'ಪುಷ್ಪ' ಚಿತ್ರಕ್ಕೆ ಬಾಲಿವುಡ್ ತಾರೆಯರ ಜೈಕಾರ: ಶ್ರೀದೇವಿ ಪುತ್ರಿ ಮನಸ್ಸು ಕದ್ದ ಪುಷ್ಪ ರಾಜ್!
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಅಭಿನಯದ ಪುಷ್ಪ ಚಿತ್ರ, ಭಾರತೀಯ ಚಿತ್ರರಂಗದಲ್ಲೇ ದಾಖಲೆ ಮಾಡಿದೆ. ಹಲವು ವಿಚಾರಗಳಲ್ಲಿ ಪುಷ್ಪ ಚಿತ್ರ ದಾಖಲೆ ಮಾಡಿದೆ. ಅಲ್ಲು ಅರ್ಜುನ್ ಲುಕ್‌ನಿಂದ ಹಿಡಿದು ಚಿತ್ರದ ಪ್ರತೀ ವಿಚಾರದಲ್ಲೂ ಹೊಸತನ ಮತ್ತು ವಿಭಿನ್ನತೆಯನ್ನು ತರಲು ನಿರ್ದೇಶಕ ಸುಕುಮಾರ್ ಪ್ರಯತ್ನ ಪಟ್ಟಿದ್ದಾರೆ. ಅವರ ಪ್ರಯತ್ನಗಳು ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿವೆ. ಹಾಗಾಗಿ ಸಿನಿಮಾ ಗೆದ್ದು ಬೀಗಿದೆ.
ಪುಷ್ಪ ಚಿತ್ರ ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ಈಗ ಒಟಿಟಿಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಟಿಟಿಯಲ್ಲೂ ಕೂಡ ಚಿತ್ರವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಸಿನಿಮಾ ಮಂದಿ ಪುಷ್ಪ ಚಿತ್ರವನ್ನು ನೋಡಿ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಬಹುತೇಕರು ಪುಷ್ಪ ಚಿತ್ರವನ್ನು ಕೊಂಡಾಡಿದ್ದಾರೆ.
ಒಟಿಟಿಯಲ್ಲಿ ರಿಲೀಸ್ ಆಗಿರುವ ಪುಷ್ಪ ಚಿತ್ರವನ್ನು ಜಾಹ್ನವಿ ಕಪೂರ್, ಅರ್ಜುನ್ ಕಪೂರ್, ಕರಣ್ ಜೋಹರ್ ನೋಡಿದ್ದಾರೆ. ಚಿತ್ರದ ಬಗ್ಗೆ, ಅಲ್ಲು ಅರ್ಜುನ್ ಅಭಿನಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಪ್ರತಿಕ್ರಿಯೆಗೆ ನಟ ಅಲ್ಲು ಅರ್ಜುನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಜಾಹ್ನವಿ ಕಪೂರ್ ಮನಸ್ಸು ಗೆದ್ದ ಅಲ್ಲು ಅರ್ಜುನ್!
ನಟಿ ಜಾಹ್ನವಿ ಕಪೂರ್ ಪುಷ್ಪ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪುಷ್ಪ ಚಿತ್ರ ರಿವ್ಯೂವ್ ಕೊಟ್ಟಿದ್ದಾರೆ. " ದಿ ಕೂಲೆಸ್ಟ್ ಮ್ಯಾನ್ ಇನ್ ದಿ ವರ್ಲ್ಡ್. ಪುಷ್ಪ, ಮೈಂಡ್ ಬ್ಲೋಯಿಂಗ್'' ಎಂದು ಬರೆದು ಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಲ್ಲು ಅರ್ಜುನ್ "ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಬರೆದಿದ್ದಾರೆ.

ಪುಷ್ಪ ಸಿನಿಮಾ ಅಲ್ಲ, ಅದು ಭಾವನೆ: ಅರ್ಜುನ್ ಕಪೂರ್!
ಇನ್ನು ಬಾಲಿವುಡ್ ನಟ ಅರ್ಜುನ್ ಕಪೂರ್ ಕೂಡ ಪುಷ್ಪ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಪುಷ್ಪ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಪುಷ್ಪ ಒಂದು ಸಿನಿಮಾ ಮಾತ್ರ ಅಲ್ಲ. ಅದು ಒಂದು ಭಾವನೆ, ಇದೊಂದು ಕವಿತೆಯ ಸಿನಿಮಾ. ನನ್ನ ಪಾಲಿಗೆ ಅಲ್ಲು ಅರ್ಜುನ್ ಸದಾ ಆರ್ಯ ಆಗಿ ಇರುತ್ತಾರೆ. ಒಬ್ಬ ಅಭಿಮಾನಿಯಾಗಿ ಅವರನ್ನು ಆರ್ಯನಿಂದ, ಪುಷ್ಪ ತನಕ ನೋಡಿದ್ದೇನೆ. ಪುಷ್ಪ ಅಂದರೆ ಹೂವಲ್ಲ, ಅದು ಬೆಂಕಿ, ಅಲ್ಲು ಅರ್ಜುನ್ ಕಣ್ಣಲ್ಲಿ ಇರುವ ಬೆಂಕಿ ಚಿತ್ರದ ಪರದೆಯ ಮೇಲೆ ಕಾಣಿಸುತ್ತದೆ" ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ನಟ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. "ನಿಮ್ಮ ಹೃದಯದಿಂದ ಬಂದ ಈ ಮಾತುಗಳಿಗೆ ಧನ್ಯವಾದಗಳು, ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಅಲ್ಲು ಅರ್ಜುನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಲ್ಲು ಅರ್ಜುನ್ ಅಭಿನಯಕ್ಕೆ ಮರುಳಾದ ಕರಣ್ ಜೋಹರ್!
ಇನ್ನು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅಲ್ಲು ಅರ್ಜುನ್ ಅಭಿನಯಕ್ಕೆ ಮನಸೋತಿದ್ದಾರೆ. ಸಿನಿಮಾ ನೋಡಿದ ಬಳಿಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರದ್ದು ನಂಬಲಾಗದ ನಟನೆ ಇದೆ, ಅತ್ಯದ್ಭುತ ಅಭಿನಯ". ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಲ್ಲು ಅರ್ಜುನ್ "ಕರಣ್ ಜಿ ನಿಮಗೆ ಧನ್ಯವಾದಗಳು, ನಿಮ್ಮ ಮಾತುಗಳನ್ನು ಕೇಳಿ ಹೃದಯ ತುಂಬಿ ಬರುತ್ತಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದಿಯಲ್ಲೆ ಪ್ರತ್ಯೇಕ ದಾಖಲೆ ಮಾಡಿದ ಪುಷ್ಪ!
ಇನ್ನು ಪುಷ್ಪ ಚಿತ್ರದ ಬಹು ಭಾಷೆಯಲ್ಲಿ ರಿಲೀಸ್ ಆಗಿದೆ. ಒಟ್ಟಾರೆ ಬಾಕ್ಸಾಫೀಸ್ ಒಂದು ಲೆಕ್ಕ ಆದರೆ, ಬಾಲಿವುಡ್ ಬಾಕ್ಸಾಫೀಸ್ ಲೆಕ್ಕ ಮತ್ತೊಂದು ಕಡೆ. ಯಾಕೆಂದರೆ ಹಿಂದಿಯಲ್ಲಿ ರಿಲೀಸ್ ಆದ ಪುಷ್ಪ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಕೇವಲ ಹಿಂದಿ ಅವತರಣಿಕೆಯಲ್ಲೇ ಪುಷ್ಪ 100 ಕೋಟಿ ಗಳಿಸುವತ್ತ ಮುನ್ನುಗ್ಗುತ್ತಿದೆ. ಚಿತ್ರ ಒಟಿಟಿಯಲ್ಲಿ ರಿಲೀಸ್ ಅದರೂ ಕೂಡ ಕ್ರೇಜ್ ಕಡಿಮೆ ಆಗಿಲ್ಲ. ನಾಲ್ಕನೇ ವಾರಕ್ಕೆ 75 ಕೋಟಿ ರೂ ಕಲೆ ಹಾಕಿದೆ.


Click it and Unblock the Notifications











