For Quick Alerts
  ALLOW NOTIFICATIONS  
  For Daily Alerts

  ಆರ್ಯನ್ ಖಾನ್ ಪ್ರಕರಣ: ಎನ್‌ಸಿಬಿ ಅಧಿಕಾರಿ ಮೇಲೆ ಸಾಕ್ಷಿಯಿಂದಲೇ ಲಂಚದ ಆರೋಪ

  |

  ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನೆ-ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರ್ಯನ್ ಖಾನ್ ಬಂಧನದಲ್ಲಿ ಬಾಹ್ಯ ಪ್ರಭಾವಗಳು ಕೆಲಸ ಮಾಡುವ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೆ ಇದೀಗ ಪ್ರಕರಣದ ಸಾಕ್ಷಿಯೊಬ್ಬರು ಎನ್‌ಸಿಬಿ ಅಧಿಕಾರಿ ವಿರುದ್ಧ ದೊಡ್ಡ ಮೊತ್ತದ ಲಂಚದ ಆರೋಪ ಹೊರಿಸಿದ್ದಾನೆ.

  ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಎಂಟು ಕೋಟಿ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಕರಣದ ಸಾಕ್ಷಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ಈ ಆರೋಪವನ್ನು ಸಮೀರ್ ವಾಂಖೆಡೆ ಅಲ್ಲಗಳೆದಿದ್ದಾರೆ.

  ಆರ್ಯನ್ ಖಾನ್ ಪ್ರಕರಣದ ಸಾಕ್ಷ್ಯವಾಗಿರುವ ಪ್ರಭಾಕರ್ ಸಾಹಿಲ್, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಪ್ರಕರಣದ ಮತ್ತೊಬ್ಬ ಸಾಕ್ಷಿ, ಖಾಸಗಿ ಡಿಟೆಕ್ಟಿವ್ ಎಂದು ಹೇಳಲಾಗುತ್ತಿರುವ ಕೆಪಿ ಗೋಸಾವಿಯು ವ್ಯಕ್ತಿಯೊಬ್ಬರಿಂದ 50 ಲಕ್ಷ ಹಣ ಪಡೆದುದ್ದಾಗಿ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಕೋಟಿ ಹಣಕ್ಕೆ ಬೇಡಿಕೆ ಇಡಲು ಬೇರೊಬ್ಬ ವ್ಯಕ್ತಿಗೆ ಸೂಚಿಸಿದ್ದಾಗಿ ಹೇಳಿದ್ದಾರೆ.

  ಕ್ರೂಸ್ ಶಿಪ್‌ ಮೇಲೆ ದಾಳಿ ನಡೆಸಿ ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ಘಟನೆ ಬಗ್ಗೆ ವಿವರಿಸಿರುವ ಪ್ರಭಾಕರ್ ರೋಹೋಜಿ ಸಾಯಿಲ್, ''ತಾನು ಗೋಸಾವಿಯ ಬಾಡಿಗಾರ್ಡ್ ಮತ್ತು ಡ್ರೈವರ್ ಆಗಿದ್ದು, ಅಕ್ಟೋಬರ್ 01 ರಂದು ನನಗೆ ಕರೆ ಮಾಡಿದ ಕೆಪಿ ಗೋಸಾವಿ, ಅಕ್ಟೋಬರ್ 2 ಕ್ಕೆ ತಯಾರಿರುವಂತೆ ತಾನು ಹೇಳಿದರು. ಅಂತೆಯೇ ಲೊಕೇಶನ್ ಒಂದನ್ನು ಕಳಿಸಿದರು. ಅಕ್ಟೋಬರ್ 3 ರಂದು ಬೆಳಿಗ್ಗೆ ನಾನು ಲೊಕೇಶನ್‌ಗೆ ಹೋದೆ ಅದು ಎನ್‌ಸಿಬಿ ಕಚೇರಿಯಾಗಿತ್ತು. ಅಲ್ಲಿ ಗೋಸಾವಿ ಎನ್‌ಸಿಬಿ ಅಧಿಕಾರಿಯೊಟ್ಟಿಗೆ ಮಾತನಾಡುತ್ತಿದ್ದರು. ನನ್ನನ್ನು ಅಲ್ಲಿಯೇ ಕಾಯುವಂತೆ ಹೇಳಿ ಅವರು ಹೊರಗೆ ಹೋದರು'' ಎಂದಿದ್ದಾರೆ ಪ್ರಭಾಕರ್.

  ''ಆ ನಂತರ ಗೋಸಾವಿ ವಾಪಸ್ ಬಂದು ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದರು. ಎನ್‌ಸಿಬಿ ಕಚೇರಿಯಿಂದ ಸುಮಾರು 500 ಮೀಟರ್ ದೂರದಲ್ಲಿ ವ್ಯಕ್ತಿಯೊಬ್ಬರನ್ನು ಗೋಸಾವಿ ಭೇಟಿ ಆದರು. ಆ ವ್ಯಕ್ತಿಯ ಹೆಸರು ಸ್ಯಾಮ್ ಡಿಸೋಜಾ. ಐದು ನಿಮಿಷ ಆ ವ್ಯಕ್ತಿ ಜೊತೆ ಮಾತನಾಡಿ. ವಾಪಸ್ ಬಂದು ಕಾರು ಹತ್ತಿದರು. ಸ್ಯಾಮ್ ಡಿ ಸೋಜಾ ಕಾರನ್ನು ಫಾಲೋ ಮಾಡುವಂತೆ ಹೇಳಿದರು. ನಾನು ಡಿಸೋಜಾ ಕಾರಿನ ಹಿಂದೆ ಹೋಗುತ್ತಿದ್ದೆ. ಆಗ ಗೋಸಾವಿ, ಸ್ಯಾಮ್ ಡಿ ಸೋಜಾ ಬಳಿ ಫೋನಿನಲ್ಲಿ ಮಾತನಾಡುತ್ತಿದ್ದರು. ''ನೀನು 25 ಕೋಟಿಗೆ ಬಾಂಬ್ ಹಾಕು. ಕೊನೆಗೆ 18 ಕೋಟಿಗೆ ಸೆಟಲ್‌ಮೆಂಟ್ ಆಗಲಿ. ಎಂಟು ಕೋಟಿಯನ್ನು ಸಮೀರ್ ವಾಂಖೆಡೆಗೆ ಬೇರೆ ಕೊಡಬೇಕು'' ಎಂದು ಗೋಸಾವಿ ಫೋನಿನಲ್ಲಿ ಹೇಳುತ್ತಿದ್ದರು'' ಎಂದು ಪ್ರಭಾಕರ್ ಹೇಳಿದ್ದಾರೆ.

  ''ಆ ನಂತರ ಶಾರುಖ್ ಖಾನ್‌ರ ಮ್ಯಾನೇಜರ್ ಪೂಜಾ ದದ್ಲಾನಿ ಕಾರಿನಲ್ಲಿ ಬಂದರು. ಸ್ಯಾಮ್ ಡಿಸೋಜಾ, ಗೋಸಾವಿ ಹಾಗೂ ಪೂಜಾ ಮೂವರು ಕಾರಿನಲ್ಲಿಯೇ ಕುಳಿತು ಮಾತನಾಡಿಕೊಂಡರು. ಆ ನಂತರ ವ್ಯಕ್ತಿಯೊಬ್ಬರಿಂದ 50 ಲಕ್ಷ ಹಣವನ್ನು ಪಡೆದುಕೊಳ್ಳುವಂತೆ ಹೇಳಿದರು. ಅಂತೆಯೇ ನಾನು ಹೋಗಿ 50 ಲಕ್ಷ ಹಣವಿದ್ದ ಬ್ಯಾಗ್‌ಗಳನ್ನು ಪಡೆದುಕೊಂಡು ಅವನ್ನು ಗೋಸಾವಿಗೆ ಕೊಟ್ಟೆ. ಆ ನಂತರ ಅದರಲ್ಲಿ ತುಸು ಹಣ ತೆಗೆದುಕೊಂಡು ಉಳಿದ ಹಣವನ್ನು ಸ್ಯಾಮ್‌ಗೆ ಕೊಡುವಂತೆ ಗೋಸಾವಿ ಹೇಳಿದ ಅಂತೆಯೇ ನಾನು ತೆಗೆದುಕೊಂಡು ಹೋಗಿ ಕೊಟ್ಟೆ. ಸ್ಯಾಮ್ ಹಣ ಎಣಿಸಿದಾಗ ಅದರಲ್ಲಿ 36 ಲಕ್ಷ ಹಣ ಇತ್ತು'' ಎಂದು ಪ್ರಭಾಕರ್ ನಡೆದ ಘಟನೆಗಳನ್ನು ವಿವರಿಸಿದ್ದಾರೆ.

  ''ನಾನು ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದಾಗ ಆರ್ಯನ್ ಖಾನ್ ಅನ್ನು ಅಲ್ಲಿ ನೋಡಿದೆ. ಅಧಿಕಾರಿ ಸಮೀರ್ ಸಹ ಇದ್ದರು. ನಾನು ಅಲ್ಲಿಗೆ ಹೋದಾಗ ನನ್ನಿಂದ ಕೆಲವು ಸಹಿಗಳನ್ನು ತೆಗೆದುಕೊಳ್ಳುವಂತೆ ಸಮೀರ್ ವಾಂಖೆಡೆ ಇನ್ನೊಬ್ಬ ಅಧಿಕಾರಿಗೆ ಹೇಳಿದರು. ಸಾಲೇಕರ್ ಹೆಸರಿನ ಅಧಿಕಾರಿ ನನ್ನಿಂದ ಸುಮಾರು ಹತ್ತು ಖಾಲಿ ಕಾಗದ ಪತ್ರಗಳಿಗೆ ಸಹಿ ಮಾಡಿಸಿಕೊಂಡರು. ನನ್ನ ಆಧಾರ್ ಕಾರ್ಡ್ ಕೇಳಿದರು. ಆದರೆ ಅದು ನನ್ನ ಬಳಿ ಇರಲಿಲ್ಲ ಹಾಗಾಗಿ ವಾಟ್ಸ್‌ಆಪ್‌ ಮೂಲಕ ಅವರಿಗೆ ಸಾಫ್ಟ್ ಕಾಪಿ ಕಳಿಸಿದೆ'' ಎಂದು ಮಾಹಿತಿ ನೀಡಿದ್ದಾರೆ.

  ''ಕೆಪಿ ಗೋಸಾವಿ ಈಗ ನಾಪತ್ತೆಯಾಗಿದ್ದಾರೆ. ಎನ್‌ಸಿಬಿ ಅಧಿಕಾರಿಗಳು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದವರು ನನ್ನನ್ನು ಕೊಲ್ಲುತ್ತಾರೆ ಅಥವಾ ನಾಪತ್ತೆ ಆಗುವಂತೆ ಮಾಡುತ್ತಾರೆ ಎಂದು ನನಗೆ ಭಯವಾಗುತ್ತಿದೆ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಪ್ರಭಾಕರ್.

  ಅಕ್ಟೋಬರ್ 02ರಂದು ಆರ್ಯನ್ ಖಾನ್ ಅನ್ನು ಎನ್‌ಸಿಬಿ ವಶಕ್ಕೆ ಪಡೆದಾಗ ಕೆಪಿ ಗೋಸಾವಿಯು ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದ. ಆ ಚಿತ್ರ ಬಹಳ ವೈರಲ್ ಆಗಿತ್ತು. ಆ ನಂತರ ಎನ್‌ಸಿಬಿಯು ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿರುವ ವ್ಯಕ್ತಿ ಎನ್‌ಸಿಬಿ ಅಧಿಕಾರಿ ಅಲ್ಲವೆಂದು ಸ್ಪಷ್ಟನೆ ನೀಡಿತ್ತು. ಆ ಬಳಿಕ ಕೆಪಿ ಗೋಸಾವಿಯ ಬಗ್ಗೆ ಮಾಧ್ಯಮಗಳು ಮಾಡಿದ ತನಿಖೆಯಲ್ಲಿ ಗೋಸಾವಿಯ ವಿರುದ್ಧ ಕೆಲವು ವಂಚನೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂತು. ಪ್ರಸ್ತುತ ಗೋಸಾವಿ ನಾಪತ್ತೆಯಾಗಿದ್ದಾನೆ.

  English summary
  Aryan Khan case witness Prabhakar alleged that KP Gosavi took money and demand money along with Sam D'Soza and also reveal NCB official Sameer also have share.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X