ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರರಂಗದಲ್ಲಿ ಸೂತಕದ ಛಾಯೆ, ಶೋಲೆಯ ಜೈಲರ್ ಅಸ್ರಾನಿ ಇನ್ನೂ ನೆನಪು ಮಾತ್ರ
ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಹೀಗೆ
ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ...
ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ.ಹೀಗಿರುವಾಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು ಇಂದು (ಅಕ್ಟೋಬರ್ 20) ಭಾರತೀಯ ಚಿತ್ರರಂಗದ ಶ್ರೇಷ್ಠ ಹಾಸ್ಯ ಕಲಾವಿದ ಮತ್ತು ನಟರಲ್ಲಿ ಒಬ್ಬರಾಗಿದ್ದ ಗೋವರ್ಧನ್ ಅಸ್ರಾನಿ ಕೊನೆಯುಸಿರೆಳೆದಿದ್ದಾರೆ.

ಭಾರತದ ಸಾರ್ವಕಾಲಿಕ ಚಿತ್ರಗಳಲ್ಲೊಂದಾದ ''ಶೋಲೆ'' ಚಿತ್ರದ ಜೈಲರ್ ಪಾತ್ರದ ಮೂಲಕ ಜಗದ್ವಿಖ್ಯಾತಿಯನ್ನು ಗಳಿಸಿದ್ದ ಗೋವರ್ಧನ್ ಅಸ್ರಾನಿ ಮೂಲತಃ ರಾಜಸ್ಥಾನದ ಜೈಪುರದ ನಿವಾಸಿಯಾಗಿದ್ದರು. ಇನ್ನೂ ಇಳಿ ವಯಸ್ಸಿನಲ್ಲಿ ಕೂಡ ಅದೇ ಉತ್ಸಾಹ ಮತ್ತು ಹುಮ್ಮಸ್ಸಿನಲ್ಲಿ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ 84 ವರ್ಷದ ಇಸ್ರಾನಿ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ ಸೋಶಿಯಲ್ ಮೀಡಿಯಾ ಹಿಂಬಾಲಕರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ದೀಪಾವಳಿನ ಹಬ್ಬದ ಶುಭಾಶಯವನ್ನು ಕೋರಿದ್ದರು.
ವರದಿಗಳ ಪ್ರಕಾರ ಇಂದು ಸಂಜೆ 4ರವರೆಗೆ ಅಸ್ರಾನಿ ಆರೋಗ್ಯವಾಗಿಯೇ ಇದ್ದರು. ಆದರೆ 4ಘಂಟೆಯ ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸ್ರಾನಿ ಕೊನೆಯುಸಿರೆಳೆದರು.
ಭಾರತೀಯ ಚಿತ್ರರಂಗಕ್ಕೆ ಐದು ದಶಕಕ್ಕೂ ಅಧಿಕ ಸೇವೆ ಸಲ್ಲಿಸಿದ ಅಸ್ರಾನಿ ಅವರು 350ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಪೈಕಿ ಅಮಿತಾಬ್ ಬಚ್ಚನ್.. ಧಮೇಂದ್ರ..ಹೇಮಾಮಾಲಿನಿ ಮತ್ತು ಜಯಾ ಬಚ್ಚನ್ ಅಭಿನಯದ ''ಶೋಲೆ''ಯ ಜೈಲರ್ ಪಾತ್ರ ಇವರಿಗೆ ಅಪಾರವಾದ ಕೀರ್ತಿ ಮತ್ತು ಹೆಸರು ತಂದು ಕೊಟ್ಟಿತ್ತು.
ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತರಬೇತಿ ಪಡೆದು 1960ರ ಸುಮಾರು ಚಿತ್ರರಂಗ ಪ್ರವೇಶ ಮಾಡಿದ್ದ ಅಸ್ರಾನಿ ಆರಂಭದಲ್ಲಿ ಗಂಭೀರವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಆದರೆ.1908ರ ದಶಕದ ನಂತರ ಹಾಸ್ಯ ಕಲಾವಿದನಾಗಿ ಹೊರ ಹೊಮ್ಮಿದ ಅಸ್ರಾನಿ, ''ಶೋಲೆ''.. ''ಚುಪ್ಕೆ ಚುಪ್ಕೆ''.. ತೀರಾ ಇತ್ತೀಚಿನ ಚಿತ್ರಗಳಾದ ''ಧಮಾಲ್''.. ''ಭಾಘಂ ಭಾಘ್''.. ''ಬಂಟಿ ಔರ್ ಬಬ್ಲಿ''.. ''ಆಲ್ ದಿ ಬೆಸ್ಟ್''.. ''ಭೂಲ್ ಭುಲಯ್ಯಾ''.. ''ವೆಲ್‌ಕಂ'' ಸೇರಿದಂತೆ ಹಲವು ಚಿತ್ರಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದರು.
ಗುಜರಾತಿ ಮತ್ತು ರಾಜಸ್ಥಾನಿ ಚಿತ್ರಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೂಡ ಕೆಲಸ ಮಾಡಿದ್ದ ಅಸ್ರಾನಿ ಹಿಂದಿ ಮತ್ತು ಗುಜರಾತಿ ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನ ಸ್ಥಾನವನ್ನು ಕೂಡ ಅಲಂಕರಿಸಿದ್ದರು''ಆಜ್ ಕಿ ತಾಜಾ ಖಬರ್'' ಮತ್ತು ''ನಮಕ್ ಹರಾಮ್'' ಚಿತ್ರಗಳ ಚಿತ್ರೀಕರಣ ಸಮಯದಲ್ಲಿ ಸಹ ನಟಿ ಮಂಜು ಬನ್ಸಲ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದ ಗೋವರ್ಧನ್ ಅಸ್ರಾನಿ ತಮ್ಮ ಪತ್ನಿ ಮಂಜು ಬನ್ಸಲ್ ಮತ್ತು ಅವರ ಮಗ ನವೀನ್ ಅಸ್ರಾನಿ ಅವರನ್ನು ಅಗಲಿದ್ದಾರೆ.
ಇನ್ನು ''ಎಎನ್‌ಐ'' ವರದಿಯಂತೆ ಗೋವರ್ಧನ್ ಅಸ್ರಾನಿ ತಮ್ಮ ಸಾವಿನ ಸುದ್ದಿಯನ್ನು ಚಿತ್ರರಂಗದ ಯಾರ ಜೊತೆ ಕೂಡ ಹಂಚಿಕೊಳ್ಳದಂತೆ ಅವರ ಪತ್ನಿ ಮಂಜು ಬನ್ಸಲ್ ಅವರ ಬಳಿ ಮಾತು ಪಡೆದಿದ್ದರು. ಈ ಹಿನ್ನೆಲೆ ಅಸ್ರಾನಿ ಅವರ ನಿಧನದ ವಿಚಾರ ಗೌಪ್ಯವಾಗಿ ಇಟ್ಟಿದ್ದ ಕುಟುಂಬ ಮುಂಬೈನ ಸಾಂಟಾಕ್ರೂಜ್ ಸ್ಮಶಾನದಲ್ಲಿ ಅಸ್ರಾನಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದೆ. ಈ ಸಮಯದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಎಂದು ''ಎಎನ್‌ಐ'' ವರದಿಯಲ್ಲಿ ತಿಳಿಸಿದೆ.
ಗೋವರ್ಧನ್ ಅಸ್ರಾನಿ ಅವರ ನಿಧನದ ಸುದ್ದಿ ತಿಳಿದು ಆಘಾತಕ್ಕೀಡಾಗಿರುವ ಹಿಂದಿ ಉದ್ಯಮ ಅಗಲಿದ ಹಿರಿಯ ಕಲಾವಿದನನ್ನು ನೆನೆದು ಕಣ್ಣೀರು ಹಾಕಿದೆ. ಸಂತಾಪವನ್ನು ಸೂಚಿಸಿದೆ.


Click it and Unblock the Notifications











