ತೆರೆಯ ಮೇಲೆ ಕ್ರಿಕೆಟ್ ಆಡಲಿದ್ದಾರೆ ವಿರಾಟ್ ಕೊಹ್ಲಿ ಪತ್ನಿ!
ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟರ್ ಪತ್ನಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಅತ್ಯುತ್ತಮ ನಟಿಯಲ್ಲೊಬ್ಬರು. ಆದರೆ ಈಗ ಅನುಷ್ಕಾ ಶರ್ಮಾ ಸಹ ಕ್ರಿಕೆಟರ್ ಆಗಲು ಹೊರಟಿದ್ದಾರೆ. ಆದರೆ ತೆರೆಯ ಮೇಲೆ.
ಮಗುವಾದ ಬಳಿಕ ಕೆಲಸಕ್ಕೆ ಮರಳಿರುವ ಅನುಷ್ಕಾ ಶರ್ಮಾ ಹೊಸ ಸಿನಿಮಾ ಘೋಷಿಸಿದ್ದು, ಹೊಸ ಸಿನಿಮಾದಲ್ಲಿ ಜನಪ್ರಿಯ ಕ್ರಿಕೆಟರ್ ಪಾತ್ರದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಜನಪ್ರಿಯ ಬೌಲರ್ ಜೂಲನ್ ಗೋಸ್ವಾಮಿಯ ಜೀವನ ಸಿನಿಮಾ ಆಗುತ್ತಿದ್ದು, ಜೂಲನ್ ಗೋಸ್ವಾಮಿಯ ಪಾತ್ರದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಸಿನಿಮಾಕ್ಕೆ 'ಚಾಕ್ಕಡ್ ಎಕ್ಸ್‌ಪ್ರೆಸ್' ಎಂದು ಹೆಸರಿಡಲಾಗಿದೆ.

ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಭಾರತ ಕ್ರಿಕೆಟ್ ತಂಡದ ಟೀ-ಶರ್ಟ್‌ಗಳ ಮೇಲೆ ಮಹಿಳಾ ಕ್ರಿಕೆಟರ್‌ಗಳು ತಮ್ಮ ಹೆಸರು ಬರೆದುಕೊಂಡು ಆಡಲು ಇಳಿವ ಟೀಸರ್ ಗಮನ ಸೆಳೆಯುತ್ತಿದೆ. ಅನುಷ್ಕಾ ಶರ್ಮಾರ ಬೆಂಗಾಳಿ ಪ್ರಭಾವದ ಹಿಂದಿ ಸಂಭಾಷಣೆ ಸಹ ಗಮನ ಸೆಳೆದಿದೆ. ಸಿನಿಮಾ ನೆಟ್‌ಫ್ಲಿಕ್ಸ್ ಒರಿಜಿನಲ್ ಆಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ಬಿಡುಗಡೆ ಕಾಣಲಿದೆ.
ಅನುಷ್ಕಾ ಶರ್ಮಾರ ಹೊಸ ಸಿನಿಮಾದ ಟೀಸರ್ ಅನ್ನು ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಕೊಂಡಾಡಿದ್ದಾರೆ. ನಟಿ ತಾಪ್ಸಿ ಪನ್ನು ಅಂತೂ ಅನುಷ್ಕಾರ ಹೊಸ ಪ್ರಯತ್ನವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ತಾಪ್ಸಿ ಪನ್ನು 'ಶಭಾಷ್ ಮಿತು' ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಸಿನಿಮಾದಲ್ಲಿ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ ಪಾತ್ರದಲ್ಲಿ ತಾಪ್ಸಿ ನಟಿಸುತ್ತಿದ್ದಾರೆ. 'ಮಿಥಾಲಿಯಿಂದ ಜೂಲನ್‌ಗೆ ಶುಭಾಶಯ' ಎಂದಿರುವ ತಾಪ್ಸಿ, 'ಹೀಗೆ ಮುಂದುವರಿ ಸೋದರಿ' ಎಂದು ಉತ್ಸಾಹ ತುಂಬಿದ್ದಾರೆ.
ಆದರೆ ಹಲವು ನೆಟ್ಟಿಗರು ಜೂಲನ್ ಗೋಸ್ವಾಮಿ ಪಾತ್ರಕ್ಕೆ ಅನುಷ್ಕಾ ಶರ್ಮಾ ಅನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುಷ್ಕಾ ಶರ್ಮಾಗೂ ಜೂಲನ್ ಗೋಸ್ವಾಮಿಗೂ ಸಾಮ್ಯತೆ ಇಲ್ಲ. ಅಲ್ಲದೆ ಅನುಷ್ಕಾ ಶರ್ಮಾ ಜೂಲನ್ ಗೋಸ್ವಾಮಿ ಪಾತ್ರಕ್ಕೆ ಪೂರ್ಣ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನುಷ್ಕಾ ಶರ್ಮಾ, ಜೂಲನ್ ಗೋಸ್ವಾಮಿಯ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಹಲವು ಮೀಮ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇತ್ತೀಚೆಗೆ ಕ್ರೀಡಾಪಟುಗಳ ಜೀವನವನ್ನು ಸಿನಿಮಾ ಮಾಡುವ ಪರಿಪಾಠ ಹೆಚ್ಚಾಗುತ್ತಿದೆ. ಮಿಲ್ಕಾ ಸಿಂಗ್‌ರ ಜೀವನ ಕತೆಯನ್ನು 'ಭಾಗ್ ಮಿಲ್ಕಾ ಭಾಗ್' ಮಾಡುವುದರ ಮೂಲಕ ಆರಂಭವಾದ ಟ್ರೆಂಡ್, 'ಎಂಎಸ್ ಧೋನಿ' ಯಶಸ್ಸಿನಿಂದ ಇನ್ನಷ್ಟು ಹೆಚ್ಚಾಯಿತು, ಅಜರ್ ಜೀವನವೂ ತೆರೆಗೆ ಬಂದಿತು. ಸಚಿನ್ ಸಹ ತಮ್ಮದೇ ಜೀವನ ಡಾಕ್ಯುಮೆಂಟರಿ ಮಾದರಿಯ ಸಿನಿಮಾ ಬಿಡುಗಡೆ ಮಾಡಿದರು. ಬಳಿಕ ಇದೀಗ 1983ರ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಕತೆಯನ್ನು ಹೊಂದಿರುವ '83' ಸಿನಿಮಾ ಬಿಡುಗಡೆ ಆಗಿದೆ.


Click it and Unblock the Notifications











