ಅನುಷ್ಕಾ ಶರ್ಮಾ ಗಾಡ್ ಫಾದರ್, ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ನಿಧನ
ಪ್ರಖ್ಯಾತ ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ (59) ಇಹಲೋಕ ತ್ಯಜಿಸಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ನಿನ್ನೆ (ಫೆಬ್ರವರಿ 12) ವೆಂಡೆಲ್ ರಾಡ್ರಿಕ್ಸ್ ವಿಧಿವಶರಾಗಿದ್ದಾರೆ.
ವೆಂಡೆಲ್ ರಾಡ್ರಿಕ್ಸ್ ನಿಧನದ ಸುದ್ದಿ ಬಾಲಿವುಡ್ ತಾರೆಯರಿಗೆ ಆಘಾತ ಉಂಟು ಮಾಡಿದೆ. ಮಲೈಕಾ ಅರೋರಾ, ಅರ್ಜುನ್ ರಾಂಪಾಲ್ ಸೇರಿದಂತೆ ಹಲವು ನಟ-ನಟಿಯರು ವೆಂಡೆಲ್ ರಾಡ್ರಿಕ್ಸ್ ನಿಧನಕ್ಕೆ ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ.

ಕನಸು ಈಡೇರುವ ಮುನ್ನ ಕಣ್ಮರೆ
1989 ರಲ್ಲಿ ವೆಂಡೆಲ್ ರಾಡ್ರಿಕ್ಸ್ ತಮ್ಮದೇ ಆದ ಫ್ಯಾಶನ್ ಬ್ರ್ಯಾಂಡ್ ಲಾಂಚ್ ಮಾಡಿದ್ದರು. 2016 ರಲ್ಲಿ ನಿವೃತ್ತಿ ಘೋಷಿಸಿದ ವೆಂಡೆಲ್ ರಾಡ್ರಿಕ್ಸ್ ಗೆ ಗೋವಾದಲ್ಲಿ ಕಾಸ್ಟ್ಯೂಮ್ ಮ್ಯೂಸಿಯಂ ನಿರ್ಮಿಸಬೇಕೆಂಬ ಕನಸಿತ್ತು. ಗೋವಾ ಕಾಸ್ಟ್ಯೂಮ್ ಮತ್ತು ಗೋವಾ ಫ್ಯಾಶನ್ ಕುರಿತಾದ ಮ್ಯೂಸಿಯಂ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿತ್ತು. ಅದು ಪೂರ್ಣಗೊಳ್ಳುವ ಮುನ್ನವೇ ವೆಂಡೆಲ್ ರಾಡ್ರಿಕ್ಸ್ ನಿಧನ ಹೊಂದಿದ್ದಾರೆ.

ಅನುಷ್ಕಾ ಶರ್ಮಾ ಗೆ ಗಾಡ್ ಫಾದರ್
ಅಂದ್ಹಾಗೆ, ಬಾಲಿವುಡ್ ನ ಪ್ರಖ್ಯಾತ ನಟಿ ಅನುಷ್ಕಾ ಶರ್ಮಾಗೆ ಗಾಡ್ ಫಾದರ್ ಆಗಿದ್ದವರು ಇದೇ ವೆಂಡೆಲ್ ರಾಡ್ರಿಕ್ಸ್. ಮಾಡೆಲಿಂಗ್ ಜಗತ್ತಿನಲ್ಲಿ ಅನುಷ್ಕಾ ಶರ್ಮಾಗೆ ದೊಡ್ಡ ಬ್ರೇಕ್ ನೀಡಿದವರು ವೆಂಡೆಲ್ ರಾಡ್ರಿಕ್ಸ್. ಬೆಂಗಳೂರಿನ ಮಳಿಗೆಯೊಂದರಲ್ಲಿ ಅನುಷ್ಕಾ ಶರ್ಮಾ ರನ್ನ ಕಂಡ ವೆಂಡೆಲ್ ರಾಡ್ರಿಕ್ಸ್ ಮಾಡೆಲಿಂಗ್ ಮಾಡುವಂತೆ ಸಲಹೆ ನೀಡಿದ್ದರು. ಅದಾದ ಬಳಿಕ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಅನುಷ್ಕಾ ಶರ್ಮಾ ಇಂದು ಬಾಲಿವುಡ್ ನಲ್ಲಿ ಜನಪ್ರಿಯ ನಟಿ.

ಪುಸ್ತಕ ಬರೆದಿದ್ದರು
ವೆಂಡೆಲ್ ರಾಡ್ರಿಕ್ಸ್ ಬರಹಗಾರ ಕೂಡ ಹೌದು. ಗೋವಾ ಫ್ಯಾಶನ್ ಕುರಿತು 2012 ರಲ್ಲಿ 'Moda Goa: History and Style' ಎಂಬ ಪುಸ್ತಕ ಬರೆದಿದ್ದರು. 'ದಿ ಗ್ರೀಮ್ ರೂಮ್' ಪುಸ್ತಕದ ಮೂಲಕ ತಮ್ಮ ಆತ್ಮಚರಿತ್ರೆಯನ್ನ ವೆಂಡೆಲ್ ರಾಡ್ರಿಕ್ಸ್ ಹೊರತಂದಿದ್ದರು.

ಪದ್ಮಶ್ರೀ ಪುರಸ್ಕೃತ
ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹಲವು ಬಾರಿ ವೆಂಡೆಲ್ ರಾಡ್ರಿಕ್ಸ್ ಹೋರಾಟ ನಡೆಸಿದ್ದರು. ವೆಂಡೆಲ್ ರಾಡ್ರಿಕ್ಸ್ ಗೆ 2014 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 62ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭಕ್ಕೆ ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಉಡುಗೆ ಬಗ್ಗೆ ವ್ಯಂಗ್ಯವಾಡಿ ಇತ್ತೀಚೆಗಷ್ಟೇ ವಿವಾದಕ್ಕೀಡಾಗಿದ್ದ ವೆಂಡೆಲ್ ರಾಡ್ರಿಕ್ಸ್ ಇದೀಗ ನೆನಪು ಮಾತ್ರ.


Click it and Unblock the Notifications











