ಬಾಲಿವುಡ್ ನಟ ರಣ್‌ಬೀರ್ ಕಪೂರ್ ವಿರುದ್ಧ ದೂರು
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್ದೇಶನದ 'ದಿ ಬಾ***ಡ್ಸ್ ಆಫ್ ಬಾಲಿವುಡ್' ವೆಬ್ ಸೀರಿಸ್‌ಗೆ ಸಂಕಷ್ಟ ಎದುರಾಗಿದೆ. ಮುಖ್ಯವಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಣ್‌ಬೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ. ರಣಬೀರ್ ಕಪೂರ್ ನಿಷಿದ್ಧ ಇ-ಸಿಗರೇಟ್ ಸೇದುವ ದೃಶ್ಯದಲ್ಲಿ ಡಿಸ್ಕ್ಲಮೇರ್ (ಸೂಕ್ತ ಎಚ್ಚರಿಕೆ ಫಲಕ) ಹಾಕಿಲ್ಲ ಎಂದು ಆರೋಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC)
ಕ್ರಮಕ್ಕೆ ಮುಂದಾಗಿದೆ.
ಭಾರತದಲ್ಲಿ ಇ-ಸಿಗರೇಟ್ ನಿಷಿದ್ಧ. ವೆಬ್ ಸೀರಿಸ್‌ನಲ್ಲಿರುವ ಈ ದೃಶ್ಯವು ಯುವಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಅಸ್ತಿತ್ವದಲ್ಲಿರುವ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯುವಕರನ್ನು ದಾರಿ ತಪ್ಪಿಸುತ್ತಿದೆ ಹಾಗೂ ಕಾನೂನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ, ಕಲಾವಿದರು, ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಕಠಿಣ ಕ್ರಮಕ್ಕೆ ದೂರುದಾರರು ಆಗ್ರಹಿಸಿದ್ದರು.

ಸೆಪ್ಟೆಂಬರ್ 18ರಂದು ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಬಾ***ಡ್ಸ್ ಆಫ್ ಬಾಲಿವುಡ್' ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಿತ್ತು. ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಮೊದಲ ಸೀಸನ್ 7 ಎಪಿಸೋಡ್‌ಗಳಾಗಿ ರಿಲೀಸ್ ಆಗಿದೆ. ಇದರ ಬೆನ್ನಲ್ಲೇ ರಣ್‌ಬೀರ್ ಕಾಣಿಸಿಕೊಂಡಿರುವ ದೃಶ್ಯದ ಬಗ್ಗೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ದೂರು ಸ್ವೀಕರಿಸಿದ NHRC, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆಯೋಗವು ಇಂತಹ ವಿಷಯವನ್ನು ನಿಷೇಧಿಸುವಂತೆ ಸಚಿವಾಲಯವನ್ನು ಒತ್ತಾಯಿಸಿದೆ. ಇ-ಸಿಗರೇಟ್‌ಗಳ ನಿಷೇಧ ಕಾಯಿದೆ 2019 ರ ಅಡಿಯಲ್ಲಿ ರಣಬೀರ್ ಕಪೂರ್, ಸರಣಿಯ ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರದ ಮೂಲಕ ಮನವಿ ಮಾಡಿದೆ.
"ಈ ಘಟನೆಯು ಇ-ಸಿಗರೇಟ್‌ಗಳ ನಿಷೇಧ ಕಾಯಿದೆ, 2019ರ ಸೆಕ್ಷನ್ 7 ರೊಂದಿಗೆ ಸೆಕ್ಷನ್ 4 ರ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಹೇಳಲಾಗಿದೆ. ಸೆಕ್ಷನ್ 4 ಇ-ಸಿಗರೇಟ್‌ಗಳ ಸಂಗ್ರಹಣೆ, ಬಳಕೆ ಮತ್ತು ಪ್ರಚಾರವನ್ನು ಯಾವುದೇ ರೂಪದಲ್ಲಿ ನಿಷೇಧಿಸುತ್ತದೆ, ಆದರೆ ಸೆಕ್ಷನ್ 7 ಇಂತಹ ನಿಷಿದ್ಧ ಉತ್ಪನ್ನಗಳನ್ನು ಜಾಹೀರಾತು ಮಾಡುವ ಅಥವಾ ಪ್ರಚಾರ ಮಾಡುವ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ದಂಡ ವಿಧಿಸುತ್ತದೆ ಎಂದು NHRC ಪತ್ರದಲ್ಲಿ ನಮೂದಿಸಲಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಮುಂಬೈ ಪೊಲೀಸರಿಂದ ಆಕ್ಷನ್ ಟೇಕನ್ ರಿಪೋರ್ಟ್ (ATR) ಅನ್ನು NHRC ಕೇಳಿದೆ. ಲಕ್ಷ್ಯ ಲಲ್ವಾನಿ, ಬಾಬಿ ಡಿಯೋಲ್, ರಾಘವ್ ಜುಯಲ್, ಸಾಹೆರ್ ಬಂಬಾ, ಮತ್ತು ಅನ್ಯಾ ಸಿಂಗ್ ಈ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ.
ರಣವೀರ್ ಸಿಂಗ್, ಶಾರುಖ್ ಖಾನ್, ಆಮೀರ್ ಖಾನ್, ಇಮ್ರಾನ್ ಹಶ್ಮಿ, ಅರ್ಷದ್ ವಾರ್ಸಿ, ದಿಶಾ ಪಠಾನಿ, ಅರ್ಜುನ್ ಕಪೂರ್, ಸಾರಾ ಅಲಿಖಾನ್, ವಿಶಾಲ್ ದದ್ಲಾನಿ, ಸಲ್ಮಾನ್ ಖಾನ್, ರಣಬೀರ್ ಕಪೂರ್ ಹಾಗೂ ಅರ್ಜುನ್ ಕಪೂರ್ ಸೇರಿದಂತೆ ಬಾಲಿವುಡ್ ಖ್ಯಾತನಾಮರು ವೆಬ್ ಸೀರಿಸ್‌ನಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.


Click it and Unblock the Notifications











