'ಅರ್ಜುನ್' ಸಿನಿಮಾ ನಟಿ ಮೀರಾ ಚೋಪ್ರಾ ಮದುವೆ ಫಿಕ್ಸ್: ಪ್ರಿಯಕರನನ್ನು ಪರಿಚಯಿಸಿದ ಬೆಡಗಿ!
ಈ ವರ್ಷ ಸಾಕಷ್ಟು ಸಿನಿಮಾ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೆಲವರು 2ನೇ ಮದುವೆ ಕೂಡ ಆಗಿದ್ದಾರೆ. ಮುಂದಿನ ವರ್ಷವೂ ಹಲವು ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಲಿಸ್ಟ್‌ನಲ್ಲಿ ಬಹುಭಾಷಾ ನಟಿ ಮೀರಾ ಚೋಪ್ರಾ ಕೂಡ ಇದ್ದಾರೆ.
ಮೀರಾ ಕನ್ನಡದ 'ಅರ್ಜುನ್' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಚೋಪ್ರಾ ಹಾಗೂ ಪರಿಣಿತಿ ಚೋಪ್ರಾಗೆ ಈಕೆ ಸೋದರ ಸಂಬಂಧಿ ಆಗಬೇಕು. ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಮೀರಾ ಚೋಪ್ರಾ ಮಾಹಿತಿ ನೀಡಿದ್ದಾರೆ.

"ಹೌದು. ನಾನು ಮದುವೆ ಆಗುತ್ತಿದ್ದೇನೆ. 2024 ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬ ಸದಸ್ಯರು ಮದುವೆ ಸಿದ್ಧತೆ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ವಿವಾಹ ಮಹೋತ್ಸವದಲ್ಲಿ 150 ಜನ ಅತಿಥಿಗಳಿಗೆ ಆಹ್ವಾನ ನೀಡಲು ಚಿಂತನೆ ನಡೆಸಿದ್ದೇವೆ" ಎಂದು ಮೀರಾ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಳಿಕ ಮುಂಬೈನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸುವ ಲೆಕ್ಕಾಚಾರದಲ್ಲಿದ್ದಾರೆ. ಚಿತ್ರರಂಗದವರು ಹಾಗೂ ಸ್ನೇಹಿತರನ್ನು ಈ ಪಾರ್ಟಿಗೆ ಆಹ್ವಾನಿಸಲು ತೀರ್ಮಾನಿಸಿದ್ದಾರೆ. ಕ್ರಿಸ್‌ಮಸ್ ಸಂದರ್ಭದಲ್ಲಿ, ಮೀರಾ, ಮಿಸ್ಟರಿ ಮ್ಯಾನ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದು ಆಕೆಯ ಮದುವೆ ಬಗ್ಗೆ ಊಹಾಪೋಹ ಹುಟ್ಟು ಹಾಕಿತ್ತು.
ಆ ಫೋಟೊಗಳಲ್ಲಿ ವ್ಯಕ್ತಿಯೊಬ್ಬರು ಮೀರಾಳನ್ನು ತಬ್ಬಿಕೊಂಡಿರುವುದನ್ನು ನೋಡಬಹುದು. "ಪ್ಯಾರ್ ವಾಲಾ ಕ್ರಿಸ್ಮಸ್" ಎಂದು ಕ್ಯಾಪ್ಷನ್ ಒಟ್ಟು ಮೀರಾ ಫೋಟೊಗಳನ್ನು ಶೇರ್ ಮಾಡಿದ್ದರು. ಪ್ರಿಯಾಂಕ ಚೋಪ್ರಾ ಕಸಿನ್ ಆಗಿದ್ದರೂ ಮೀರಾಗೆ ದೊಡ್ಡಮಟ್ಟದಲ್ಲಿ ಸಕ್ಸಸ್ ಸಿಗಲಿಲ್ಲ. 2005ರಲ್ಲಿ 'ಅನ್ಬೆ ಆರುಯಿರೇ' ಎನ್ನುವ ತಮಿಳು ಸಿನಿಮಾ ಮೂಲಕ ಆಕೆ ಚಿತ್ರರಂಗಕ್ಕೆ ಬಂದರು.

2008ರಲ್ಲಿ ನಿರ್ದೇಶಕ ಶಾಹುರಾಜ್ ಶಿಂಧೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮೀರಾ ಮಿಂಚಿದ್ದರು. ಗ್ಲಾಮರ್ಸ್ ರೋಲ್‌ಗಳಲ್ಲಿ ನಟಿಸಿದರೂ ಆಕೆಯ ದೊಡ್ಡ ಬ್ರೇಕ್ ಸಿಗಲಿಲ್ಲ. ಬಳಿಕ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿಯೇ ಉಳಿದುಬಿಟ್ಟರು. ಈ ವರ್ಷ 'ಸಫೇದ್' ಎನ್ನುವ ಚಿತ್ರದಲ್ಲಿ ಮೀರಾ ನಟಿಸಿದ್ದರು.
ಸದ್ಯ 'ನಾಸ್ತಿಕ್', 'ಮೊಗಲಿ ಪುವ್ವು' ಎನ್ನುವ ಎರಡು ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ಮುಂದಿನ ವರ್ಷ ಆ ಸಿನಿಮಾಗಳು ತೆರೆಗೆ ಬರಲಿವೆ. ಇತ್ತೀಚೆಗೆ ಮೀರಾ ಚೋಪ್ರಾ ಸೋದರಿ ಸಂಬಂಧಿಗಳಾದ ಪ್ರಿಯಾಂಕಾ ಚೋಪ್ರಾ ಹಾಗೂ ಪರಿಣಿತಿ ಚೋಪ್ರಾ ಜೊತೆಗಿನ ಬಾಂಧವ್ಯ, ಒಡನಾಟದ ಬಗ್ಗೆ ಮಾತನಾಡಿದ್ದರು. ಆಕೆಯ ಹೇಳಿಕೆ ವೈರಲ್ ಆಗಿತ್ತು.
"ಮೊದಲಿನಿಂದಲೂ ನಾವು ಇಲ್ಲಿ ಸ್ನೇಹಿತತರು ಎನ್ನುವಷ್ಟು ಹತ್ತಿರವಾಗಿರಲಿಲ್ಲ. ಅದು ಫೇಕ್ ಆಗುತ್ತದೆ. ಆದರೆ ಮೂರ್ನಾಲ್ಕು ಹುಡುಗಿಯರು ಇಂಡಸ್ಟ್ರಿಗೆ ಸೇರಿದಾಗ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ ಅಂತ ಹೇಳಬಹುದು. ಇದು ನನಗೆ ಆಗಲಿಲ್ಲ. ನಾನು ಎಂದಿಗೂ ಸಹಾಯವನ್ನು ಕೇಳಲಿಲ್ಲ. ನಾನು ಅವರಿಂದ ಸಹಾಯವನ್ನು ಪಡೆಯಲಿಲ್ಲ. ನಾನು ಎಂದಿಗೂ ಸಹಾಯ ಕೇಳಲಿಲ್ಲ, ಆದರೆ ನಾನು ಅವರ ಕಡೆಯಿಂದ ಯಾವುದೇ ಸಹಾಯದ ಪ್ರಸ್ತಾಪ ಸ್ವೀಕರಿಸಲಿಲ್ಲ" ಎಂದು ಮೀರಾ ಸಂದರ್ಶನವೊಂದರಲ್ಲಿ ಹೇಳಿದ್ದರು.
ಪರಿಣಿತಿ ಕುಟುಂಬದ ಜೊತೆ ನಮ್ಮ ಕುಟುಂಬದವರು ಬಹಳ ವರ್ಷಗಳಿಂದ ಮಾತನಾಡುತ್ತಿಲ್ಲ. ಆಕೆ ಜೊತೆ ನಾನು ಮಾತನಾಡುವುದು ಸರಿಯಲ್ಲ ಎಂದು ಸುಮ್ಮನಾದೆ. ಆದರೆ ಪ್ರಿಯಾಂಕಾ ಕುಟುಂಬದ ಜೊತೆ ಒಳ್ಳೆ ಒಡನಾಟವಿದೆ. ಆಕೆಯ ಉದಾರ ಮನಸ್ಸಿನವಳು. ಆದರೂ ಆಕೆ ಜೊತೆ ಸೋದರಿ ಆತ್ಮೀಯತೆ ಇಲ್ಲ" ಎಂದಿದ್ದರು.


Click it and Unblock the Notifications











