twitter
    For Quick Alerts
    ALLOW NOTIFICATIONS  
    For Daily Alerts

    ಆರ್ಯನ್ ಖಾನ್ ಬಂಧನ ಪ್ರಕರಣ: ಎನ್‌ಸಿಬಿ ಅಧಿಕಾರಿ ವಿರುದ್ಧ ತನಿಖೆ

    |

    ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತನಿಖೆ ಆರಂಭವಾಗಿದೆ.

    ಆರ್ಯನ್ ಖಾನ್ ಪ್ರಕರಣದಲ್ಲಿ ಸಮೀರ್‌ ವಿರುದ್ಧ ಹಲವು ಪ್ರಶ್ನೆಗಳು ಎದ್ದಿವೆ. ಎನ್‌ಸಿಬಿ ಮಾಡಿದ ದಾಳಿ ಉದ್ದೇಶಪೂರ್ವಕವಾಗಿತ್ತು ಎಂಬುದರಿಂದ ಆರಂಭಗೊಂಡು, ಎನ್‌ಸಿಬಿ ದಾಳಿಯಲ್ಲಿ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪ, ಲಂಚಕ್ಕೆ ಬೇಡಿಕೆ, ಹಣ ವಸೂಲಾತಿ ಯತ್ನ, ಸುಳ್ಳು ಸಾಕ್ಷಿಗಳ ನಿರ್ಮಾಣ, ದುರುದ್ದೇಶಪೂರ್ವಕ ಬಂಧನ ಇನ್ನೂ ಹಲವು ಆರೋಗಳು ಎನ್‌ಸಿಬಿ ವಿರುದ್ಧ ಕೇಳಿ ಬರುತ್ತಿವೆ.

    ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಸೇರಿದಂತೆ ಕೆಲ ಪ್ರಮುಖ ರಾಜಕಾರಣಿಗಳೇ ಆರೋಪ ಮಾಡಿದ್ದು, ಆರೋಪಗಳು ಗಂಭೀರವಾಗಿಯೇ ಇವೆ. ಹಾಗಾಗಿ ಎನ್‌ಸಿಬಿಯು ಸಮೀರ್ ವಾಂಖೆಡೆ ವಿರುದ್ಧ ತನಿಖೆ ನಡೆಯಲು ವಿಶೇಷ ತನಿಖಾ ತಂಡವೊಂದನ್ನು ರಚಿಸಿದೆ.

    Aryan Khan Case: Inquiry Against NCB Officer Sameer Wankhede

    ಐವರು ಸದಸ್ಯರ ತನಿಖಾ ತಂಡವು ದೆಹಲಿಯಿಂದ ಇಂದು ಮುಂಬೈಗೆ ಆಗಮಿಸಿದ್ದು, ಸಮೀರ್ ವಾಂಖೆಡೆ, ಆರ್ಯನ್ ಪ್ರಕರಣದ ಸಾಕ್ಷಿ ಪ್ರಭಾಕರ್ ಸಾಯಿಲ್, ಶಾರುಖ್ ಖಾನ್‌ರ ಮ್ಯಾನೇಜರ್ ಪೂಜಾ ದದ್ಲಾನಿ, ಆರ್ಯನ್ ಪ್ರಕರಣದ ಮತ್ತೊಬ್ಬ ಸಾಕ್ಷಿ ಕಿರಣ್ ಗೋಸಾವಿ, ಉದ್ಯಮಿ ಸ್ಯಾಮ್ ಡಿಸೋಜಾ ಅವರುಗಳನ್ನು ಪ್ರಮುಖವಾಗಿ ವಿಚಾರಣೆ ನಡೆಸಲಿದೆ. ಇವರು ಮಾತ್ರವಲ್ಲದೆ ಇನ್ನಷ್ಟು ಮಂದಿಯ ವಿಚಾರಣೆಯೂ ನಡೆಯಲಿದೆ.

    ಸಮೀರ್ ಉದ್ಯೋಗದಲ್ಲಿ ಇರುತ್ತಾರೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತನಿಖಾ ತಂಡದ ನೇತೃತ್ವ ವಹಿಸಿರುವ ಡಿಡಿಜಿ, ''ಈ ಬಗ್ಗೆ ಈಗಲೇ ಉತ್ತರ ನೀಡಲು ಸಾಧ್ಯವಿಲ್ಲ'' ಎಂದಿದ್ದಾರೆ.

    ಆರ್ಯನ್ ಖಾನ್ ಪ್ರಕರಣದಲ್ಲಿ ಸ್ವತಂತ್ರ್ಯ ಸಾಕ್ಷಿಯಾಗಿರುವ ಪ್ರಭಾಕರ್, ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ಈ ಪ್ರಕರಣದಲ್ಲಿ ಕಿರಣ್ ಗೋಸಾವಿ ಸ್ಯಾಮ್ ಡಿ ಸೋಜಾ ಹಸ್ತಕ್ಷೇಪವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 25 ಕೋಟಿಗೆ ಬೇಡಿಕೆ ಇಡುವಂತೆ ಗೋಸಾವಿ, ಸ್ಯಾಮ್ ಡಿಸೋಜಾಗೆ ಹೇಳಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ ಎಂದಿದ್ದಾರೆ. ಅಲ್ಲದೆ, ಸ್ಯಾಮ್ ಡಿಸೋಜಾ ಹಾಗೂ ಕಿರಣ್ ಗೋಸಾವಿ ಇಬ್ಬರೂ ಶಾರುಖ್ ಖಾನ್‌ರ ವ್ಯವಸ್ಥಾಪಕಿ ಪೂಜಾ ದದ್ಲಾನಿಯನ್ನು ಕರೆಸಿಕೊಂಡು ಕಾರೊಂದರಲ್ಲಿ ಕುಳಿತು ಮಾತನಾಡಿದ್ದನ್ನು ನಾನು ಕಂಡಿದ್ದೇನೆ'' ಎಂದಿದ್ದಾರೆ. ಪ್ರಭಾಕರ್, ತಾವು ಕಿರಣ್ ಗೋಸಾವಿಯ ಕಾರು ಚಾಲಕ ಹಾಗೂ ಬಾಡಿಗಾರ್ಡ್ ಆಗಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ''25 ಕೋಟಿ ಹಣಕ್ಕೆ ಬೇಡಿಕೆ ಇಡು ಕೊನೆಗೆ 18 ಕೋಟಿಗೆ ಸೆಟಲ್ ಮಾಡಿಕೊ, ಅದರಲ್ಲಿ 8 ಕೋಟಿಯನ್ನು ಸಮೀರ್ ವಾಂಖೆಡೆಗೆ ಕೊಡಬೇಕಾಗುತ್ತದೆ'' ಎಂದು ಗೋಸಾವಿ ಕಾರಿನಲ್ಲಿ ಕುಳಿತು ಫೋನಿನಲ್ಲಿ ಸ್ಯಾಮ್ ಡಿಸೋಜಾ ಜೊತೆಗೆ ಮಾತನಾಡಿದ್ದ ಆಗ ನಾನು ಗೋಸಾವಿಯ ಕಾರು ಚಲಾಯಿಸುತ್ತಿದ್ದೆ'' ಎಂದಿದ್ದಾರೆ ಪ್ರಭಾಕರ್. ಆದರೆ ಪ್ರಭಾಕರ್ ಮಾಡಿರುವ ಆರೋಪಗಳನ್ನು ಎನ್‌ಸಿಬಿ ಅಧಿಕಾರಿ ಸಮೀರ್ ತಳ್ಳಿ ಹಾಕಿದ್ದಾರೆ.

    ಆರ್ಯನ್ ಖಾನ್ ಅನ್ನು ಎನ್‌ಸಿಬಿ ವಶಕ್ಕೆ ಪಡೆದ ದಿನದಿಂದಲೂ ಗೋಸಾವಿಯ ಹೆಸರು ಕೇಳಿ ಬರುತ್ತಲೇ ಇದೆ. ಆರ್ಯನ್ ಖಾನ್ ಅನ್ನು ಎನ್‌ಸಿಬಿ ವಶಕ್ಕೆ ಪಡೆದ ದಿನ ಗೋಸಾವಿ, ಆರ್ಯನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದ ಆ ಸೆಲ್ಫಿ ಬಹಳ ವೈರಲ್ ಆಗಿತ್ತು. ಗೋಸಾವಿ ತನ್ನನ್ನು ತಾನು ಖಾಸಗಿ ಡಿಟೆಕ್ಟಿವ್ ಎಂದು ಕರೆದುಕೊಂಡಿದ್ದು, ಈತನ ವಿರುದ್ಧ ಪುಣೆ, ಮುಂಬೈಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಆರ್ಯನ್ ಖಾನ್ ಬಂಧನವಾಗಿ ಅದರಲ್ಲಿ ಗೋಸಾವಿಯ ಹಸ್ತಕ್ಷೇಪದ ಬಗ್ಗೆ ಪ್ರಶ್ನೆಗಳು ಎದ್ದ ಬಳಿಕ ಗೋಸಾವಿ ತಲೆ ಮರೆಸಿಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರ ಬಳಿ ಸರೆಂಡರ್ ಆಗಲು ಯತ್ನಿಸಿ ವಿಫಲವಾಗಿದ್ದಾರೆ. ಇದೀಗ ಗೋಸಾವಿ ವಿರುದ್ಧ ಲುಕ್‌ಔಟ್ ನೊಟೀಸ್ ಜಾರಿ ಆಗಿದ್ದು, ಮುಂಬೈ ಪೊಲೀಸರು ಗೋಸಾವಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

    English summary
    Aryan Khan case: Inquiry against NCB officer Sameer Wankhede. Five members vigilant team arrived to Mumbai from Delhi to conduct inquiry.
    Wednesday, October 27, 2021, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X