ಕೆಲಸ ಕೊಡ್ತೀವಿ, ಆದರೆ ನಮಗೇನು ಕೊಡ್ತೀಯಾ ; ಚಿತ್ರರಂಗದಲ್ಲಿ 50ರಲ್ಲಿ 10 ಜನ ವಿಕೃತ ವ್ಯಕ್ತಿಗಳೇ ಸಿಕ್ತಾರೆ
ಕಂಡ ಕನಸು ಇನ್ನೇನು ನನಸಾಗಬೇಕು.. ಅಷ್ಟರಲ್ಲಿ ಸ್ವಾಭಿಮಾನವನ್ನೇ ಅಡ ಇಡಬೇಕಾದ ಪ್ರಸಂಗ ಎದುರಾದರೆ ಹೇಗಾಗಬೇಡ..? ಹೀಗೆ ಕಣ್ಣಲ್ಲಿ ಕನಸೊತ್ತ ಅಸಂಖ್ಯಾತ ಯುವ ಪ್ರತಿಭಾವಂತರಿಗೆ ಚಿತ್ರರಂಗದ ಗ್ಲಾಮರ್ ಲೋಕ, ಮಾಯಾಜಾಲದಂತೆ ಕಾಣುತ್ತೆ. ಆದರೆ, ವಾಸ್ತವದಲ್ಲಿ ಕಣ್ಸೆಳೆಯುವ ಈ ಬೆಳಕಿನ ಹಿಂದೆ ಹಲವರ ಕನಸನ್ನು ಹೊಸಕಿ ಹಾಕುವ ಕತ್ತಲೆಯ ಜಗತ್ತು ಕೂಡ ಇದೆ. ಚಿತ್ರರಂಗದ ಭಾಷೆಯಲ್ಲಿ ಈ ಜಗತ್ತನ್ನು ಕಾಸ್ಟಿಂಗ್ ಕೌಚ್ ಎಂದು ಕರೆಯುತ್ತಾರೆ. ಹಲವರು ಇಲ್ಲಿ ಪಾತ್ರಕ್ಕಾಗಿ ಪಲ್ಲಂಗದ ಈ ಸಂಸ್ಕೃತಿಯಿಂದ ನರಳಿದ್ದಾರೆ. ಕಣ್ಣೀರು ಹಾಕಿದ್ಧಾರೆ. ಆ ಪೈಕಿ ಆಶಿ ಸಿಂಗ್ ಕೂಡ ಒಬ್ಬರು.
ಹೌದು, ಆಶಿ ಸಿಂಗ್.. ಉತ್ತರ ಪ್ರದೇಶದ ಚೆಲುವೆ. ಯಾವ ಗಾಡ್ ಫಾದರ್ ಇಲ್ಲದೇ, ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಕನಸೆಂಬ ಕುದುರೆಯ ಬೆನ್ನೇರಿದ ಆಶಿ ''ಸೀಕ್ರೆಟ್ ಡೈರೀಸ್: ದಿ ಹಿಡನ್ ಚಾಪ್ಟರ್ಸ್'' ಮೂಲಕ ಕಿರುತೆರೆಯನ್ನು ಪ್ರವೇಶಿಸಿದರು. 2017ರಲ್ಲಿ ''ಯೇ ಉನ್ ದಿನೋ ಕಿ ಬಾತ್ ಹೈ'' ಧಾರಾವಾಹಿಯ ಮೂಲಕ ಉತ್ತರ ಭಾರತದೆಲ್ಲೆಡೆ ಮನೆ ಮಾತಾದರು.

''ಅಲ್ಲಾದೀನ್ - ನಾಮ್ ತೋ ಸುನಾ ಹೋಗಾ'' ಇವರ ಜನಪ್ರಿಯತೆಯನ್ನು ಹೆಚ್ಚಿಸಿದ ಮತ್ತೊಂದು ಧಾರಾವಾಹಿ. ''ಮೀತ್: ಬದ್ಲೇಗಿ ದುನಿಯಾ ಕಿ ರೀತ್'' ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡ ಆಶಿ, ''ಖೈದಿ ಬ್ಯಾಂಡ್'' ಚಿತ್ರದ ಮೂಲಕ ಬೆಳ್ಳಿತೆರೆಗೆ ಕೂಡ ಬಂದರು.
ಇಂಥಾ ಆಶಿ ಸಿಂಗ್ ತಮ್ಮ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಕೆಲಸ ಸಿಗುತ್ತೆ, ಆದರೆ ಬದಲಿಗೆ ನೀನೇನು ಕೊಡ್ತೀಯಾ ಎಂದು ಇಲ್ಲಿ ಕೇಳುವವರು ತುಂಬಾ ಜನ ಇದ್ದಾರೆ ಎಂದಿದ್ದಾರೆ. ಈ ಕುರಿತು ''ಟೆಲಿ ಮಸಾಲಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಶಿ ಸಿಂಗ್, ಕೆರಿಯರ್‌ನ ಆರಂಭದಲ್ಲಿ ತಮಗೆ ನಟನೆಯ ಅವಕಾಶ ನೀಡುವುದಾಗಿ ನಂಬಿಸಿ ಹತ್ತಾರು ನಕಲಿ ಕರೆಗಳು ಬರುತ್ತಿದ್ದವು ಎಂದು ಹೇಳಿದ್ಧಾರೆ. ಕೇವಲ ಹಣ ಲೂಟಿ ಮಾಡುವ ಉದ್ದೇಶದಿಂದಲೇ ಇಂತಹ ನಕಲಿ ಆಡಿಷನ್‌ಗಳಿಗೆ ತಮ್ಮನ್ನು ಕರೆಯಲಾಗುತ್ತಿತ್ತು ಎಂದಿದ್ಧಾರೆ.
ಆಡಿಷನ್ ನೆಪದಲ್ಲಿ ನಟಿಯರ ಜೊತೆ ಅತ್ಯಂತ ಕೀಳು ಮಟ್ಟದ ಹಾಗೂ ಚೀಪ್ ಮಾತುಗಳನ್ನಾಡುವ ಜನರೂ ಅಲ್ಲಿರುತ್ತಿದ್ದರು ಎಂದು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿರುವ ಆಶಿ ಸಿಂಗ್, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸಂಸ್ಕೃತಿ ಇರುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.
ಅವಕಾಶಕ್ಕೆ ರಾಜಿ ಮಾಡಿಕೊಳ್ಳಬೇಕೆಂಬ ನಿಯಮಕ್ಕೆ ಇಲ್ಲಿ ಹಲವರು ಈಗಾಗಲೇ ಬಲಿಯಾಗಿದ್ದಾರೆ ಎಂದು ಹೇಳಿರುವ ಆಶಿ ಸಿಂಗ್, ಇನ್ನು ಕೆಲವರಿಗೆ ಇವೆಲ್ಲಾ ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಕನಸೊತ್ತು ಬರುವ ಹಲವರಿಗೆ ವೃತ್ತಿಜೀವನದ ಆರಂಭದಲ್ಲಿ, ಇಂಡಸ್ಟ್ರಿಯ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರುವುದಿಲ್ಲ. ಈ ಅಲ್ಪಜ್ಞಾನವನ್ನೇ ಬಂಡವಾಳ ಮಾಡಿಕೊಳ್ಳುವ ವಿಕೃತ ಮನಸ್ಸಿನ ಜನ ಇಲ್ಲಿ ಹೊಸಬರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿರುವ ಆಶಿ ಸಿಂಗ್, ನನ್ನ ವೃತ್ತಿ ಬದುಕಿನ ಆರಂಭದಲ್ಲಿ ನನಗೆ ಅಸಹ್ಯ ಹುಟ್ಟಿಸುವಂತಹ ವಿಕೃತ ಮನಸ್ಥಿತಿಯ ಹಲವಾರು ಜನ ಸಿಕ್ಕಿದ್ದರು ಎಂದಿದ್ದಾರೆ.
50 ಕಡೆ ಆಡಿಷನ್‌ಗೆ ಹೋದರೆ, ಅಲ್ಲಿ ಕನಿಷ್ಠ 10 ಜನ ಆದರೂ ಇಂತಹ ಕೀಳು ಮನಸ್ಥಿತಿಯವರೇ ಇರುತ್ತಾರೆ ಎಂದು ಹೇಳಿರುವ ಆಶಿ ಸಿಂಗ್, ಅಂಥವರು ನೇರವಾಗಿ ಮುಖದ ಮೇಲೆ ಹೊಡೆದಂತೆ, ನಾವು ನಿನಗೆ ಕೆಲಸ ಕೊಡಿಸುತ್ತೇವೆ, ಆದರೆ ಅದಕ್ಕೆ ಪ್ರತಿಯಾಗಿ ನೀನು ನಮಗೇನು ಕೊಡುತ್ತೀಯಾ? ಎಂದು ಕೇಳುತ್ತಾರೆ ಎಂದಿದ್ಧಾರೆ.
ಇಂತಹ ಕೀಳು ಮಟ್ಟದ ಪ್ರಶ್ನೆಗಳಿಗೆ ನನ್ನಲ್ಲಿ ಪ್ರತಿಭೆ ಇದೆ, ನಾನು ನನ್ನ ನಟನೆಯ ಮೂಲಕವೇ ಕೆಲಸ ಮಾಡಿ ತೋರಿಸುತ್ತೇನೆ ಎಂದು ಅವರಿಗೆ ಉತ್ತರ ನೀಡಿದ್ದೇ ಎಂದು ಹೇಳಿರುವ ಆಶಿ ಸಿಂಗ್, ನನ್ನ ಈ ಮಾತಿಗೆ ಇಂಡಸ್ಟ್ರಿಯಲ್ಲಿ ಕೆಲಸ ಹೇಗೆ ನಡೆಯುತ್ತದೆ ಎಂಬುದು ನಿನಗೆ ಗೊತ್ತಿಲ್ಲಮ್ಮ ಎಂದು ಎಂದು ಉಡಾಫೆಯಿಂದ ನಗುತ್ತಿದ್ದರು ಎಂದು ಆ ದಿನಗಳ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ.
ಇಂಡಸ್ಟ್ರಿಯಲ್ಲಿ ಹಾಗೆಯೇ ಕೆಲಸ ನಡೆಯುತ್ತಿರಬಹುದು, ನನಗೆ ಗೊತ್ತಿಲ್ಲ. ಆದರೆ, ಒಂದು ವೇಳೆ ನಾನು ಕೆಲಸ ಗಿಟ್ಟಿಸಿಕೊಳ್ಳಲು ಇಂತಹ ಕೀಳು ಹಾದಿ ಹಿಡಿಯಬೇಕೆಂದರೆ, ನನಗೆ ಈ ಉದ್ಯಮದಲ್ಲಿ ಕೆಲಸ ಮಾಡುವುದೇ ಬೇಡ ಎಂದು ನಾನು ಅವರಿಗೆ ಹೇಳಿದ್ದೇ ಎಂದು ಹೇಳಿರುವ ಆಶಿ ಸಿಂಗ್ ನನ್ನ ಎಲ್ಲವನ್ನೂ ಪಣಕ್ಕಿಟ್ಟು, ರಾಜಿ ಮಾಡಿಕೊಂಡು, ಕೆಲಸ ಗಿಟ್ಟಿಸಿಕೊಳ್ಳುವ ಹಂತಕ್ಕೆ ಹೋಗಲು ನಾನು ತಯಾರಿಲ್ಲ ಎಂದು ಹೇಳಿದ್ಧಾರೆ.
ಹಳೆಯ ಈ ಕಹಿ ಘಟನೆಗಳಿಂದ ಈಗ ಪಾಠ ಕಲಿತಿರುವ ಆಶಿ ಸಿಂಗ್, ಈಗ ಚಿತ್ರರಂಗದಲ್ಲಿ ಉತ್ತಮ ಜನರ ಒಡನಾಟ ಇದೆ. ಈಗ ನಾನು ತುಂಬಾ ಒಳ್ಳೆಯ ಜನರ ಜೊತೆ ಸಂಪರ್ಕದಲ್ಲಿದ್ದೇನೆ. ಈಗ ನನಗೆ ಯಾವುದೇ ಪ್ರಾಜೆಕ್ಟ್ ಅಥವಾ ಆಡಿಷನ್ ಬಗ್ಗೆ ಅಲ್ಪ ಅನುಮಾನ ಬಂದರೂ, ತಕ್ಷಣವೇ ನನ್ನ ಆಪ್ತರಲ್ಲಿ ವಿಚಾರಿಸಿ ಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ಧಾರೆ.
ಇಂತಹ ವಂಚಕರಿಗೆ ಯಾವುದೇ ಬೆಲೆ ಕೊಡದೆ, ಅಲ್ಲಿಂದ ತಕ್ಷಣ ಹೊರನಡೆಯುವುದೇ ಬುದ್ಧಿವಂತಿಕೆ ಎಂದು ಅನುಭವದ ಪಾಠವನ್ನು ಕೂಡ ಮಾಡಿರುವ ಆಶಿ ಸಿಂಗ್, ಕೇವಲ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ನಕಲಿ ಆಡಿಷನ್‌ಗಳ ಜಾಲಕ್ಕೆ ಬೀಳದಂತೆ ಮನವಿಯನ್ನು ಮಾಡಿಕೊಂಡಿದ್ಧಾರೆ. ಯಾವುದೇ ಸಂದರ್ಭದಲ್ಲೂ ಪ್ರತಿಭೆಯನ್ನು ನಂಬಬೇಕೇ ಹೊರತು, ಶೋಷಣೆಗೆ ಒಳಗಾಗಬೇಡಿ ಎಂಬ ಸಂದೇಶವನ್ನು ತಮ್ಮ ಈ ಸಂದರ್ಶನದ ಮೂಲಕ ಇಡೀ ಇಂಡಸ್ಟ್ರಿಗೆ ರವಾನಿಸಿದ್ದಾರೆ.


Click it and Unblock the Notifications