ಕೋಟ್ಯಂತರ ಹಣ ಸಂಗ್ರಹ, ಗುರಿ ಮುಟ್ಟಿದ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ
ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರುಗಳು ಕೋವಿಡ್ ಸಂಕಷ್ಟದಲ್ಲಿ ನೆರವಾಗಲು ನಿಧಿ ಸಂಗ್ರಹ ಅಭಿಯಾನಕ್ಕೆ ಕೆಲವು ದಿನಗಳ ಹಿಂದೆ ಚಾಲನೆ ನೀಡಿದ್ದರು. ಸಂಗ್ರಹವಾಗುವ ಹಣದಿಂದ ದೇಶದಾದ್ಯಂತ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ವಿತರಿಸುವ ಗುರಿಯನ್ನು ಈ ದಂಪತಿ ಹೊಂದಿದ್ದರು.
ವಿರಾಟ್ ಹಾಗೂ ಅನುಷ್ಕಾ ಪ್ರಾರಂಭಿಸಿದ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು ಕೆಲವೇ ದಿನಗಳಲ್ಲಿ ಕೋಟ್ಯಂತರ ರು. ಹಣವನ್ನು ಈ ದಂಪತಿ ಸಂಗ್ರಹಿಸಿದ್ದಾರೆ.
ಮೇ 7 ರಂದು ಅಭಿಯಾನಕ್ಕೆ ಚಾಲನೆ ನೀಡಿದ್ದ ವಿರಾಟ್-ಅನುಷ್ಕಾ ಕೇವಲ ಆರು ದಿನಗಳಲ್ಲಿ 11 ಕೋಟಿ ಹಣ ಒಟ್ಟು ಮಾಡಿದ್ದಾರೆ. ಅಭಿಯಾನ ಆರಂಭ ಮಾಡಿದಾಗ 4 ಕೋಟಿ ಹಣ ಸಂಗ್ರಹಿಸುವ ಗುರಿಯನ್ನು ಹೊಂದಿದ್ದರು. ಕೆಲವೇ ದಿನಗಳಲ್ಲಿ 5 ಕೋಟಿ ಸಂಗ್ರಹವಾಗಿಬಿಟ್ಟಿತು.

ಆ ನಂತರ ಎಂಪಿಎಲ್ ಸಂಸ್ಥೆಯು 5 ಕೋಟಿ ಹಣವನ್ನು ದೇಣಿಗೆ ನೀಡಿತು. ಇದರಿಂದಾಗಿ ಸಂಗ್ರಹವಾದ ಮೊತ್ತ ಸುಮಾರು 9 ಕೋಟಿ ಆಗಿದೆ. ಇದೀಗ ಗುರಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ವಿರಾಟ್-ಅನುಷ್ಕಾ 11 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ.
ಸಂಗ್ರಹವಾಗುವ ಹಣದಿಂದ ಆಕ್ಸಿಜನ್ ಕಾನ್‌ಸಂಟ್ರೇಟರ್‌ಗಳು, ಆಮ್ಲಜನಕ ಸಿಲಿಂಡರ್‌ಗಳು ಇತರೆ ಕೋವಿಡ್ ಸಂಬಂಧಿ ಪರಿಕರಗಳು ಸೇವೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಅನುಷ್ಕಾ ಹಾಗೂ ವಿರಾಟ್ ಇಬ್ಬರೂ ಸೇರಿ 2 ಕೋಟಿ ರು ಹಣವನ್ನು ಕೋವಿಡ್ ಸಂಕಷ್ಟಕ್ಕೆ ದೇಣಿಗೆ ನೀಡಿದ್ದಾರೆ.
ಈ ದಂಪತಿಯ ನೀಡಿರುವ ದೇಣಿಗೆ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ವಿರಾಟ್ ಕೊಹ್ಲಿಯ ಒಟ್ಟು ಮೌಲ್ಯ 633 ಕೋಟಿಗೂ ಹೆಚ್ಚು. ಅನುಷ್ಕಾ ಶರ್ಮಾ ಒಟ್ಟು ಮೌಲ್ಯ 264 ಕೋಟಿ ಇಬ್ಬರದ್ದೂ ಒಟ್ಟು ಸೇರಿ ಸುಮಾರು 900 ಕೋಟಿ ಆಗುತ್ತದೆ. ಅವರು ಎರಡು ಕೋಟಿ ದಾನ ಮಾಡಿದ್ದಾರೆ, ಅಲ್ಲಿಗೆ ಅವರ ಒಟ್ಟು ಆಸ್ತಿಯ ಶೇ 1 ರಷ್ಟು ಸಹ ಅವರು ದಾನ ಮಾಡಿಲ್ಲ. ಆದರೆ ಜನರಿಗೆ ಹಣ ದೇಣಿಗೆ ನೀಡುವಂತೆ ಹೇಳುತ್ತಿದ್ದಾರೆ ಎಂಬ ಟೀಕೆಯನ್ನು ಹಲವರು ಮಾಡಿದ್ದಾರೆ.
ಬಾಲಿವುಡ್‌ನ ಹಲವಾರು ಮಂದಿ ನಟ-ನಟಿಯರು ಕೋವಿಡ್ ಸಮಯದ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸೋನು ಸೂದ್, ಅಮಿತಾಬ್ ಬಚ್ಚನ್, ರವೀನಾ ಟಂಡನ್, ಸಲ್ಮಾನ್ ಖಾನ್, ಹುಮಾ ಖುರೇಷಿ, ಜಾನ್ ಅಬ್ರಹಾಂ ಇನ್ನೂ ಹಲವಾರು ಮಂದಿ ನೆರವಿನ ಹಸ್ತ ಚಾಚುತ್ತಿದ್ದಾರೆ.


Click it and Unblock the Notifications











