''ಸ್ಟಾರ್ ಆದವರೆಲ್ಲ ಈ ಕೆಲಸ ಮಾಡಿಯೇ ಬೆಳೆದಿದ್ದು,ನೀನು ಒಪ್ಕೋ''- ಬ್ರೈನ್ ವಾಶ್ ಮಾಡಿ ಮಂಚಕ್ಕೆ ಕರಿತಾರೆ ಎಂದ ನಟಿ..!
ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿಯೇ, ವರ್ಷದ ಹಿಂದೆ ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂಗೆ ಮತ್ತೆ ಜೀವ ಬಂದಂತಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಇತ್ತೀಚೆಗೆ ಅನೇಕ ನಾಯಕಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.
ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಚಿತ್ರರಂಗದ ಇನ್ನೊಂದು ಮುಖದ ಪರಿಚಯವನ್ನು ಮಾಡಿಸುವ ಮೂಲಕ ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಸದ್ಯದ ಸಮಾಚಾರ ಏನೆಂದರೆ ಬಾಲಿವುಡ್‌ನ ನಟಿ ಮತ್ತು ಕಿರುತೆರೆಯ ನಾಯಕಿ ಆಶಾ ನೇಗಿ ಕೂಡ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗ ಹತ್ತುವಂತೆ ಬಹುತೇಕ ನನ್ನ ಬ್ರೈನ್ ವಾಶ್ ಮಾಡಿದ್ದರು ಎಂದು ಹೇಳಿದ್ದಾರೆ.

ಹೌದು, ಪವಿತ್ರ ರಿಶ್ತಾ ಧಾರಾವಾಹಿಯ ಮೂಲಕ ಪ್ರಸಿದ್ದರಾದ ಆಶಾ ನೇಗಿ ಆ ನಂತರ ಶುಭ ವಿವಾಹ, ಪುನರ್ ವಿವಾಹ ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿದ್ದರು. ಹಿಂದಿಯ ಬಿಗ್ ಬಾಸ್ ನ ಆರನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿದ್ದರು. ಫೈನಲ್ ಹಂತದವರೆಗೆ ತಲುಪಿದ್ದರು. ಆ ನಂತರ ಕುಂಕುಮ್ ಭಾಗ್ಯ ಸೇರಿ ಹಲವು ಧಾರಾವಾಹಿಯಲ್ಲಿ ಅಭಿನಯಿಸಿದ ಆಶಾ ನೇಗಿ ಅನುರಾಗ್ ಬಸು ನಿರ್ದೇಶನದ ಲುಡೋ ಚಿತ್ರದ ಮೂಲಕ ಬೆಳ್ಳಿ ತೆರೆಯನ್ನು ಕೂಡ ಪ್ರವೇಶಿಸಿದರು.
ಇಂಥಾ ಆಶಾ ನೇಗಿ ಸದ್ಯ ತಮ್ಮ ಬದುಕಿನಲ್ಲಿ ಎದುರಾದ ವ್ಯಕ್ತಿಯೊಬ್ಬರ ಬಗ್ಗೆ ಮಾತನಾಡಿದ್ದಾರೆ. ಅವಕಾಶಕ್ಕೆ ಅಲೆಯುತ್ತಿದ್ದ ಸಂದರ್ಭದಲ್ಲಿ ಚೂರೇ ಚೂರು ಯಾಮಾರಿದ್ದರೂ ಕಾಸ್ಟಿಂಗ್ ಕೌಚ್ ಖೆಡ್ಡಾಗೆ ನಾನು ಬೀಳುತ್ತಿದ್ದೆ ಎಂದು ಹೇಳಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಆಶಾ ನೇಗಿ ನನಗೆ ಆಗಿನ್ನೂ ಕೇವಲ 20ರ ಹರೆಯ. ಅವಕಾಶದ ಹುಡುಕಾಟ ನಡೆಸಿದ್ದ ನನಗೆ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಆ ವ್ಯಕ್ತಿಯ ಜೊತೆ ಕಿರುತೆರೆಯಲ್ಲಿ ಸಿಗಬಹುದಾದ ಅವಕಾಶದ ಕುರಿತು ಮಾತನಾಡುವ ಸಮಯದಲ್ಲಿ ಆತ ನನ್ನ ಬ್ರೈನ್ ವಾಶ್ ಮಾಡುವ ಪ್ರಯತ್ನವನ್ನು ಮಾಡಲು ಶುರು ಮಾಡಿದ ಎಂದು ಹೇಳಿದ್ದಾರೆ. ಉದ್ಯಮದಲ್ಲಿ ಕೆಲಸ ನಡೆಯುವುದು ಹೀಗೆಯೇ, ಈ ಕೆಲಸ ಮಾಡಿದರೆ ಇಲ್ಲಿ ಮುಂದುವರೆಯಬಹುದು, ಬೆಳೆಯಬಹುದು ಎಂದು ಆತ ಹೇಳಿದ ಇಷ್ಟೇ ಅಲ್ಲ ದೊಡ್ಡ ದೊಡ್ಡವರು ಹೀಗೆ ಮಾಡಿಯೇ ಬೆಳೆದಿದ್ದು, ಸ್ಟಾರ್ ಆಗಿದ್ದು ಎಂದು ನನಗೆ ಆ ವ್ಯಕ್ತಿ ಹೇಳಿದ್ದ ಎಂದು ಹೇಳಿದ್ದಾರೆ ಆಶಾ ನೇಗಿ.
ನಿಜಾ, ಆ ವ್ಯಕ್ತಿ ಎಲ್ಲಿಯೂ ರಾಜಿ ಮಾಡಿಕೊಳ್ಳಬೇಕು, ಪಾತ್ರಕ್ಕಾಗಿ ಪಲ್ಲಂಗವೇರಬೇಕು ಎಂದು ಹೇಳಿಲ್ಲವಾದರೂ, ಆತನ ಉದ್ದೇಶ ನನಗೆ ಅರ್ಥವಾಗಿತ್ತು ಎಂದಿರುವ ಆಶಾ ನೇಗಿ ಆ ನಂತರ ನನಗೆ ಈ ಕೆಲಸದಲ್ಲಿಯೇ ಆಸಕ್ತಿ ಇಲ್ಲ ಎಂದು ಹೇಳಿ ಅಲ್ಲಿಂದ ಬಂದು ಬಿಟ್ಟೆ ಎಂದು ಹೇಳಿದ್ದಾರೆ.
ಇನ್ನೂ ತಮಗಾದ ಈ ಅನುಭವವನ್ನು ತನ್ನ ಸ್ನೇಹಿತನಲ್ಲಿ ಹಂಚಿಕೊಂಡಾಗ ನನ್ನ ಸ್ನೇಹಿತ ಗಾಬರಿಯಾಗಲಿಲ್ಲ. ಬದಲಿಗೆ ಇಲ್ಲಿ ಇದೆಲ್ಲ ಮಾಮೂಲು ಅದರಲ್ಲೇನಿದೆ ಎಂದು ನನ್ನನ್ನೇ ಕೇಳಿದ, ಆಗ ನನಗೆ ನಿಜಕ್ಕೂ ಆಶ್ಚರ್ಯವಾಗಿತ್ತು ಎಂದು ಆಶಾ ನೇಗಿ ಹೇಳಿದ್ದಾರೆ. ಸದ್ಯಕ್ಕೆ ಆಶಾ ನೇಗಿ ಕಿರುತೆರೆಯಿಂದ ವೆಬ್ ಸರಣಿಗಳತ್ತ ಗಮನ ಕೊಡ್ತಿದ್ದಾರೆ. ಇವರು ಅಭಿನಯಿಸಿರುವ ಹನಿಮೂನ್ ಫೋಟೋಗ್ರಾಫರ್ ವೆಬ್ ಸರಣಿ ಕಳೆದ ಸೆಪ್ಟೆಂಬರ್ 27ರಿಂದ ಜೀಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











