RCB ಫ್ರಾಂಚೈಸಿ ಮೇಲೆ ಕಣ್ಣಾಕ್ಕಿದ ಅನುಷ್ಕಾ, ರಣ್‌ಬೀರ್; ಅಭಿಮಾನಿಗಳಿಗೆ ಗುಡ್‌ನ್ಯೂಸ್?
ಕ್ರಿಕೆಟ್ ಹಾಗೂ ಸಿನಿಮಾರಂಗಕ್ಕೆ ಅವಿನಾಭಾವ ಸಂಬಂಧ ಇದೆ. ಕ್ರಿಕೆಟಿಗರು ಬಣ್ಣ ಹಚ್ಚುವುದು, ನಟಿಯರನ್ನು ಮದುವೆ ಆಗಿರುವುದು ಒಂದ್ಕಡೆ. ಸಿನಿಮಾ ನಟರು ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದು ಇದೆ. ಇನ್ನು ನಟಿ ಅನುಷ್ಕಾ ಶರ್ಮಾ ಅವರನ್ನು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೈಹಿಡಿದಿದ್ದಾರೆ. ಇದೀಗ ಆರ್‌ಸಿಬಿ ಫ್ರಾಂಚೈಸಿ ಭಾಗವಾಗಲು ಅನುಷ್ಕಾ ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಿನ್ನದ ಮೊಟ್ಟೆ ಇಡುವ ಕೋಳಿ. ಕಳೆದ ವರ್ಷ ತಂಡ ಟ್ರೋಫಿ ಎತ್ತಿ ಹಿಡಿದು ದಾಖಲೆ ಬರೆದಿತ್ತು. ಇದೆಲ್ಲದರ ನಡುವೆ RCB ಫ್ರಾಂಚೈಸಿಯನ್ನು ಮಾರಾಟ ಮಾಡುವ ಬಗ್ಗೆ ಕೂಡ ಚರ್ಚೆ ನಡೀತಿದೆ. ಖ್ಯಾತ ಉದ್ಯಮಿಗಳು ಹಣ ಹೂಡಿಕೆ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಈ ರೇಸ್‌ನಲ್ಲಿದೆ ಎನ್ನಲಾಗಿತ್ತು. ಇದೀಗ ಅನುಷ್ಕಾ ಶರ್ಮಾ ಕೂಡ ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

ವಿರಾಟ್ ಪತ್ನಿ ಅನುಷ್ಕಾ ಕ್ರಿಕೆಟ್ ಮೈದಾನದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಪತಿಯನ್ನು ಹುರಿದುಂಬಿಸಲು ಗ್ಯಾಲರಿಯಲ್ಲಿ ಬಂದು ಕೂರುತ್ತಾರೆ. ಐಪಿಎಲ್ ಟೂರ್ನಿ ಸಮಯದಲ್ಲಿ ಕೂಡ ಅನುಷ್ಕಾ ಗಮನ ಸೆಳೆಯುತ್ತಾ ಬರ್ತಿದ್ದಾರೆ. ಇದೀಗ ಪತಿ ವಿರಾಟ್ ಆಡುತ್ತಿರುವ RCB ಫ್ರಾಂಚೈಸಿ ಶೇರ್‌ಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಬಾಲಿವುಡ್ ನಟ ರಣ್‌ಬೀರ್ ಕಪೂರ್ ಕೂಡ ಕೈಜೋಡಿಸುವ ಸಾಧ್ಯತೆಯಿದೆ ಎನ್ನುವ ಚರ್ಚೆ ನಡೀತಿದೆ.
ಈಗಾಗಲೇ ನಟ ಶಾರುಖ್ ಖಾನ್ ಹಾಗೂ ನಟಿ ಜ್ಯೂಹಿ ಚಾವ್ಲಾ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಇನ್ನು ನಟಿ ಪ್ರೀತಿ ಜಿಂಟಾ ಪಂಜಾಬ್ ತಂಡದ ಮಾಲಕಿಯಾಗಿದ್ದಾರೆ. ತಮಿಳು ನಿರ್ಮಾಪಕ ಕಲೈನಿಧಿ ಮಾರನ್ ಪುತ್ರಿ ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಯಾಗಿರುವುದು ಗೊತ್ತೇಯಿದೆ. ಇದೀಗ ರಣ್‌ಬೀರ್ ಹಾಗೂ ಅನುಷ್ಕಾ ಶರ್ಮಾ ಇದೇ ಲಿಸ್ಟ್ ಸೇರುವ ಬಗ್ಗೆ ಊಹಾಪೋಹ ಶುರುವಾಗಿದೆ. ಅದರಲ್ಲೂ ಆರ್‌ಸಿಬಿ ತಂಡದ ಷೇರುಗಳನ್ನು ಕೊಂಡುಕೊಳ್ಳುತ್ತಾರೆ ಎನ್ನುವುದು ಆಸಕ್ತಿ ಮೂಡಿಸಿದೆ.

ರಣ್‌ಬೀರ್ ಹಾಗೂ ಅನುಷ್ಕಾ ಆತ್ಮೀಯ ಸ್ನೇಹಿತರು. ಇದೀಗ 2,000 ಕೋಟಿ ರೂ. ಆರ್‌ಸಿಬಿ ಫ್ರಾಂಚೈಸಿಗೆ ಅವರಿಬ್ಬರು ಸೇರಿಕೊಳ್ಳಬಹುದು ಎಂದು ಹೇಳಲಾಗ್ತಿದೆ. ಫ್ರಾಂಚೈಸಿಯ 3%ರಷ್ಟು ಷೇರುಗಳನ್ನು ಕೊಂಡುಕೊಳ್ಳಲು ಅನುಷ್ಕಾ ಮಾತುಕತೆ ನಡೆಸುತ್ತಿದ್ದು ಅದಕ್ಕಾಗಿ 400 ಕೋಟಿ ರೂ. ಹೂಡಿಕೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ನಟ ರಣ್‌ಬೀರ್ ಕಪೂರ್ ಈಗಾಗಲೇ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಮುಂಬೈ ಸಿಟಿ ಎಫ್‌ಸಿಯ ಸಹ-ಮಾಲೀಕರಾಗಿದ್ದಾರೆ. ಇದರ ಜೊತೆಗೆ ಆರ್‌ಸಿಬಿಯಲ್ಲಿ ಶೇಕಡಾ 2 ರಷ್ಟು ಷೇರುಗಳನ್ನು ಖರೀದಿಸಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ 300ರಿಂದ 350 ಕೋಟಿ ರೂ. ಹೂಡಿಕೆ ಮಾಡಬಹುದು ಎಂದು ಗುಲ್ಲಾಗಿದೆ. ಅದೇ ನಿಜವಾದರೆ ಆರ್‌ಸಿಬಿ ತಂಡಕ್ಕೆ ಮತ್ತಷ್ಟು ತಾರಾ ಮೆರಗು ಸಿಗಲಿದೆ.
ಒಂದ್ಕಾಲದಲ್ಲಿ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಪೋಷಕ ಕಂಪನಿಯಾದ ಡಿಯಾಜಿಯೊ, ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಅದರ ಬೆನ್ನಲ್ಲೇ ರಣ್‌ಬೀರ್ ಹಾಗೂ ಅನುಷ್ಕಾ ಪಾಲುದಾರರಾಗುತ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.
ರಣ್‌ಬೀರ್ ಕಪೂರ್ ಸದ್ಯ 'ರಾಮಾಯಣ' ಸರಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಲವ್ & ವಾರ್' ಎಂಬ ಮತ್ತೊಂದು ಸಿನಿಮಾ ಕೂಡ ಕೈಯಲ್ಲಿದೆ. ಮದುವೆ ಬಳಿಕ ಅನುಷ್ಕಾ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಕಳೆದ ವರ್ಷ ಬಂದಿದ್ದ 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಆಕೆ ನಟಿಸಿದ್ದು ಗೊತ್ತೇಯಿದೆ.


Click it and Unblock the Notifications











