ವಂಚಕರು ತೋಡಿದ ಖೆಡ್ಡಾಗೆ ಬಿದ್ದ 'ಕಪಿಲ್ ಶರ್ಮಾ ಶೋ' ಖ್ಯಾತಿಯ ಅರ್ಚನಾ ಪೂರನ್ ಸಿಂಗ್ ಮಗ ; ಕ್ಷಣಾರ್ಧದಲ್ಲೇ ₹87,000 ಪಂಗನಾಮ
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ.
ಆದರೆ ಇಂತಹ ಚಿತ್ರರಂಗದರು ಕೂಡ ಕೆಲ ಒಮ್ಮೆ ಯಾಮಾರುತ್ತಾರೆ. ಅದೆಲ್ಲೋ ಕುಳಿತು ಅದ್ಯಾರೋ ಬೀಸಿದ ವಂಚನೆಯ ಜಾಲಕ್ಕೆ ಸಿಲುಕಿ ವಿಲ ವಿಲ ಒದ್ದಾಡುತ್ತಾರೆ. ತಮ್ಮಿಂದ ತಪ್ಪಾಗಿದೆ ಎನ್ನುವ ವಿಚಾರ ಗೊತ್ತಾದ ನಂತರ ಹಣೆ ಹಣೆ ಚಚ್ಚಿಕೊಳ್ಳುತ್ತಾರೆ. ಇದಕ್ಕೆ ಅರ್ಚನಾ ಪೂರನ್ ಸಿಂಗ್ ಮತ್ತು ಪರ್ಮೀತ್ ಸೇಠಿ ಅವರ ಮುದ್ದಿನ ಮಗ ಆಯುಷ್ಮಾನ್ ಸದ್ಯದ ಉದಾಹರಣೆ.

ಹೌದು, ಅರ್ಚನಾ ಪೂರನ್ ಸಿಂಗ್ ಮತ್ತು ಪರ್ಮೀತ್ ಸೇಠಿ.. ಬಾಲಿವುಡ್‌ನ ಖ್ಯಾತ ಜೋಡಿಯಲ್ಲೊಂದು. ಹಲವು ದಶಕಗಳಿಂದ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದವರು ಇವರು ಇಬ್ಬರು. ''ಕುಚ್ ಕುಚ್ ಹೋತಾ ಹೈ'' ಸಿನಿಮಾದ ಮಿಸ್ ಬ್ರಿಗಾಂಜಾ ಪಾತ್ರದಿಂದ ಅರ್ಚನಾ ಇಂದಿಗೂ ಜನಪ್ರಿಯರಾಗಿದ್ದರೆ, ಪರ್ಮೀತ್ ಅವರ ''ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ'' ಚಿತ್ರದ ಕುಲ್ಜೀತ್ ಪಾತ್ರವನ್ನು ಇನ್ನೂ ಹಲವರು ಮರೆತಿಲ್ಲ. ಅರ್ಚನಾ ಪೂರನ್ ಸಿಂಗ್ ಅವರಿಲ್ಲದೇ ''ಕಪಿಲ್ ಶರ್ಮಾ ಶೋ'' ಅಪೂರ್ಣ.
ಇಂಥಾ ಅರ್ಚನಾ ಮತ್ತು ಪರ್ಮಿತ್ ಅವರಿಗೆ ಇಬ್ಬರು ಎದೆಯೆತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ. ಒಬ್ಬರ ಹೆಸರು ಆರ್ಯಮನ್ ಮತ್ತೊಬ್ಬರ ಹೆಸರು ಆಯುಷ್ಮಾನ್. ತಂದೆ-ತಾಯಿಯಂತೆ ಚಿತ್ರರಂಗದಲ್ಲಿ ನೆಲೆಯೂರುವ ಬಯಕೆ ಹೊಂದಿರುವ ಇಬ್ಬರು ಸದ್ಯ ಪ್ರಯತ್ನ ಮಾಡುತ್ತಿದ್ದಾರೆ.
ಆ ಪೈಕಿ ಜೀವನೋಪಾಯಕ್ಕೆ ಬಾಕಿ ಉಳಿದವರಂತೆ ಅರ್ಚನಾ ಅವರ ಹಿರಿಯ ಮಗ ಆರ್ಯಮನ್ ಯೂಟ್ಯೂಬ್ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇವರ ಸಹೋದರ ಆಯುಷ್ಮಾನ್ ಕೂಡ ಈ ಅಣ್ಣನ ಯೂಟ್ಯೂಬ್ ಚಾನೆಲ್‌ಗೆ ಬೆವರು ಸುರಿಸುತ್ತಿದ್ಧಾರೆ. 1.06 ಲಕ್ಷಕ್ಕೂ ಹೆಚ್ಚಿನ ಸಬ್‌ಸ್ಕ್ರೈಬರ್ಸ್ ಆರ್ಯಮನ್ ಅವರ Aary Vlogs ಯೂಟ್ಯೂಬ್ ಚಾನೆಲ್‌ಗಿದ್ದಾರೆ.
ತಮ್ಮ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಕುಂತಿದ್ದು, ನಿಂತಿದ್ದು, ತಿಂದಿದ್ದು, ಎದ್ದಿದ್ದು, ಮಲಗಿದ್ದು, ಹೀಗೆ ಆರ್ಯಮನ್ ತಮ್ಮ ಬದುಕಿನ ಸಂಪೂರ್ಣ ವಿವರ ಈ ತಮ್ಮ ಚಾನೆಲ್‌ನಲ್ಲಿ ಹಂಚಿಕೊಳ್ಳುತ್ತಾರೆ. ತಮ್ಮ ಇತ್ತೀಚೆನ ವ್ಲಾಗ್‌ನಲ್ಲಿ ತಮ್ಮ ಸಹೋದರ ಆಯುಷ್ಮಾನ್ 87,000 ಹಣ ಕಳೆದುಕೊಂಡ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ.

ವಂಚಕರ ಬಲೆಗೆ ತಮ್ಮ ಸಹೋದರ ಬಿದ್ದಿದ್ಹೇಗೆ ಎನ್ನುವುದನ್ನು ತಮ್ಮ ವ್ಲಾಗ್‌ನಲ್ಲಿ ಆರ್ಯಮನ್ ವಿವರಿಸಿದ್ದು, ಆ ಪ್ರಕಾರ ಆಯುಷ್ಮಾನ್ ಯಾವುದೋ ಒಂದು ಆನ್‌ಲೈನ್ ಸೇವೆಯ 7 ದಿನಗಳ ಉಚಿತ ಟ್ರಯಲ್ ಪಡೆಯಲು ಮುಂದಾಗಿದ್ದಾರೆ.
ಇನ್ನು ಸಾಮಾನ್ಯವಾಗಿ ಇಂತಹ ಟ್ರಯಲ್‌ಗೆ ಸೈನ್ ಅಪ್ ಮಾಡುವಾಗ ಕ್ರೆಡಿಟ್ ಕಾರ್ಡ್ ವಿವರ ಕೇಳಲಾಗುತ್ತೆ. ಅದ್ರಂತೆ ಆಯುಷ್ಮಾನ್ ಅವರಿಗೆ ಕೂಡ ಕೇಳಲಾಗಿದೆ. ಈ ಸಮಯದಲ್ಲಿ ಕೇವಲ 1 ರೂಪಾಯಿ ಮಾತ್ರ ಕಡಿತವಾಗುತ್ತೆ ಎಂದು ಕೂಡ ತೋರಿಸಲಾಗಿದೆ. ಆದರೆ ಖದೀಮರು ಕಾರ್ಡ್ ವಿವರ ನೀಡಿದ ಕೆಲವೇ ನಿಮಿಷಗಳಲ್ಲಿ ಆಯುಷ್ಮಾನ್ ಅವರ ಖಾತೆಯಿಂದ 87,000 ಹಣ ಎಗರಿಸಿದ್ಧಾರೆ.
ತಮ್ಮ ಮುದ್ದಿನ ಮಗ 87,000 ಕಳೆದುಕೊಂಡ ವಿಚಾರ ತಿಳಿದು ಅರ್ಚನಾ ಪೂರನ್ ಸಿಂಗ್ ಈ ವ್ಲಾಗ್‌ನಲ್ಲಿ ಆಘಾತಕ್ಕೊಳಗಾಗಿದ್ಧಾರೆ. ತಕ್ಷಣ ಕಾರ್ಡ್ ಬ್ಲಾಕ್ ಮಾಡು ಎಂದು ಅರ್ಚನಾ ಹೇಳುತ್ತಿರುವುದನ್ನು ಗಮನಿಸಬಹುದು. ಮತ್ತೊಂದು ಕಡೆ ಪರ್ಮಿತ್ ಸೇಠಿ ಕಾರ್ಡ್ ಬ್ಲಾಕ್ ಮಾಡುವುದಕ್ಕಿಂತ ಬ್ಯಾಂಕ್‌ನಲ್ಲಿ ಪ್ರಶ್ನೆ ಮಾಡುವಂತೆ ಸಲಹೆ ನೀಡಿದ್ದಾರೆ. ಸದ್ಯ ಈ ವ್ಲಾಗ್ ವ್ಯಾಪಕವಾಗಿ ವೈರಲ್ ಆಗಿದ್ದು ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications