಕ್ಕವರಿಗೆಲ್ಲ ಸಿಗಲ್ಲ. ಗಂಟೆಗಟ್ಟಲೆ ಕುಳಿತು ಹರಟೆ ಹೊಡೆಯುವುದಿಲ್ಲ. ಒಂದು ವೇಳೆ ಅನುರಾಗ್ ಕಶ್ಯಪ್ ಅವರನ್ನ ಭೇಟಿಯಾಗಬೇಕು, ಮಾತನಾಡಬೇಕು, ಸಿನಿಮಾದ ಆಳ-ಅಗಲದ ಕುರಿತು ಚರ್ಚೆಯನ್ನ ಮಾಡಬೇಕು ಎಂದು ಯಾರಿಗಾದರೂ ಅನಿಸಿದರೆ ಅವರು ಕೈಯಲ್ಲಿ ದುಡ್ಡಿನ ಕಂತೆ ಹಿಡಿದುಕೊಂಡು ಹೋಗಬೇಕು. ಇಲ್ಲದೇ ಇದ್ದರೆ ಬ್ಯಾಂಕ್ ನಲ್ಲಾದರೂ ದುಡ್ಡು ಇಟ್ಟಿರಬೇಕು.
ಹೌದು, ಅಸಲಿಗೆ ಕನಸೆಂಬ ಕುದುರೆಯನೇರಿ ಬಣ್ಣದ ಲೋಕಕ್ಕೆ ಅನೇಕರು ಬರ್ತಾರೆ. ಆ ಪೈಕಿ ಕೆಲವರಿಗೆ ಹಣ ಮಾಡುವ ಆಸೆ, ಇನ್ನೂ ಕೆಲವರಿಗೆ ಹೆಸರು ಸಂಪಾದಿಸುವ ಆಸೆ. ಇನ್ನೂ ಇದರ ನಡುವೆ ಅಡ್ಡದಾರಿಯಲ್ಲಿ ನಡೆದು, ರಾತ್ರೋ ರಾತ್ರಿ ಸ್ಟಾರ್ ಆಗಬೇಕೆಂದು ಅನೇಕರು ಪ್ರಯತ್ನವನ್ನ ಕೂಡ ಪಡ್ತಾರೆ. ಹೀಗೆ ಇಲ್ಲಿ ಬರುವ ಬಹುತೇಕರು ಮೊದಲು ಹೋಗುವುದು ಅನುರಾಗ್ ಕಶ್ಯಪ್ ಅವರ ಬಳಿಯೇ. ಯಾಕೆಂದರೆ ಅನುರಾಗ್ ಗೆ ಹೊಸಬರ ಜೊತೆ ಕೆಲಸ ಮಾಡಿ ರೂಢಿ. ಆದರೆ ಈಗೀಗ ಅನುರಾಗ್ ಕಶ್ಯಪ್ ಗೆ ಈ ಹೊಸಬರ ಸಹವಾಸದಿಂದ ಸಿಕ್ಕಾಪಟ್ಟೆ ಕಿರಿಕಿರಿಯಾಗ್ತಿದೆ. ಈ ಕಾರಣಕ್ಕೆ ತಮ್ಮ ದರವನ್ನ ತಾವೇ ಫಿಕ್ಸ್ ಮಾಡಿಕೊಂಡಿದ್ದಾರೆ ಅನುರಾಗ್ ಕಶ್ಯಪ್.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ದರ ಪಟ್ಟಿಯನ್ನ ಬಿಡುಗಡೆ ಮಾಡಿರುವ ಅನುರಾಗ್ ಕಶ್ಯಪ್, ನಾನು ಹಲವು ಹೊಸಬರಿಗೆ ಇಲ್ಲಿವರೆಗೆ ಅವಕಾಶ ಕೊಟ್ಟೆ, ಸ್ಟಾರ್ ನಟರಾಗುವಂತೆ ಮಾಡಿದೆ. ಆದರೆ ಅದರಲ್ಲಿ ಅನೇಕರು ಕಳಪೆ ಗುಣಮಟ್ಟದ, ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗೆ ಸೆಟಲ್ ಆಗಿಬಿಟ್ಟಿದ್ದಾರೆ. ಇಂಥಹವರಿಗಾಗಿ ಸಾಕಷ್ಟು ಸಮಯವನ್ನು ನಾನು ಹಾಳು ಮಾಡಿದ್ದೇನೆ. ಹಾಗಾಗಿ ಇನ್ನು ಮುಂದೆ ಯಾರೇ ನನ್ನನ್ನು ಭೇಟಿ ಆಗಬೇಕೆಂದರೂ ಹಣ ನೀಡಬೇಕು ಎಂದಿದ್ದಾರೆ.
10-15 ನಿಮಿಷಗಳ ಕಾಲ ನನ್ನನ್ನು ಭೇಟಿಯಾಗಿ ಮಾತನಾಡಲು 1 ಲಕ್ಷ ರೂಪಾಯಿ ಕೊಡಬೇಕು. ಅರ್ಧ ಗಂಟೆ ಮಾತನಾಡಲು ಎರಡು ಲಕ್ಷ ರೂಪಾಯಿ ಕೊಡಬೇಕು. ಒಂದು ಗಂಟೆ ನನ್ನೊಂದಿಗೆ ಮಾತನಾಡಲು ಐದು ಲಕ್ಷ ರೂಪಾಯಿ ಹಣ ಕೊಡಬೇಕು. ಜನರನ್ನು ಭೇಟಿಯಾಗಿ ಅವರಿಂದ ಸಾಕಷ್ಟು ಸಮಯವನ್ನು ನಾನು ವ್ಯರ್ಥ ಮಾಡಿಕೊಂಡಿದ್ದೇನೆ. ನನ್ನ ಭೇಟಿಗೆ ಇಷ್ಟು ಹಣ ವ್ಯಯಿಸುವ ಶಕ್ತಿ ನಿಮ್ಮಲ್ಲಿದ್ದರೆ ಮಾತ್ರವೇ ನನಗೆ ಕರೆ ಮಾಡಿ, ಭೇಟಿ ಮಾಡಿ, ಇಲ್ಲವಾದರೆ ಸುಮ್ಮನೆ ನನ್ನಿಂದ ದೂರವಿರಿ ಎಂದಿರುವ ಅನುರಾಗ್ ಕಶ್ಯಪ್, ಭೇಟಿ ಮಾಡುವುದು ಮಾತ್ರ ಅಲ್ಲ ನನಗೆ ಮೆಸೇಜ್ ಮಾಡುವುದು, ಇನ್ಸ್ಟಾಗ್ರಾಂನಲ್ಲಿ ಖಾಸಗಿ ಸಂದೇಶ ಕಳಿಸುವ ಕೆಲಸವನ್ನೆಲ್ಲ ಮಾಡಬೇಡಿ ಎಂದು ಕೆಂಡ ಕಾರಿದ್ದಾರೆ.
ಅನುರಾಗ್ ಕಶ್ಯಪ್ ಅವರ ಈ ರೇಟ್ ಕಾರ್ಡ್ ಬಗ್ಗೆ ಈಗ ಬಾಲಿವುಡ್ ನಲ್ಲಿ ಚರ್ಚೆಯಾಗ್ತಿದೆ. ಕೆಲವರು ಸೆಲೆಬ್ರಿಟಿಗಳ ಫೇವರೆಟ್ ವ್ಯಕ್ತಿ ಓರಿ ಜೊತೆ ಅನುರಾಗ್ ಕಶ್ಯಪ್ ಅವರನ್ನ ಹೋಲಿಸುತ್ತಿದ್ದಾರೆ, ಇನ್ನೂ ಕೆಲವರು ಅನುರಾಗ್ ಅವರ ಅಭಿಪ್ರಾಯದಲ್ಲಿ ಯಾವುದೇ ತಪ್ಪಿಲ್ಲ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











