ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ (ಅಕ್ಟೋಬರ್ 27)ಕ್ಕೆ ಮುಂದೂಡಲಾಗಿದೆ.
ಈವರೆಗೆ ಮೂರು ಬಾರಿ ಆರ್ಯನ್ ಖಾನ್‌ಗೆ ಜಾಮೀನು ನಿರಾಕರಿಸಲಾಗಿದೆ. ಇದೀಗ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು ಇಂದು ಅರ್ಜಿಯ ವಿಚಾರಣೆ ನಡೆಯಿತು.
ಆರ್ಯನ್ ಖಾನ್ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೊಹ್ಟಗಿ ವಾದ ಮಂಡಿಸಿದರು. ''ಆರ್ಯನ್ ಖಾನ್ ಬಳಿ ಯಾವುದೇ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಮತ್ತು ಆರ್ಯನ್ ಖಾನ್ ಡ್ರಗ್ಸ್ ಸೇವಿಸಿದ್ದಾರೆ ಎಂಬುದಕ್ಕೂ ಸಾಕ್ಷ್ಯಗಳಿಲ್ಲ'' ಎಂದು ವಾದ ಮಂಡಿಸಿದ್ದಾರೆ ಮುಕುಲ್ ರೊಹ್ಟಗಿ.

ಆರ್ಯನ್ ಖಾನ್ ಮೇಲೆ ಸೆಕ್ಷನ್ 27ಎ ಹೊರಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಮುಕುಲ್ ರೊಹ್ಟಗಿ, ಆರ್ಯನ್ ಪ್ರಕರಣಕ್ಕೆ ಸೆಕ್ಷನ್ 8ಸಿ, 27 ಮತ್ತು 20ಬಿ ಹೊರಿಸಬೇಕಿತ್ತು ಎಂದರು. ಡ್ರಗ್ಸ್ ಹೊಂದಿರದೇ ಇದ್ದರೂ, ಡ್ರಗ್ಸ್ ಸೇವಿಸಿರು ಬಗ್ಗೆ ಸಾಕ್ಷ್ಯಗಳೂ ಇಲ್ಲದಿರುವಾಗ ಹೇಗೆ 23 ದಿನಗಳ ಕಾಲ ಆತನನ್ನು ಜೈಲಿನಲ್ಲಿ ಇರಿಸಲಾಗಿದೆ ಎಂದು ಮುಕುಲ್ ರೊಹ್ಟಗಿ ಪ್ರಶ್ನೆ ಮಾಡಿದರು.
''ಕ್ರೂಸ್ ಶಿಪ್‌ನಲ್ಲಿ ನಡೆದ ಪಾರ್ಟಿಗೆ ಆರ್ಯನ್ ಖಾನ್ ಅತಿಥಿಯಾಗಿ ಆಹ್ವಾನಿತರಾಗಿದ್ದೇ ಹೊರತು ಪಾರ್ಟಿ ಮಾಡಲು ಹೋಗಿರಲಿಲ್ಲ'' ಎಂದರು ಮುಕುಲ್ ರೊಹ್ಟಗಿ.
ಆರ್ಯನ್ ಖಾನ್ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಎನ್‌ಸಿಬಿ ಪರ ವಕೀಲರು, ''ಆರ್ಯನ್ ಖಾನ್ ಡ್ರಗ್ಸ್ ಹೊಂದಿಲ್ಲದಿದ್ದರೂ ಆತನ ಗೆಳೆಯ ಅರ್ಬಾಜ್ ಸೇಠ್‌ನಿಂದ ಡ್ರಗ್ಸ್ ತರಿಸಿಕೊಂಡಿದ್ದ. ಆರ್ಯನ್ ಖಾನ್ ಡ್ರಗ್ಸ್ ಹೊಂದಿಲ್ಲದೇ ಇದ್ದರು ಸಂಚಿನಲ್ಲಿ ಭಾಗಿಯಾಗಿದ್ದರು'' ಎಂದು ವಕೀಲರು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಬಾಂಬೆ ಹೈಕೋರ್ಟ್ ನ್ಯಾಯ ಪೀಠವು ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.
ಅಕ್ಟೋಬರ್ 02ರಂದು ಕ್ರೂಸ್ ಶಿಪ್ ಪಾರ್ಟಿಯಲ್ಲಿ ಭಾಗವಹಿಸಲು ತೆರಳಿದ್ದ ಆರ್ಯನ್ ಖಾನ್ ಅನ್ನು ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದರು ಅದರ ನಂತರದ ದಿನ (ಅಕ್ಟೋಬರ್ 03) ರಂದು ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಅವರುಗಳನ್ನು ಎನ್‌ಸಿಬಿ ಬಂಧಿಸಿತು. ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ಬಂಧಿಸಿದಾಗ ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ. ಆದರೆ ಅರ್ಬಾಜ್ ಮರ್ಚೆಂಟ್ ಬಳಿ ಸ್ವಲ್ಪ ಪ್ರಮಾಣದ ಚರಸ್ ದೊರೆತಿತ್ತು.
ಆರ್ಯನ್ ಖಾನ್ ಪ್ರಕರಣ ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಆರ್ಯನ್ ಖಾನ್ ಬಂಧನದ ಹಿಂದೆ ಎನ್‌ಸಿಬಿಯ ಸ್ವಾರ್ಥವಿದೆ ಎನ್ನಲಾಗುತ್ತಿದೆ. ಎನ್‌ಸಿಬಿಯ ದಾಳಿಯಲ್ಲಿ ಖಾಸಗಿ ವ್ಯಕ್ತಿಗಳು ಭಾಗಿ ಆಗಿರುವ ಬಗ್ಗೆ ಈಗಾಗಲೇ ಸಾಕ್ಷ್ಯಗಳು ದೊರೆತಿವೆ. ದಾಳಿಯ ದಿನ ಕೆಲವರನ್ನು ಸ್ವತಂತ್ರ್ಯ ಸಾಕ್ಷಿಗಳೆಂದು ಎನ್‌ಸಿಬಿ ದಾಖಲಿಸಿದೆ. ಅದರಲ್ಲಿ ಒಬ್ಬರಾದ ಪ್ರಭಾಕರ್ ಎಂಬುವರು ಎನ್‌ಸಿಬಿಯು ತನ್ನಿಂದ ಖಾಲಿ ಹಾಳೆಗಳಿಗೆ ಸಹಿ ಹಾಕಿಸಿಕೊಂಡಿದೆ ಎಂದೂ, ಈ ಪ್ರಕರಣದಲ್ಲಿ 25 ಕೋಟಿ ಹಣಕ್ಕೆ ಬೇಡಿಕೆ ಖಾಸಗಿ ವ್ಯಕ್ತಿಗಳಿಬ್ಬರು ಬೇಡಿಕೆ ಇಟ್ಟಿರುವುದಾಗಿಯೂ ಹೇಳಿದ್ದಾರೆ.
ಪ್ರಕರಣದ ಮತ್ತೊಬ್ಬ ಸ್ವತಂತ್ರ್ಯ ಸಾಕ್ಷಿಯಾದ ಗೋಸಾವಿ ಎಂಬಾತ ಸ್ಯಾಮ್ ಡಿ ಸೋಜಾ ಎಂಬಾತನ ಮೂಲಕ 25 ಕೋಟಿ ಹಣಕ್ಕೆ ಬೇಡಿಕೆ ಇರಿಸಿದ್ದ ಅದರಲ್ಲಿ 8 ಕೋಟಿ ಹಣವನ್ನು ಎನ್‌ಸಿಬಿ ಅಧಿಕಾರಿ ಸಮೀರ್‌ಗೆ ಕೊಡಬೇಕೆಂದು ದೂರವಾಣಿಯಲ್ಲಿ ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದಿದ್ದಾನೆ. ಪ್ರಕರಣದಲ್ಲಿ ಗೋಸಾವಿ ಎಂಬಾತನ ಕೈವಾಡ ಹೆಚ್ಚಿಗಿದ್ದು ಖಾಸಗಿ ಡಿಟೆಕ್ಟಿವ್ ಎಂದು ಹೇಳಿಕೊಂಡಿರುವ ಈತ ಇದೀಗ ತಲೆ ಮರೆಸಿಕೊಂಡಿದ್ದಾನೆ. ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ದಿನದಂದು ಈತ ಎನ್‌ಸಿಬಿ ಕಚೇರಿಯಲ್ಲಿ ಆರ್ಯನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದ. ಆ ಸೆಲ್ಫಿ ಬಹಳ ವೈರಲ್ ಆಗಿತ್ತು.


Click it and Unblock the Notifications











